

ಯಲ್ಲಾಪುರ: ತಾಲೂಕಿನ ಮಾಗೋಡ ಕಾಲನಿಯ ಶ್ರೀ ವೀರಮಾರುತಿ ದೇವಸ್ಥಾನದ ಆವಾರದಲ್ಲಿ ಪ್ರಗತಿಪರ ಸಮಾನ ಮನಸ್ಕರ ವೇದಿಕೆಯ ನೇತೃತ್ವದಲ್ಲಿ ಚಿಂತನ ಸಭೆ ನಡೆಯಿತು. ಮಾಗೋಡಿನಲ್ಲಿ ಸಾಫ್ಟ್ವೇರ್ ಟೆಕ್ ಪಾರ್ಕ್ ನಿರ್ಮಾಣ ಮಾಡುವ ಕುರಿತು ಜನಾಭಿಪ್ರಾಯ ಸಂಗ್ರಹಣೆ ಮಾಡಲಾಯಿತು.
ಅನಂತಮೂರ್ತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ಗ್ರಾಮೀಣ ಭಾಗದಲ್ಲೂ ಐಟಿ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಉದ್ಯೋಗ ಸೃಷ್ಟಿ ಮಾಡಲು ಅವಕಾಶವಿದೆ. ಹಿಂದೆ ಕೆಪಿಸಿಗೆ ಸೇರಿದ್ದ ಮಾಗೋಡ ಕಾಲನಿಯ ಜಾಗ ಈಗ ಮರಳಿ ಅರಣ್ಯ ಇಲಾಖೆಗೆ ಸೇರಿದೆ. ಅದನ್ನು ಕೆಐಎಡಿಬಿ ವ್ಯಾಪ್ತಿಗೆ ಹಸ್ತಾಂತರಿಸಿ, ಟೆಕ್ ಪಾರ್ಕ್ ನಿರ್ವಣಕ್ಕೆ ಅಗತ್ಯವಾದ ಸೌಲಭ್ಯಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಮಾಡಬೇಕು. ನಂತರ ಕೇಂದ್ರ ಕೈಗಾರಿಕಾ ಇಲಾಖೆಯ ಮೂಲಕ ಇಂಡಸ್ಟ್ರಿಯಲ್ ಎಸ್ಟೇಟ್ ನಿರ್ವಿುಸಬಹುದು ಎಂದರು.
ಐಟಿ ಪಾರ್ಕ್ ನಿರ್ವಣವಾದಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಸಾಧ್ಯ. ಉದ್ಯೋಗಕ್ಕಾಗಿ ಮಹಾನಗರಗಳನ್ನೇ ಆಶ್ರಯಿಸುವುದನ್ನು ಬಿಟ್ಟು ಊರಿನಲ್ಲಿದ್ದುಕೊಂಡೇ ಕೆಲಸ ಮಾಡಬಹುದು. ಕೃಷಿ ಕೆಲಸವನ್ನೂ ಮಾಡಿಕೊಂಡು, ತಂದೆ ತಾಯಿಯರನ್ನೂ ನೋಡಿಕೊಳ್ಳಬಹುದು. 10 ಸಾವಿರ ಎಕರೆಗಿಂತ ಹೆಚ್ಚಿನ ಸ್ಥಳವನ್ನು ಸರ್ಕಾರದ ವಿವಿಧ ಯೋಜನೆಗಳಿಗೆ ಜಿಲ್ಲೆಯ ಜನ ತ್ಯಾಗ ಮಾಡಿದ್ದಾರೆ. ಜಿಲ್ಲೆಯವರಿಗಾಗಿ ಈ ಯೋಜನೆ ನೀಡಲು ಸರ್ಕಾರ ಮುಂದಾಗಬೇಕು. ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಿದಲ್ಲಿ ಯಶಸ್ವಿಯಾಗಲು ಸಾಧ್ಯತೆಯಿದೆ ಎಂದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ರಸ್ತೆಯಂತಹ ಮೂಲ ಸೌಕರ್ಯವೇ ಸಮರ್ಪಕವಾಗಿ ಇಲ್ಲದ ಸ್ಥಳದಲ್ಲಿ ಟೆಕ್ ಪಾರ್ಕ್ ನಿರ್ವಣದ ಕನಸು ಕಾಣುತ್ತಿದ್ದೇವೆ. ಇದು ಸುಲಭದ ಕಾರ್ಯವಲ್ಲ. ಕ್ರಮಿಸಬೇಕಾದ ದಾರಿ ತುಂಬಾ ದೂರದ್ದು. ಇಲ್ಲಿನ ಸಾಧ್ಯಾಸಾಧ್ಯತೆಯ ಬಗ್ಗೆ ಸರಿಯಾದ ಅಧ್ಯಯನ ನಡೆಯಬೇಕು. ತಜ್ಞರ ಒಳಗೊಳ್ಳುವಿಕೆ, ಸಾಮಾಜಿಕ, ಧಾರ್ವಿುಕ, ರಾಜಕೀಯ ಮುಖಂಡರ ಒಗ್ಗಟ್ಟಿನ ಸಹಕಾರದಿಂದ ಸರ್ಕಾರದ ಮೇಲೆ ಪರಿಣಾಮ ಬೀರಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಎಂದರು.
ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಹಿರಿಯರಾದ ಪರಮೇಶ್ವರ ಕೊಂಬೆ, ಇತರರಿದ್ದರು. ಯುಕೆ ನೇಚರ್ ಸ್ಟೇನ ನಿರಂಜನ ಭಟ್ಟ, ಇಂಜಿನಿಯರ್ ಅಂಕಿತ್ ಹೆಗಡೆ ಶಿರಸಿ, ಕುಂದರಗಿ ಗ್ರಾಪಂ ಸದಸ್ಯ ಗಣೇಶ ಹೆಗಡೆ, ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಪತ್ರಕರ್ತರಾದ ನಾಗರಾಜ ಮದ್ಗುಣಿ, ಜಿ.ಎನ್. ಭಟ್ಟ ತಟ್ಟಿಗದ್ದೆ, ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ ಗಣೇಶ ಹೆಗಡೆ ನಂದೊಳ್ಳಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನರಸಿಂಹ ಭಟ್ಟ ಕುಂಕಿಮನೆ, ನಂದೊಳ್ಳಿ ಗ್ರಾಪಂ ಸದಸ್ಯ ಟಿ.ಆರ್. ಹೆಗಡೆ ಇತರರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೆ ಬೇಡ್ತಿ ಯೋಜನೆಯ ವಿರುದ್ಧದ ಹೋರಾಟದಲ್ಲಿ ಸ್ವರ್ಣವಲ್ಲೀ ಶ್ರೀಗಳು ನೇತೃತ್ವ ವಹಿಸಿ ಮಾಗೋಡ ಪರಿಸರವನ್ನು ಉಳಿಸಿದ್ದರು. ಅವರು ಉಳಿಸಿದ ಪರಿಸರಕ್ಕೆ ಅವರೇ ಕಾಯಕಲ್ಪ ಕೊಡುವಂತಾಗಲಿ ಎಂಬ ಆಗ್ರಹದೊಂದಿಗೆ ಶ್ರೀಗಳೇ ಈ ಹೋರಾಟದ ನೇತೃತ್ವವನ್ನೂ ವಹಿಸಬೇಕು ಎಂದು ಮನವೊಲಿಸಬೇಕು. ಶಾಸಕರು, ಸಂಸದರ ಮುಂದಾಳತ್ವದಲ್ಲಿ ಒಗ್ಗಟ್ಟಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಆಗಬೇಕು. ಆರಂಭ ಶೂರತ್ವ ಆಗದೇ ಯಶಸ್ಸು ಸಿಗುವವರೆಗೂ ಹೋರಾಟ ನಡೆಯಬೇಕು. ಉದ್ಯೋಗಾವಕಾಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಾಶಸ್ಱ ನೀಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಮುಂದಿನ ವಾರ ಸ್ವರ್ಣವಲ್ಲೀ ಶ್ರೀಗಳನ್ನು ಭೇಟಿಯಾಗಿ ಹೋರಾಟದ ನೇತೃತ್ವ ವಹಿಸುವಂತೆ ಪ್ರಾರ್ಥಿಸಿ, ಆಶೀರ್ವಾದ ಪಡೆಯಲು ನಿರ್ಣಯಿಸಲಾಯಿತು.