

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಅಕ್ಟೋಬರ್ 6 ರಿಂದ ನಡೆಸಲು ಯೋಜಿಸಿದ್ದ ಶಿರಸಿ-ಕಾರವಾರ ಪಾದಯಾತ್ರೆಯನ್ನು ನವೆಂಬರ್‌ಗೆ ಮುಂದೂಡಲಾಗಿದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಪಾದಯಾತ್ರೆ ಘೋಷಣೆ ಮಾಡಿದ ನಂತರ ವಿವಿಧ ಸಂಘಟನೆಗಳ ಮುಖಂಡರು ಸಂಪರ್ಕಿಸಿ ತಾವೂ ಬೆಂಬಲ ನೀಡುವುದಾಗಿ ತಿಳಿಸಿದವು. ತಕ್ಷಣ ಆಯೋಜನೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ದಿನಾಂಕ ಮುಂದೂಡಲಾಗಿದೆ. ನವೆಂಬರ್ 2 ರಿಂದ 9 ರವರೆಗೆ ಶಿರಸಿ-ಕುಮಟಾ-ಅಂಕೋಲಾ-ಕಾರವಾರ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಇದನ್ನೂ ಓದಿ: ಕಳ್ಳತನ ಪ್ರಶ್ನಿಸಿದವನನ್ನು ಹೊಡೆದು ಕೊಂದವರಿಗೆ ಜೈಲು
ಕೇವಲ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಿದರೆ ಪ್ರಯೋಜನವಿಲ್ಲ. ದರ ಜತೆ ಮೆಡಿಕಲ್ ಕಾಲೇಜ್ ಆಗಬೇಕು. ಜಿಲ್ಲೆಯ ಘಟ್ಟದ ಮೇಲೊಂದು ಹಾಗೂ ಘಟ್ಟದ ಕೆಳಗೊಂದು ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ನಿರ್ಮಿಸಬೇಕು ಎಂಬುದು ನಮ್ಮ ಬೇಡಿಕೆ. ಸರ್ಕಾರ ಹಣ ನೀಡಲು ಮುಂದಾಗದಿದ್ದರೆ, ಕಂಪನಿಗಳ ಸಿಎಸ್‌ಆರ್ ನಿಽ ಪಡೆದು ಆಸ್ಪತ್ರೆ ಪ್ರಾರಂಭಿಸಬಹುದು. ಸರ್ಕಾರ ಭೂಮಿ ಗುರುತಿಸಿದರೆ, ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಸುಮಾರು 300 ರಿಂದ 500 ಕೋಟಿ ರೂ.ಗಳನ್ನು ಎಂಎನ್‌ಸಿ ಕಂಪನಿ ಹಾಗೂ ದಾನಿಗಳಿಂದ ಸಂಗ್ರಹಿಸಲು ನಾನು ಸಿದ್ಧ ಎಂದರು. ನಮಗೆ ಕಮರ್ಷಿಯಲ್, ಖಾಸಗಿ ಆಸ್ಪತ್ರೆಗಳು ಬೇಡ. ಸರ್ಕಾರಿ ಅಥವಾ ಚಾರಿಟೇಬಲ್ ಆಸ್ಪತ್ರೆಗಳು ಬೇಕು ಎಂದರು. ಯಾವುದೇ ರಾಜಕೀಯ ಲಾಭಕ್ಕೆ ಈ ಹೋರಾಟ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಉಮೇಶಹರಿಕಾಂತ,ಜಿಲ್ಲಾ ರಿಕ್ಷಾ ಚಾಲಕ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಉದಯ ನಾಯ್ಕ, ಶಿರಸಿ ಮಾರಿಕಾಂಬಾ ರಿಕ್ಷಾ ಚಾಲಕರ ಸಂಘಟನೆ ಅಧ್ಯಕ್ಷ ವಿಶ್ವನಾಥ ಗೌಡ, ಮಹೇಶ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.