ಚನ್ನಮ್ಮ ಮಾದಮ್ಮ ಕೆರೆ ಒಡಲಲ್ಲಿ ಜೊಂಡು

Channamma madamma Lake Ramanagara
Published on

ಏರಿ ಭದ್ರತೆಗೆ ಕಂಟಕವಾಗಿವೆ ಮರಗಿಡಗಳು

ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಹೋಬಳಿಯ ಚನ್ನಮಾನಹಳ್ಳಿ ಚನ್ನಮ್ಮ ಮಾದಮ್ಮನ ಕೆರೆ ಏರಿ ಮೇಲೆ ಮರ-ಗಿಡಗಳು, ಅಂಗಳದಲ್ಲಿ ಜೊಂಡು ಬೆಳೆದು ಕಸ ಕಡ್ಡಿ ಸೇರುತ್ತಿದೆ. ಗ್ರಾಮ ಪಂಚಾಯಿತಿಯು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕೆರೆ 100 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, 37 ಎಕರೆ ವಿಸ್ತೀರ್ಣ ಹೊಂದಿದೆ. 150 ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಕೆರೆ ಸುತ್ತಮುತ್ತಲ 2 ಕಿ.ಮೀ. ವ್ಯಾಪ್ತಿಯಲ್ಲಿ ನೀರಿನ ಬವಣೆ ನೀಗಿಸಿದೆ. ಜತೆಗೆ ಕೆರೆ ವ್ಯಾಪ್ತಿಯ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಿದೆ.

ಉತ್ತಮ ಇತಿಹಾಸವಿದೆ

ಹಿಂದೆ ಗ್ರಾಮದಲ್ಲಿ ನೀರಿನ ಅಭಾವ ಉಂಟಾದಾಗ ಚನ್ನಮ್ಮ, ಮಾದಮ್ಮ ಎಂಬ ಅಕ್ಕ-ತಂಗಿಯರು ಕೆರೆ ನಿರ್ಮಾಣ ಮಾಡಿದರು ಎಂಬುದು ಗ್ರಾಮದ ಹಿರಿಯರ ಮಾತು. ಅವರು ನಿರ್ಮಾಣ ಮಾಡಿದ್ದರಿಂದ ಕೆರೆಗೆ ಅವರ ಹೆಸರನ್ನೇ ಇಡಲಾಗಿದೆ. ಕೆರೆ ಏರಿ ಸುಮಾರು 1 ಕಿ.ಮೀ. ಉದ್ದವಿದೆ.

ಏರಿ ರಸ್ತೆಯಲ್ಲಿ ಜಮೀನುಗಳಿಗೆ ತೆರಳುವ ರೈತರು, ಎತ್ತಿನಗಾಡಿ, ದ್ವಿಚಕ್ರ ವಾಹನ, ಜಾನುವಾರು ಸಂಚರಿಸುತ್ತವೆ. ವರ್ಷಗಳ ಹಿಂದೆ ಊರಿನ ಜನರು ಬಟ್ಟೆ, ಪಾತ್ರೆ, ಜಾನುವಾರು ಮೈ ತೊಳೆಯಲೂ ಕೆರೆಯ ನೀರು ಉಪಯೋಗವಾಗುತ್ತಿತ್ತು. ರಾಮನಗರ ಮತ್ತು ಸುತ್ತಮುತ್ತಲಿನ ಜನರು ಗಣೇಶ ವಿಸರ್ಜನೆಗೆ ಇದೇ ಕೆರೆ ಬಳಸುತ್ತಿದ್ದರು ಎನ್ನುತ್ತಾರೆ ಗ್ರಾಮಸ್ಥರು.

ಕಾಲಕ್ರಮೇಣ ಪ್ರತಿ ಮನೆಗೆ ಗ್ರಾಪಂ ಕೊಳಾಯಿ ಸಂಪರ್ಕ ನೀಡಿದ್ದರಿಂದ ಕೆರೆಯ ನೀರು ಈಗ ಕೃಷಿ ಕಾರ್ಯಕ್ಕಷ್ಟೇ ಸೀಮಿತವಾಗಿದೆ. ಇಂತಹ ಬಹೂಪಯೋಗಿ ಕೆರೆಗೆ ಈಗ ನಿರ್ವಹಣೆ ಕೊರತೆ ಎದುರಾಗಿದೆ. ಕೆರೆ ಏರಿ ಒಡೆಯುವ ಚಿಂತೆ ರೈತರನ್ನು ಕಾಡುತ್ತಿದೆ.

ಜತೆಗೆ ಗ್ರಾಮದ ಚರಂಡಿ ನೀರು ಕೆರೆ ಸೇರುತ್ತಿರುವ ಕಾರಣ ನೀರು ಕಲುಷಿತವಾಗುತ್ತಿದೆ. ಕೆರೆ ಏರಿ ಮೇಲೆ ಬೆಳೆದಿರುವ ಬೃಹತ್ ಮರ ಗಿಡಗಳನ್ನು ತೆರವುಗೊಳಿಸಿ ಏರಿ ಭದ್ರತೆಗೆ ಕ್ರಮವಾಗಬೇಕು. ಹಾಗೂ ಕೆರೆಗೆ ತ್ಯಾಜ್ಯ ಸೇರದಂತೆ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಕೆರೆ ಸನಿಹದಲ್ಲೇ ಅಚ್ಚಲು ಅರಣ್ಯ ಪ್ರದೇಶವಿದ್ದು, ಕಾಡುಪ್ರಾಣಿಗಳಿಗೆ ನೀರಿನ ದಾಹ ತಣಿಸುವ ತಾಣವಾಗಿದೆ.

ವಾಯುವಿಹಾರಕ್ಕೆ ಉತ್ತಮ ಜಾಗ

ರಾಮನಗರದಿಂದ 1 ಕಿ.ಮೀ. ದೂರದಲ್ಲಿರುವ ಕೆರೆ ಏರಿ ಮೇಲೆ ವಿದ್ಯುತ್ ದೀಪ ಮತ್ತು ಓಡಾಡಲು ವ್ಯವಸ್ಥೆ ಮಾಡಿದರೆ ರೈತರು ವಾಯುವಿಹಾರಿಗಳಿಗೆ ಇದೊಂದು ಉತ್ತಮ ತಾಣವಾಗಲಿದೆ. ಜತೆಗೆ ಕೆರೆಯಲ್ಲಿ ವರ್ಷಪೂರ್ತಿ ನೀರಿದ್ದು, ಕೆರೆಯೂ ವಿಶಾಲವಾಗಿರುವುದರಿಂದ ಬೋಟಿಂಗ್ ವ್ಯವಸ್ಥೆ ಮಾಡಿದರೆ ಒಳ್ಳೆಯ ಪ್ರವಾಸಿ ತಾಣವಾಗಲಿದೆ. ಹಾಗೂ ಸ್ಥಳೀಯವಾಗಿಯೂ ಕೆಲವರಿಗೆ ಉದ್ಯೋಗ ಸಿಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

arkesh channamahally

ಕೆರೆ ನಿರ್ವಹಣೆ ಇಲ್ಲದೆ ಏರಿ ಮೇಲೆ ಮರ ಗಿಡಗಳು ಬೆಳೆದು ಏರಿಗೆ ಹಾನಿ ಮಾಡುತ್ತಿವೆ. ಈಗಾಗಲೇ ಪಂಚಾಯಿತಿಗೆ ಮರ ಗಿಡ ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ. ಕೆರೆ ಅಭಿವೃದ್ಧಿ ಕಂಡರೆ ಸ್ಥಳೀಯ ಜನರಿಗೆ ಉತ್ತಮ ಗಾಳಿ, ಸುಂದರ ಪರಿಸರದಲ್ಲಿ ವಾಯು ವಿಹಾರಕ್ಕೆ ಅನುಕೂಲವಾಗಲಿದ್ದು, ಕೆರೆಗೆ ಜೀವಕಳೆ ತುಂಬಬಹುದು.

ಅರ್ಕೇಶ್, ಚನ್ನಮಾನಹಳ್ಳಿ

Gomathi Vibhitikere Gp president

ಕೆರೆ ಏರಿ ಮೇಲೆ ಮರಗಿಡ ತೆರವು ಮಾಡಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಕಳೆದ ಸಭೆಯಲ್ಲಿ ಕೂಡ ಈ ವಿಷಯ ಚರ್ಚೆ ಆಗಿದೆ. ಅಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಪಟ್ಟಿ ಮಾಡಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಗೋಮತಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ವಿಭೂತಿಕೆರೆ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net