

ತುಮಕೂರು: ಒಂದೂವರೆ ವರ್ಷದಿಂದ ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕುಗಳ ಗಡಿಭಾಗದಲ್ಲಿ ಚಿರತೆ ದಾಳಿ ಭೀತಿಯಿಂದ ಕಂಗೆಟ್ಟಿರುವ ಜನರಿಗೆ ರಕ್ಷಣೆ ನೀಡಲು ಅರಣ್ಯ ಇಲಾಖೆ ‘ರಿಫ್ಲೆಕ್ಟಿಂಗ್ ಜಾಕೆಟ್’ಗೆ ಮೊರೆ ಹೋಗಿದೆ.
ಮೂರು ತಾಲೂಕುಗಳು ಹೊಂದಿಕೊಂಡಿರುವ ಬನ್ನಿಕುಪ್ಪೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ‌್ಯಾಚರಣೆ ಮುಂದುವರಿಸಿದೆ. ಚಿರತೆ ಸೆರೆಗೆ ಗಜಪಡೆ, ಸೋಲಿಗರ ಸಹಕಾರ, ಸಿಸಿ ಕ್ಯಾಮರಾ, ಟ್ರಾೃಪ್ ಕ್ಯಾಮರಾ, ಡ್ರೋನ್ ಸೇರಿ ಹಲವು ಪ್ರಯೋಗಗಳ ನಡುವೆಯೂ ದುರಂತಗಳು ಮರುಕಳಿಸುತ್ತಲೇ ಇವೆ.
36ಕ್ಕೂ ಹೆಚ್ಚು ಚಿರತೆ ಸೆರೆ: ಮಾನವ ಹತ್ಯೆ ಪ್ರದೇಶಗಳಾದ ಮೂರು ತಾಲೂಕುಗಳಲ್ಲಿ 36ಕ್ಕೂ ಹೆಚ್ಚು ಚಿರತೆ ಸೆರೆ ಹಿಡಿಯಲಾಗಿದೆ. ಆದರೂ, ಚಿರತೆ ಉಪಟಳ ಕಡಿಮೆ ಆಗಿಲ್ಲ. ಸಾಕುಪ್ರಾಣಿಗಳಲ್ಲದೆ ಮನುಷ್ಯನ ಮೇಲೂ ದಾಳಿ ನಡೆಸುತ್ತಲೇ ಇವೆ. ಅರಣ್ಯ ಇಲಾಖೆಯೂ ಈ ಭಾಗದ ಜನರನ್ನು ಚಿರತೆ ಭೀತಿ ಮುಕ್ತರನ್ನಾಗಿಸಲು ಪ್ರಯತ್ನಗಳನ್ನು ನಡೆಸುತ್ತಲೇ ಇದೆ.
ಇದರ ಭಾಗವಾಗಿ ಗ್ರಾಮಸ್ಥರು ಚಿರತೆ ದಾಳಿಗಳಿಂದ ತಪ್ಪಿಸಿಕೊಳ್ಳಲು ಸಹಕಾರಿಯಾಗುವಂತೆ ವಿಶಿಷ್ಟ ಪ್ರಯೋಗಕ್ಕೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಚಿರತೆ ಬಾಧಿತ ಪ್ರದೇಶಗಳಲ್ಲಿ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆಸಲಾಗುತ್ತಿದ್ದು, ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಕೇಸರಿ ಬಣ್ಣದ ರೇಡಿಯಂ ಜಾಕೆಟ್‌ಗಳನ್ನು ನೀಡಿದೆ. ಇನ್ನಾದರೂ ಈ ಭಾಗದ ಜನರು ಚಿರತೆ ಭೀತಿಯಿಂದ ಮುಕ್ತರಾಗುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.
ಕೇಸರಿ ಬಣ್ಣದ ರಿಫ್ಲೆಕ್ಟಿಂಗ್ ಜಾಕೆಟ್ : ತುಮಕೂರು ತಾಲೂಕಿನ ಬನ್ನಿಕುಪ್ಪೆ, ಕುಡವನಕುಂಟೆ, ಬೈಚೇನಹಳ್ಳಿ ಹಾಗೂ ಕುಣಿಗಲ್ ಮತ್ತು ಗುಬ್ಬಿ ತಾಲೂಕು ಪ್ರದೇಶದ ಸುತ್ತಮುತ್ತಲ ಗ್ರಾಮಗಳಲ್ಲಿ ರಿಫ್ಲೆಕ್ಟಿಂಗ್ ಜಾಕೆಟ್‌ಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಿತರಿಸುತ್ತಿದ್ದಾರೆ. ಈವರೆಗೆ 1500 ಜಾಕೆಟ್‌ಗಳನ್ನು ವಿತರಿಸಲಾಗಿದೆ. 50 ರೂ., ಮೌಲ್ಯದ ಜಾಕೆಟ್ ಅನ್ನು ಇಲಾಖೆ ಉಚಿತವಾಗಿ ಜನರಿಗಿ ಒದಗಿಸುತ್ತಿದೆ.
ಮಕ್ಕಳು, ವೃದ್ಧರು ಟಾರ್ಗೆಟ್ : ವೃದ್ಧರು, ಮಕ್ಕಳು ಚಿರತೆಗಳ ದಾಳಿಗೆ ತುತ್ತಾಗುತ್ತಿದ್ದಾರೆ. ಕುರಿ, ಮೇಕೆ ರೀತಿಯಲ್ಲಿ ಮಕ್ಕಳು, ವೃದ್ಧರು ಕಾಣುವುದರಿಂದ ಚಿರತೆ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚು. ಈ ಹಿನ್ನೆಲೆಯಲ್ಲಿ ಅವರಿಗೆ ಜಾಕೆಟ್‌ಗಳನ್ನು ನೀಡಲಾಗುತ್ತಿದೆ. ಇದರ ಜತೆಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವವರು, ದನ ಕುರಿಗಳನ್ನು ಮೇಯಿಸುವವರಿಗೆ ಸಹ ಈ ಜಾಕೆಟ್‌ಗಳನ್ನು ನೀಡಲಾಗುತ್ತಿದೆ.
ಚಿರತೆ ದಾಳಿಯಿಂದ ಜನರನ್ನು ರಕ್ಷಿಸಲು ರಿಫ್ಲೆಕ್ಟಿಂಗ್ ಜಾಕೆಟ್‌ಗಳನ್ನು ಉಚಿತವಾಗಿ ನೀಡಲಾಗಿದೆ. ವೃದ್ಧರು, ಮಕ್ಕಳಿಗೆ ನೀಡಲಾಗಿದೆ. ಈ ಜಾಕೆಟ್‌ಗಳನ್ನು ಧರಿಸುವುದರಿಂದ ಭಿನ್ನವಾಗಿ ಕಾಣಿಸುವುದರಿಂದ ದಾಳಿ ಮಾಡಲು ಚಿರತೆಗಳು ಹಿಂದೇಟು ಹಾಕಲಿವೆ.
ಎಚ್.ಸಿ.ಗಿರೀಶ್ ಡಿಎಫ್‌ಒ