ಪ್ರವೇಶ ನಿರಾಕರಣೆ ಕಾನೂನು ಬದ್ಧವಾಗಿರುತ್ತದೆ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ವಿದ್ಯಾರ್ಥಿ ಶ್ರೇಯಸ್ ಮೂಲಿಮನಿಗೆ ಎಲ್​ಎಲ್​ಬಿ 3ನೇ ಸೆಮಿಸ್ಟರ್​ಗೆ ಪ್ರವೇಶ ನಿರಾಕರಣೆ ಮಾಡಿರುವುದು ಕಾನೂನು ಬದ್ಧವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ತಿಳಿಸಿದೆ.

ವಿವಿ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಕರ್ನಾಟಕ ಕಾನೂನು ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಮಂಜುನಾಥ ಹೊಂಗಲ ನೀಡಿದ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿರುವವ ವಿವಿ, ಐದು ವರ್ಷದ ಬಿಎ ಎಲ್​ಎಲ್​ಬಿ/ಬಿಬಿಎ ಎಲ್​ಎಲ್​ಬಿ ಹಾನರ್ಸ್ ರೆಗ್ಯೂಲೇಶನ್ ಪ್ರಕಾರ ಕಾನೂನು ಶಾಲೆಗೆ ಪ್ರವೇಶ ಪಡೆದ ವಿದ್ಯಾರ್ಥಿಯು ಪ್ರತಿ ಸೆಮಿಸ್ಟರ್​ಗೆ 5 ವಿಷಯಗಳಂತೆ ಒಂದು ವರ್ಷಕ್ಕೆ ಎರಡು ಸೆಮಿಸ್ಟರ್ ಒಳಗೊಂಡು 10 ವಿಷಯಗಳಲ್ಲಿ 7ರಲ್ಲಿ ಕಡ್ಡಾಯವಾಗಿ ಉತ್ತೀರ್ಣನಾಗಿದ್ದರೆ ಮಾತ್ರ ಮುಂದಿನ ತರಗತಿಗೆ ಬಡ್ತಿ ಪಡೆಯುತ್ತಾನೆ ಎಂದು ತಿಳಿಸಿದೆ.

ಶ್ರೇಯಸ್ ಮೂಲಿಮನಿ ಒಂದನೇ ಸೆಮಿಸ್ಟರ್​ನ ಐದು ವಿಷಯಗಳಲ್ಲಿ, ನಾಲ್ಕರಲ್ಲಿ ಅನುತ್ತೀರ್ಣಗೊಂಡಿರುತ್ತಾನೆ ಮತ್ತು ಎರಡನೇ ಸೆಮಿಸ್ಟರ್​ನಲ್ಲಿ ಐದು ವಿಷಯಗಳಲ್ಲಿ ಉತ್ತೀರ್ಣಗೊಂಡಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವಾದ ಪತ್ರದಲ್ಲಿ ಮಂಡಿಸಿರುತ್ತಾನೆ. ಪತ್ರಿಕಾ ಹೇಳಿಕೆಯಲ್ಲಿ ಎರಡು ಸೆಮಿಸ್ಟರ್ ಸೇರಿ ಏಳು ವಿಷಯಗಳಲ್ಲಿ ಉತ್ತೀರ್ಣಗೊಂಡಿರುವುದಾಗಿ ತಪ್ಪು ಮಾಹಿತಿಯನ್ನು ಒದಗಿಸಿರುತ್ತಾನೆ. ಇದಕ್ಕೆ ಸಂಬಂಧಪಟ್ಟ ಅಂಕಪಟ್ಟಿಗಳು ಹಾಗೂ ದಾಖಲೆಗಳು ವಿವಿಯ ಪರೀಕ್ಷಾಂಗ ಕಚೇರಿಯಲ್ಲಿ ಲಭ್ಯವಿರುತ್ತದೆ ಎಂದು ಹೇಳಿದೆ.

3ನೇ ಸೆಮಿಸ್ಟರ್​ಗೆ ಪ್ರವೇಶ ನಿರಾಕರಣೆಯನ್ನು ಪ್ರಶ್ನಿಸಿ ಶ್ರೇಯಸ್ ಮೂಲಿಮನಿ ಧಾರವಾಡದ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಉಚ್ಚ ನ್ಯಾಯಾಲಯವು ವಿವಿ ಕ್ರಮವನ್ನು ಎತ್ತಿ ಹಿಡಿಯುವುದರೊಂದಿಗೆ ವಿದ್ಯಾರ್ಥಿಯ ಅರ್ಜಿಯನ್ನು ವಜಾಗೊಳಿಸಿದೆ ಎಂದು ವಿಶ್ವವಿದ್ಯಾಲಯದ ಪ್ಯಾನಲ್ ಅಡ್ವೋಕೇಟ್ ತಿಳಿಸಿರುತ್ತಾರೆ. ಈ ರೀತಿ ವಿವಿ ಯ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ವಿದ್ಯಾರ್ಥಿಗಳು ನಡೆದುಕೊಂಡರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ವಿವಿ ಎಚ್ಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net