ಅನಾಥರಿಗೆ ದೇಗುಲವಾದ ನಿರಾಶ್ರಿತರ ಕೇಂದ್ರ

bangarapete
Published on

 ವಿ.ಶಿವಾರೆಡ್ಡಿ ಬಂಗಾರಪೇಟೆ: ಬೀದಿ ಬೀದಿ ಅಲೆದಾಡುವ, ಮಾನಸಿಕ ಹಾಗೂ ದೈಹಿಕ ಅಸಮರ್ಥ ನಿರಾಶ್ರಿತರಿಗೆ ಶಕ್ತಿ ತುಂಬುವ ಉದ್ದೇಶದಿಂದ 2002ರಲ್ಲಿ ಬಂಗಾರಪೇಟೆ ತಾಲೂಕು ಬೀರಂಡಹಳ್ಳಿ ಸಮೀಪ ಆರಂಭವಾದ ನಿರಾಶ್ರಿತರ ಕೇಂದ್ರವು ಹಲವರ ಬದುಕು ಬದಲಿಸಿದ ದೇವಾಲಯವಾಗಿ ರೂಪುಗೊಂಡಿದೆ.

ಐದಾರು ವರ್ಷಗಳ ಹಿಂದೆ ನಿರಾಶ್ರಿತರಿಗೆ ನರಕ ಕೇಂದ್ರವಾಗಿದ್ದ, ಈ ಸ್ಥಳ ಇಂದು ತೆರೆದ ಸ್ವರ್ಗವಾಗಿದೆ. ನಿರಾಶ್ರಿತರಿಗೆ ಆಶ್ರಯ, ವೈದ್ಯಕಿಯ ಸೌಲಭ್ಯ, ವೃತ್ತಿಪರ ತರಬೇತಿ ಮತ್ತು ಪುನರ್ವಸತಿ ಒದಗಿಸುವ ಉದ್ದೇಶದಿಂದ ಸರ್ಕಾರದಿಂದ ಐದಾರು ವರ್ಷಗಳ ಹಿಂದೆ ಆರಂಭವಾದ ಈ ಕೇಂದ್ರ ಈಗ ತೆರೆದ ಸ್ವರ್ಗವಾಗಿದೆ.

ರಸ್ತೆ ಬದಿ ಅಲೆದಾಡುವ ನಿರಾಶ್ರಿತರನ್ನು ಗುರುತಿಸಿ ಸುರಕ್ಷಿತ ಮತ್ತು ನೆಮ್ಮದಿಯ ವಾತಾವರಣದಲ್ಲಿ ಆಶ್ರಯ ಕಲ್ಪಿಸುವುದು, ಕೃಷಿ, ತೋಟಗಾರಿಗೆ, ಗೃಹಪಯೋಗಿ ವಸ್ತುಗಳ ತಯಾರಿಕೆ ಮುಂತಾದ ವೃತ್ತಿಪರ ತರಬೇತಿ ನೀಡಿ ಸದ್ದಿಲ್ಲದೇ ನಿರಾಶ್ರಿತರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ.

ಸಾಕ್ಷರತಾ ಚಟುವಟಿಕೆಗಳು, ಸೌಕರ್ಯ ಮತ್ತು ನಿರ್ವಹಣೆಗೆ ಕೇಂದ್ರದಲ್ಲಿ ಮೊದಲ ಪ್ರಾಧಾನ್ಯ ನೀಡುವುದೇ ಈ ಬದಲಾವಣೆಗೆ ಕಾರಣವಾಗಿದೆ.

ಸ್ಥಳಿಯ ಸಂಸ್ಥೆಗಳಿಗೆ ಪಾವತಿಸುವ ಕಂದಾಯದಲ್ಲಿ ಶೇ.3 ಸುಂಕ ಮತ್ತು ಸರ್ಕಾರದಿಂದ ಬರುವ ಅನುದಾನದಡಿ ನಿರಾಶ್ರಿತರ ಕೇಂದ್ರ ನಿರ್ವಹಿಸಲಾಗುತ್ತಿದ್ದು, ಸದ್ಯ 131 ಪುರುಷರು, 27 ಮಹಿಳೆಯರು ಸೇರಿ ಒಟ್ಟು 158 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಇದರಲ್ಲಿ ಸುಮಾರು 100 ಮಂದಿ ಮಾನಸಿಕ ಅಸ್ವಸ್ಥರಿದ್ದಾರೆ.

10 ಎಕರೆಯಲ್ಲಿ ಕೇಂದ್ರವು ವಿಸ್ತಾರಗೊಂಡಿದ್ದು, ನಾಲ್ಕು ವಸತಿ ನಿಲಯಗಳಿವೆ. ಪುರುಷರಿಗೆ ಎರಡು, ಮಹಿಳೆಯರಿಗೆ ಒಂದು ನಿಲಯಗಳಿದ್ದು, ಮೂರು ದಿನಕ್ಕೊಮ್ಮೆ ಮೊಟ್ಟೆ ಮತ್ತು ಬಾಳೆಹಣ್ಣು, ವಾರಕ್ಕೊಮ್ಮೆ ಬಾಡೂಟ ಸೇರಿ ದಿನದಲ್ಲಿ 3 ಹೊತ್ತು ವಿವಿಧ ಬಗೆಯ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಪ್ರತಿನಿತ್ಯ ಬಿಪಿ, ಶುಗರ್​ ಚೆಕ್​ ಮಾಡಲಾಗುತ್ತಿದ್ದು, ವೈದ್ಯಕಿಯ ತಪಾಸಣೆಗೆ ಮೂವರು ಶುಶ್ರೂಷಕಿಯರಿದ್ದಾರೆ. ತಿಂಗಳಿಗೊಮ್ಮೆ ಮನೋ ವೈದ್ಯರಿಂದ ತಪಾಸಣೆ ಮಾಡಿಸಿ ಅಸ್ವಸ್ಥರನ್ನು ಮುಖ್ಯವಾಹಿನಿಗೆ ತರಲು ಇಲ್ಲಿನ ಸಿಬ್ಬಂದಿ ಶ್ರಮವಹಿಸುತ್ತಿದ್ದಾರೆ.

ದಿನಕ್ಕೆ ಒಬ್ಬರಿಗೆ -38 ದುಡಿತ!: ಕರ್ನಾಟಕ ತೆಂಗು&ನಾರು ಅಭಿವೃದ್ಧಿ ನಿಗಮದಿಂದ ನಿರಾಶ್ರಿತರಿಗೆ ತೆಂಗಿನ ನಾರು ಉತ್ಪನ್ನಗಳ ತಯಾರಿಕೆ ತರಬೇತಿ ನೀಡಲಾಗುತ್ತಿದೆ. ಈಗಾಗಲೇ 12 ಮಂದಿ ತರಬೇತಿ ಪಡೆದು ಮ್ಯಾಟ್​ ತಯಾರಿಸುತ್ತಿದ್ದು, ಇತರರಿಗೂ ವಾರದಲ್ಲಿ 4 ದಿನ ತರಬೇತಿ ನೀಡಲಾಗುತ್ತಿದೆ. ಕೆಲಸ ಮಾಡುವ ಪ್ರತಿಯೊಬ್ಬರಿಗೂ 38 ರೂ. ಗೌರವ ಧನ ನೀಡಿ ಬ್ಯಾಂಕ್​ ಖಾತೆ ತೆರದು ಹಣ ಜಮಾ ಮಾಡಲಾಗುತ್ತಿದೆ. ಮಾನಸಿಕ ಅಸ್ವಸ್ಥರು ಗುಣಮುಖರಾಗಿ ಮುಖ್ಯವಾಹಿನಿಗೆ ಬಂದ ಮೇಲೆ ಮತ್ತೆ ಹಳೇ ಅಭ್ಯಾಸ ಬೆಳೆಸಿಕೊಳ್ಳದಂತೆ ತಡೆಯಲು ಹಲವು ಕಾರ್ಯಕ್ರಮ ರೂಪಿಸಲಾಗುತ್ತಿದೆ.

ಏನೆಲ್ಲ ಕೆಲಸ ಮಾಡ್ತಾರೆ?: ಕೇಂದ್ರದಲ್ಲಿ ಪಾಲಿ ಹೌಸ್​, ತರಕಾರಿ, ಬಾಳೆ ತೋಟ ಬೆಳೆಸಿ ಅದನ್ನು ಊಟಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ವ್ಯಾಯಾಮ ಮಾಡಲು ವಿಶಾಲ ಸ್ಥಳವಿದೆ. ಕೇಂದ್ರದ ಅಧೀಕ್ಷಕ ಮಂಜುನಾಥ್​, ಎಫ್​ಡಿಸಿ ಸುನೀತಾ ಕುಟುಂಬದ ಸದಸ್ಯರಂತೆ ನಿರಾಶ್ರಿತರಿಗೆ ಪ್ರೀತಿ, ವಿಶ್ವಾಸದಿಂದ ಆರೈಕೆ ಮಾಡುತ್ತಿದ್ದು, ಬಿಹಾರ, ಉತ್ತರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ಸೇರಿ ದೇಶದ ನಾನಾ ಭಾಗಗಳಿಂದ ಬಂದಿರುವ ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ.

ಈ ನಿರಾಶ್ರಿತ ಕೇಂದ್ರ ಸ್ವಂತ ಮನೆಯಂತಿದೆ. ಅಸ್ವಸ್ಥನಾಗಿದ್ದ ನಾನು ಗುಣಮುಖನಾಗಿ ನಮ್ಮೂರು ಬೆಳಗಾವಿಗೆ ಹೋದೆ. ಆದರೆ ಮತ್ತೆ ಕೇಂದ್ರಕ್ಕೆ ಬಂದು ಸೇವೆ ಸಲ್ಲಿಸುತ್ತಿದ್ದೇನೆ. > ಬಾಲಯ್ಯ ನಿರಾಶ್ರಿತ ಬಹಳಷ್ಟು ಅಸ್ವಸ್ಥರಾದವರು ಕೇಂದ್ರದಲ್ಲಿದ್ದಾರೆ. ಅವರ ಮನಸ್ಥಿತಿಗೆ ಹೊಂದಿಕೊಂಡು ಮುಖ್ಯವಾಹಿನಿಗೆ ತರಲು ಸಿಬ್ಬಂದಿ ಸಮೇತ ಪ್ರಯತ್ನಿಸಲಾಗುತ್ತಿದೆ. > ಮಂಜುನಾಥ್​ ಅಧೀಕ್ಷಕ, ನಿರಾಶ್ರಿತರ ಕೇಂದ್ರ, ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net