‘ರೆಫರ್ ಟು ಫಿಸಿಯೋ’ ಟ್ರೆಂಡ್ ಶುರು: ಅತ್ಯಾಧುನಿಕ ಚಿಕಿತ್ಸೆ ಮೂಲಕ ನೋವು ಶಮನ

pain
Published on

ದೈಹಿಕವಾಗಿ ಸದೃಢವಾಗಿರಲು, ಉತ್ತಮ ಆರೋಗ್ಯ ರೂಪಿಸುವ ನಿಟ್ಟಿನಲ್ಲಿ ಸೆ. 8 ರಂದು (ಸೋಮವಾರ) ದೇಶಾದ್ಯಂತ ‘ಅಂತಾರಾಷ್ಟ್ರೀಯ ಫಿಸಿಯೋಥೆರಪಿ ದಿನ’ ಆಚರಿಸಲಾಗುತ್ತಿದೆ. ಪ್ರತಿ ವರ್ಷ ವಿಭಿನ್ನ ಥೀಮ್ ಅನುಸರಿಸಲಾಗುತ್ತದೆ. ಈ ಬಾರಿ ‘ಆರೋಗ್ಯಕರ ವಯಸ್ಸಾಗುವಿಕೆ ಆಗಿದ್ದು, ಬೀಳುವಿಕೆ ಮತ್ತು ದೌರ್ಬಲ್ಯ ತಡೆಯುವಿಕೆ’ ವಿಷಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ದಿನವನ್ನು ಮೊದಲ ಬಾರಿಗೆ 1996ರ ಸೆ.8ರಂದು ಆಚರಿಸಲಾಯಿತು.

ಹರೀಶ್ ಬೇಲೂರು ಬೆಂಗಳೂರು

ಇತ್ತೀಚಿನ ವರ್ಷಗಳಲ್ಲಿ ‘ರೆಫರ್ ಟು ಫಿಸಿಯೋ’ ಟ್ರೆಂಡ್ ಶುರುವಾಗಿದೆ. ವರ್ಷದಿಂದ ವರ್ಷಕ್ಕೆ ಫಿಸಿಯೋಥೆರಪಿಯಲ್ಲಿ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿವೆ. ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿಂದ ಯಾವುದೇ ನೋವುಗಳಿದ್ದರೂ ಶಮನ ಮಾಡಲಾಗುತ್ತಿದೆ. ಒಂದೊಂದು ಕಾಯಿಲೆಗೆ ಪ್ರತ್ಯೇಕ ಚಿಕಿತ್ಸಾ ವಿಧಾನಗಳಿವೆ. ಅದಕ್ಕೆ ತಕ್ಕಂತೆ ವೈದ್ಯಕೀಯ ಉಪಕರಣಗಳಿವೆ.

ಪೆಟ್ಟು, ಅಪಘಾತ, ಮೂಳೆಮುರಿತ, ಪಾರ್ಶ್ವವಾಯು, ಅಂಗವೈಕಲ್ಯ, ಪಾರ್ಕಿನ್ಸನ್, ದೀರ್ಘಾವಧಿ ಆಯಾಸ, ಬುದ್ಧಿಭ್ರಮಣೆ, ಪಾರ್ಶ್ವವಾಯು ಮೊದಲಾದ ಗಂಭೀರ ಸಮಸ್ಯೆಗಳನ್ನು ಕೈಗೆಟುಕುವ ದರದಲ್ಲಿ ‘ ಅತ್ಯಾಧುನಿಕ ಚಿಕಿತ್ಸೆ’ ಸೌಲಭ್ಯದಿಂದ ವಾಸಿ ಮಾಡಲಾಗುತ್ತಿದೆ.

ಅಲ್ಲದೆ, ವರ್ಷದಿಂದ ವರ್ಷಕ್ಕೆ ಫಿಸಿಯೋಥೆರಪಿ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ 20ಕ್ಕೂ ಅಧಿಕ ಕಾಲೇಜುಗಳಿವೆ. ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಮತ್ತು ಪಿ.ಎಚ್‌ಡಿ ಕೋರ್ಸ್‌ಗಳಿವೆ. 5 ವರ್ಷದ ಪದವಿ, 2 ವರ್ಷದ ಸ್ನಾತಕೋತ್ತರ ಕೋರ್ಸ್‌ಗಳಿವೆ. ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೋರ್ಸ್ ಮುಗಿದ ಬಳಿಕ ಒಳ್ಳೆಯ ಕಡೆಗಳಲ್ಲಿ ಉದ್ಯೋಗವೂ ಸಿಗಲಿದೆ.

ಆಟಗಾರರಿಗೂ ಚಿಕಿತ್ಸೆ:

ಕ್ರೀಡೆಯಲ್ಲಿ ಆಟಗಾರರು ಗಾಯಗೊಂಡರೆ ತಕ್ಷಣ ಫಿಸಿಯೋಥೆರಪಿಸ್ಟ್ ಚಿಕಿತ್ಸೆ ನೀಡುತ್ತಾರೆ. ಚಿಕಿತ್ಸೆ ಪಡೆದು ತಕ್ಷಣ ಮೈದಾನಕ್ಕೆ ಮರಳಿ ಆಟದಲ್ಲಿ ತೊಡಗುತ್ತಾನೆ. ಆಟಗಾರನಿಗೆ ಮತ್ತೆ ಮತ್ತೆ ಸ್ನಾಯು ಪೆಟ್ಟಿಗೆ ಒಳಗಾಗದಿರಲು ಫಿಸಿಯೋಥೆರಪಿ ತಜ್ಞರು, ತರಬೇತಿ ನೀಡುತ್ತಾರೆ. ಆಟಕ್ಕೆ ಮೊದಲು ಮತ್ತು ನಂತರ ಸ್ನಾಯುಗಳಿಗೆ ಆಯಾಸವಾಗದಂತೆ ಮಾಂಸಖಂಡ ಹಿಗ್ಗಿಸುವ ನಿರ್ದಿಷ್ಟ ವ್ಯಾಯಾಮ ಹೇಳಿಕೊಡುತ್ತಾರೆ. ದೇಹದ ಯಾವುದೇ ಭಾಗದಲ್ಲಿ ನೋವಿನ ತೀವ್ರತೆ ಕಡಿಮೆ ಮಾಡುವ ವಿಶೇಷ ವಿಭಾಗ ಫಿಸಿಯೋಥೆರಪಿಗೆ ಇದೆ. ಬೆನ್ನು, ಕುತ್ತಿಗೆ, ಭುಜ, ಪಾದ, ಹಿಮ್ಮಡಿ, ಕೈಕಾಲುಗಳ ನೋವಿಗೆ ಸೂಕ್ತ ವಿಧಾನ ಬಳಸಿ ಹಿತಕರ ಅನುಭವ ನೀಡುವ ಶಕ್ತಿ ಚಿಕಿತ್ಸೆಗಿದೆ. ಇದಕ್ಕಾಗಿ ತಜ್ಞರು ಶಾಖ, ಶಬ್ದ ತರಂಗ ಬಳಸುತ್ತಾರೆ. ಕೆಲವೊಮ್ಮೆ ಮೇಣ, ಜಲ ಚಿಕಿತ್ಸೆಯನ್ನೂ ನೀಡುತ್ತಾರೆ. ಸೂಕ್ತ ಮುಲಾಮು ಅಥವಾ ಎಣ್ಣೆ ಬಳಸಿ ದೇಹದ ಭಾಗವನ್ನು ಕೈಗಳಿಂದ ಅಥವಾ ಉಪಕರಣಗಳ ನೆರವಿನಿಂದ ತಿಕ್ಕಿ ನೋವು ಶಮನ ಮಾಡುತ್ತಾರೆ. ಸುಟ್ಟಗಾಯ, ಅಸ್ತಮಾ, ಶ್ವಾಸಕೋಶ, ನರರೋಗಗಳಲ್ಲಿ ತೀವ್ರತರ ಸ್ನಾಯುಗಳ ಬಿಗಿತ ಸೇರಿ ಇತರ ಸಮಸ್ಯೆಗಳಿಗೂ ಹಲವು ಚಿಕಿತ್ಸೆ ಕ್ರಮಗಳಿವೆ. ಗರ್ಭಾವಸ್ಥೆ, ಪ್ರಸೂತಿ ಸಮಯದಲ್ಲಿ ಮಹಿಳೆ, ತನ್ನ ದೇಹದ ಕಡೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಕೆಗೆಲ್, ಹಿಗ್ಗುವಿಕೆ ವ್ಯಾಯಾಮಗಳು ಇತ್ಯಾದಿ ಕಲಿಸುವುದರಿಂದ ಸ್ನಾಯುಶಕ್ತಿ ಹೆಚ್ಚಿಸಿ ದೇಹದಲ್ಲಾಗುವ ಅಥವಾ ಆಗಿರುವ ಬದಲಾವಣೆಗಳಿಂದ ಬೇಗ ಗುಣವಾಗಲು ಫಿಸಿಯೋಥೆರಪಿ ತಜ್ಞರು ಸಹಾಯ ಮಾಡುತ್ತಾರೆ.

ಫಿಸಿಯೋಥೆರಪಿ ಲಾಭಗಳು

* ನರರೋಗದ ಸಮಸ್ಯೆ ಪರಿಹಾರ

* ಹೃದಯ, ಶ್ವಾಸಕೋಶದ ತೊಂದರೆ ಗುಣ

* ದೀರ್ಘಕಾಲದ ಕೀಲು ನೋವು, ಗಾಯದಿಂದ ಉಂಟಾಗುವ ತೊಂದರೆ ಸೇರಿ ಹಲವು ಸಮಸ್ಯೆಗಳಿಗೆ ರಾಮಬಾಣ

* ಶಸ್ತ್ರಚಿಕಿತ್ಸೆ ನಂತರ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ

* ದೇಹದ ಊತ ಕಡಿಮೆ ಮಾಡುತ್ತದೆ

* ಮಂಡಿ ಮರುಜೋಡಣೆ, ಚಪ್ಪೆ ಮೂಳೆ ಮರುಜೋಡಣೆ ನಂತರವೂ ಆ ಭಾಗದ ಸ್ನಾಯುಗಳಿಗೆ ಮೊದಲಿನ ಚಲನೆ ತರಲು ಬಹಳ ಮುಖ್ಯ.

* ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿಗೂ ಸ್ನಾಯುಗಳ ಬಲ ಹೆಚ್ಚಿಸಲು ಸಹಕಾರಿ

ನೀಟ್ ಮೂಲಕ ಫಿಸಿಯೋಥೆರಪಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಿಯಮ ರೂಪಿಸಲಾಗಿದೆ. 2026-27ನೇ ಸಾಲಿನಲ್ಲಿ ಇದು ಜಾರಿಗೆ ಬರಲಿದೆ. ‘ಒನ್ ನೇಷನ್ ಒನ್ ಸಿಲಬಸ್’ ತಯಾರಿಸಲಾಗಿದೆ. ಹುಟ್ಟಿದ ಮಗುವಿನಿಂದ ಹಿಡಿದು ದೊಡ್ಡವರ ಎಲ್ಲ ಸಮಸ್ಯೆಗಳಿಗೂ ಫಿಸಿಯೋಥೆರಪಿ ಚಿಕಿತ್ಸಾ ಕ್ರಮಗಳಿಂದ ಗುಣಪಡಿಸಬಹುದು. ಫಿಸಿಯೋಥೆರೆಪಿಸ್ಟ್‌ಗಳಿಗೆ ಬೇಡಿಕೆ ಇದ್ದು, ಒಳ್ಳೆಯ ವೇತನವೂ ಸಿಗುತ್ತಿದೆ. ವಿಶ್ವ ಫಿಜಿಯೋಥೆರಪಿ ದಿನ ನಿಮಿತ್ತ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸೌಲಭ್ಯ ಕಲ್ಪಿಸಿದ್ದೇವೆ.

| ಕಿರಣ್ ಎಸ್.ಮೂರ್ತಿ, ನಿರ್ದೇಶಕ, ರಾಯರ ಕಿರಣ ಆಸ್ಪತ್ರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net