

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಕೃಷಿ ನೀರಾವರಿ ಪಂಪು ಸೆಟ್‌ಗಳಿಗೆ ಆಧಾರ್ ಜೋಡಣೆಗೆ ಸಂಬಂಧಿಸಿ 10,000 ರೂ. ಶುಲ್ಕ ಸ್ವೀಕರಿಸಲಾದ ಬಗ್ಗೆ ಪತ್ರಿಕಾ ವರದಿ ಪ್ರಕಟಗೊಂಡ ಬೆನ್ನಲ್ಲಿಯೇ ಕೃಷಿಕರಿಂದ ಪಡೆದಿದ್ದ ಮೊತ್ತವನ್ನು ಮರಳಿ ಅವರ ಮನೆಗೆ ತೆರಳಿ ಮರುಪಾವತಿಸಲಾಗಿದೆ.
ಉಪ್ಪಿನಂಗಡಿಯ ಪ್ರಗತಿಪರ ಕೃಷಿಕ ಚಂದ್ರಶೇಖರ್ ತಾಳ್ತಜೆ ಅವರ ಕೃಷಿ ಭೂಮಿಗೆ ಅಳವಡಿಸಲಾದ ಕೃಷಿ ನೀರಾವರಿ ಪಂಪು ಸೆಟ್ ಗಳಿಗೆ ಆಧಾರ್ ಜೋಡಿಸುವ ಸಂಬಂಧ ಇಲಾಖೆಗೆ ಪಾವತಿಸಬೇಕಾದ ಶುಲ್ಕ ಎಂದು ತಿಳಿಸಿ ಇಲಾಖೆಗೆ ಸಂಬಂಧಿಸಿದಾತನೋರ್ವ ಹತ್ತು ಸಾವಿರ ರೂ. ಹಣವನ್ನು ಪಡೆದಿದ್ದು, ಈ ಆಧಾರ್ ಜೋಡಣೆ ಪ್ರಕ್ರಿಯೆಗೆ ಮೆಸ್ಕಾಂ ಇಲಾಖೆಯು ಯಾವುದೇ ಶುಲ್ಕ ನೀಡಬೇಕಾಗಿಲ್ಲ ಎಂದು ಪ್ರಕಟಣೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ಅಧಿಕಾರಿ ಹಣ ಪಡೆದ ಪ್ರಕರಣವನ್ನು ಗ್ರಾಹಕರು ಮಾದ್ಯಮದ ಗಮನಕ್ಕೆ ತಂದಿದ್ದು, ಈ ಸಂಬಂಧ ಆ. 16ರ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.
ಪ್ರಕರಣದ ಬಗ್ಗೆ ಉಪ್ಪಿನಂಗಡಿ ಮೆಸ್ಕಾಂ ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್ ಪ್ರತಿಕ್ರಿಯಿಸಿ, ಮೃತಪಟವರ ಹೆಸರಿನಲ್ಲಿರುವ ಕೃಷಿ ಪಂಪು ಸೆಟ್‌ಗಳನ್ನು ಅವರ ವಾರಸುದಾರರ ಹೆಸರಿಗೆ ವರ್ಗಾಯಿಸಲು ಅಗತ್ಯವಿರುವ ಪ್ರಮಾಣೀಕೃತ ಹೇಳಿಕೆಗೆ 100 ಛಾಪಾ ಕಾಗದದ ಅವಶ್ಯಕತೆ ಹೊರತುಪಡಿಸಿ ಬೇರಾವುದೇ ಶುಲ್ಕ ಇರುವುದಿಲ್ಲವೆಂದು ಸ್ಪಷ್ಟಪಡಿಸಿದ್ದರಲ್ಲದೆ, ಯಾರೇ ಆದರೂ ಮೆಸ್ಕಾಂ ಇಲಾಖೆಗೆ ಪಾವತಿಸಲಿದೆ ಎಂದು ತಿಳಿಸಿ ಹಣ ವಸೂಲಿ ಮಾಡಿದ್ದರೆ ತಕ್ಷಣವೇ ಇಲಾಖಾಧಿಕಾರಿಗೆ ಮಾಹಿತಿ ನೀಡಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಿದ್ದರು.
ಈ ಮಧ್ಯೆ ಶುಕ್ರವಾರ ಪತ್ರಿಕಾ ವರದಿ ಪ್ರಕಟಗೊಂಡ ಬೆನ್ನಿಗೆ ಇಲಾಖಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೃತ್ಯಗೈದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ ಪರಿಣಾಮ ಶುಕ್ರವಾರ ಮಧ್ಯಾಹ್ನವೇ ಹಣ ಪಡೆದವರು ಚಂದ್ರಶೇಖರ್ ತಾಳ್ತಜೆಯವರ ಮನೆಗೆ ಭೇಟಿ ನೀಡಿ, ತಮ್ಮ ಕೃತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದರಲ್ಲದೆ, ಪಡೆದ ಹತ್ತು ಸಾವಿರ ಮೊತ್ತವನ್ನು ಮರು ಪಾವತಿಸಿದರು.
ಕಳಕೊಂಡ ಹಣವನ್ನು ಮರಳಿ ಪಡೆದ ಸಂತಸದೊಂದಿಗೆ, ಸಾಮಾನ್ಯ ಕೃಷಿಕನ ನೋವಿಗೆ ದ್ವನಿಯಾಗಿ ಹಣ ಮರಳಿ ಪಡೆಯುವಂತಾಗಲು ಕಾರಣವಾದ ಪತ್ರಿಕೆಗೆ ತಾಳ್ತಜೆಯವರು ಧನ್ಯವಾದವನ್ನು ಸಲ್ಲಿಸಿದ್ದಾರೆ.