ಮೈಸೂರಿನಿಂದ ವಿಮಾನ ಮಾರ್ಗಗಳ ಕಡಿತ, ಪ್ರವಾಸೋದ್ಯಮಕ್ಕೂ ಹೊಡೆತ

mysurudp-1702881723
Published on

ಆರ್. ಕೃಷ್ಣ ಮೈಸೂರು
ಬಹಳ ನಿರೀಕ್ಷೆಗಳೊಂದಿಗೆ ನಗರದಲ್ಲಿ ಚಾಲನೆ ನೀಡಿದ ವಿಮಾನ ಸಂಪರ್ಕ ಮಾರ್ಗಗಳು ವರ್ಷದಿಂದ ವರ್ಷಕ್ಕೆ ಕಡಿತಗೊಳ್ಳುತ್ತಿವೆ.
ಹಲವು ದಶಕಗಳ ಹೋರಾಟದ ಫಲವಾಗಿ ನಗರದ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣ ಆರಂಭಿಸಲಾಯಿತು. ಇದರಿಂದ ಮೈಸೂರಿನ ಪ್ರವಾಸೋದ್ಯಮ, ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ಆದರೆ ವರ್ಷದಿಂದ ವರ್ಷಕ್ಕೆ ವಿಮಾನ ನಿಲ್ದಾಣಗಳ ಹಾರಾಟ ಕಡಿಮೆ ಅಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪ್ರಯಾಣಿಕರ ವಿಮಾನ ಹಾರಾಟ ಸ್ಥಗಿತಗೊಂಡು ಗಣ್ಯರ ಹಾರಾಟಕ್ಕೆ ಮಾತ್ರ ಮಂಡಕಳ್ಳಿ ವಿಮಾನ ನಿಲ್ದಾಣ ಸೀಮಿತಗೊಳ್ಳಲಿದೆ ಎನ್ನುವ ಆತಂಕ ಪ್ರವಾಸೋದ್ಯಮಿಗಳಲ್ಲಿ ಮನೆ ಮಾಡಿದೆ. ಹೀಗಾಗಿ, ಇತರ ಪ್ರಮುಖ ನಗರಗಳ ನಡುವೆ ವಿಮಾನ ಹಾರಾಟ ಹೆಚ್ಚಿಸುವ ಜತೆಗೆ ಮೇಲ್ದರ್ಜೆಗೆ ಏರಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಮಂಡಕಳ್ಳಿ ವಿಮಾನ ನಿಮ್ದಾಣದಿಂದ ವಿಮಾನ ಹಾರಾಟ ಆರಂಭಗೊಂಡಾಗ ಒಂದು ಮಾರ್ಗದಲ್ಲಿ ಸಂಚಾರ ಇತ್ತು. ಕ್ರಮೇಣ 2-3 ಮಾರ್ಗಗಳು ಆರಂಭಗೊಂಡವು. ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿ ವಿಮಾನ ಪ್ರಯಾಣಕ್ಕೆ ಸಬ್ಸಿಡಿ ದೊರೆಯುತ್ತಿದ್ದರಿಂದ ಏಳು ಮಾರ್ಗದಲ್ಲಿ ಒಟ್ಟು 9 ವಿಮಾನಗಳ ಹಾರಾಟ ನಡೆಯುತ್ತಿತ್ತು.
ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಕೊಚ್ಚಿನ್, ಗೋವಾ, ಚೆನ್ನೈ, ಹೈದರಾಬಾದ್ ಮಾರ್ಗದಲ್ಲಿ ವಿಮಾನ ಹಾರಾಟವಿದ್ದಿದ್ದರಿಂದ ಪ್ರಯಾಣಿಕರಿಗೂ ಅನುಕೂಲವಾಗುತ್ತಿತ್ತು. ಆದರೆ ಕಾಲ ಕ್ರಮೇಣ ಸರ್ಕಾರದ ಸಬ್ಸಿಡಿ ಕಡಿತಗೊಂಡಿದ್ದರಿಂದ ವಿಮಾನ ಪ್ರಯಾಣದ ಟಿಕೆಟ್ ದರ ಏರಿಕೆ ಕಂಡಿತು. ಇದರಿಂದ ಪ್ರಯಾಣಿಕರು ವಿಮಾನ ಪ್ರಯಾಣ ಕಡಿಮೆ ಮಾಡಿದ್ದರಿಂದ ಕೆಲವು ಮಾರ್ಗದಲ್ಲಿ ಸಂಚರಿಸಲು ನಷ್ಟವಾಗುತ್ತದೆ ಎನ್ನುವ ಕಾರಣದಿಂದ ಹಾರಾಟ ಸ್ಥಗಿತಗೊಳಿಸಲಾಯಿತು. ಕಾಲಕ್ರಮೇಣ ಆದಾಯ ತರುತ್ತಿದ್ದ ಮಾರ್ಗದಲ್ಲಿಯೂ ವಿಮಾನ ಹಾರಾಟ ನಿಲ್ಲಿಸಿರುವುದರಿಂದ ಈ ಮಾರ್ಗವನ್ನು ನಂಬಿದ್ದ ಪ್ರಯಾಣಿಕರಿಗೆ ತೊಂದರೆ ಎದುರಾಗಿದೆ.
ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಕೊಚ್ಚಿನ್, ಗೋವಾ ಮಾರ್ಗದ ವಿಮಾನ ಹಾರಾಟ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದು, ಸದ್ಯ ಚೆನ್ನೈ, ಹೈದರಾಬಾದ್ ಮಾರ್ಗದಲ್ಲಿ ಮಾತ್ರ ಹಾರಾಟ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಬೆಳಗಾವಿ, ಹುಬ್ಬಳ್ಳಿ, ಕಲಬರುಗಿಗೆ ವಿಮಾನ ಹಾರಾಟ ನಿಂತುಹೋಗಿದೆ. ಪ್ರಮುಖ ಪ್ರವಾಸಿ ತಾಣಗಳಾದ ಕೊಚ್ಚಿನ್, ಗೋವಾ ಮಾರ್ಗಕ್ಕೆ ವಿಮಾನ ಸೇವೆ ನಿಂತು ಹೋಗಿ ಸುಮಾರು ಎರಡು ತಿಂಗಳಾಗುತ್ತಾ ಬರುತ್ತಿದೆ.
ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೆಲವು ಪ್ರಮುಖ ಪ್ರವಾಸಿ ನಗರಗಳಿಗೆ ವಿಮಾನ ಹಾರಾಟ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಮೈಸೂರಿಗೆ ಹೊಡೆತ ಬೀಳುತ್ತಿದೆ. ಕೇರಳ-ತಮಿಳುನಾಡು ರಾಜ್ಯಗಳ ಗಡಿಯು ಸಮೀಪವಿರುವ ಕಾರಣ ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸೋದ್ಯಮದ ಹಬ್ ಆಗಿ ಬೆಳವಣಿಗೆ ಕಾಣುತ್ತಿತ್ತು. ವಿಮಾನಗಳ ಹಾರಾಟದಿಂದಾಗಿ ಗೋವಾ ಹಾಗೂ ಕೊಚ್ಚಿನ್ ಕಡೆಗೆ ಪ್ರವಾಸಿಗರ ದಟ್ಟಣೆ ಇತ್ತು.
ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ವಿದೇಶಿಗರು ಹಾಗೂ ಉತ್ತರ ಭಾರತದ ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸುತ್ತಾರೆ. ಸ್ಥಳೀಯ ಪ್ರವಾಸಿ ತಾಣಗಳನ್ನು ನೋಡಿದ ಬೇಲೂರು, ಹಳೇಬೀಡು, ಕೊಡಗು ಕಡೆಗೆ ಅಲ್ಲದೆ ನೆರೆಯ ತಮಿಳುನಾಡು, ಕೇರಳದ ಊಟಿ, ಮುನ್ನಾರ್, ವೈಯನಾಡು ಕಡೆಗೆ ಹೋಗುತ್ತಿದ್ದರು. ಈಗ ಆ ಅವಕಾಶವೂ ಇಲ್ಲದಂತಾಗಿ ತೊಂದರೆ ಅಗಿದೆ.
ವಹಿವಾಟು ಉತ್ತಮವಾಗಿತ್ತು
ವಿಮಾನ ಹಾರಾಟ ನಿರಂತರವಾಗಿದ್ದ ಸಮಯದಲ್ಲಿ ನಗರಕ್ಕೆ ದಿನಂಪ್ರತಿ ಕನಿಷ್ಠ 95ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಬರುತ್ತಿದ್ದರು. ಇವರಲ್ಲಿ ಬಹುತೇಕರು ವಿದೇಶಿಯರು ಇರುತ್ತಿದ್ದರು.
ವಿಮಾನ ಹಾರಾಟ ಹೆಚ್ಚಾಗಿದ್ದ ಸಮಯದಲ್ಲಿ ಹೋಟೆಲ್, ವಸತಿಗೃಹ, ಸ್ಥಳೀಯ ಪ್ರವಾಸಿ ವಾಹನಗಳಿಗೂ ವಹಿವಾಟು ಉತ್ತಮವಾಗಿ ನಡೆಯುತ್ತಿತ್ತು. ತಿಂಗಳಿಗೆ ಅಂದಾಜು 60 ಲಕ್ಷ ರೂ. ವಹಿವಾಟು ನಡೆಯುತ್ತಿದ್ದು, ಈಗ ಶೇ.40ರಷ್ಟು ನಷ್ಟವಾಗುತ್ತದೆ. ಕೊಚ್ಚಿನ್, ಗೋವಾ ವಿಮಾನಗಳನ್ನು ಸ್ಥಗಿತಗೊಳಿಸಿರುವುದರಿಂದ 25ರಿಂದ 30 ಕುಟುಂಬಗಳ ಸ್ಥಿತಿ ಡೋಲಾಯಮಾನವಾಗಿದೆ ಎನ್ನುತ್ತಾರೆ ಮೈಸೂರು ಜಿಲ್ಲಾ ಪ್ರವಾಸಿ ವಾಹನಗಳ ಚಾಲಕರ ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜು.

ವಿಮಾನ ಹಾರಾಟವಿದ್ದ ವೇಳೆಯಲ್ಲಿ ಮಂಡಕಳ್ಳಿಯಿಂದ ಮೈಸೂರಿಗೆ ಕನಿಷ್ಠ 50 ಸಿಂಗಲ್ ಟ್ರಿಪ್ ಮಾಡುತ್ತಿದ್ದೆವು. ಇದಕ್ಕೆ 10ರಿಂದ 15 ಪ್ರವಾಸಿ ಟ್ಯಾಕ್ಸಿಗಳು ನಿಗದಿಯಾಗಿದ್ದವು. ಕೆಲವು ಪ್ರವಾಸಿಗರು ನಗರಕ್ಕೆ ಬಂದು ಇಲ್ಲಿಂದ ಬೇರೆ ವಾಹನವನ್ನು ಬಾಡಿಗೆಗೆ ಮಾಡಿಕೊಂಡು ಹೋಗುತ್ತಿದ್ದರು. ಕೆಲವರು ವಿಮಾನ ನಿಲ್ದಾಣದಿಂದಲೇ ಪ್ರವಾಸಿ ತಾಣಗಳತ್ತ ಹೊರಟು ಬಿಡುತ್ತಿದ್ದರು. ಇದರಿಂದ ನಮ್ಮ ಟ್ಯಾಕ್ಸಿಯವರಿಗೆ ದಿನಕ್ಕೆ 3,500 ರೂ. ಆದಾಯ ಸಿಗುತ್ತಿತ್ತು. ಇದನ್ನೇ ನಂಬಿಕೊಂಡು ಸಾಲ ಮಾಡಿ ಕಾರು ಖರೀದಿ ಮಾಡಿರುವವರು ಇಎಂಐ ಕಟ್ಟಲು ಪರದಾಡಬೇಕಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು.

ಮತ್ತೆ ಪ್ರಯತ್ನ ನಡೆದಿದೆ
ನಗರದಿಂದ ಕೊಚ್ಚಿನ್ ಹಾಗೂ ಗೋವಾ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆದಾಯ ತರುವ ಮಾರ್ಗಗಳಾಗಿವೆ. ಆದರೆ ಎಟಿಆರ್ ಏರ್‌ಕ್ರಾಫ್ಟ್‌ಗಳ ಸಮರ್ಪಕ ಲಭ್ಯತೆ ಇಲ್ಲದ ಕಾರಣ ಹಾರಾಟ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಪ್ರಾಧಿಕಾರಕ್ಕೆ ಮನವಿ ಮಾಡಿದ್ದು, ಹೆಚ್ಚು ವಿಮಾನ ಹಾರಾಟಕ್ಕೆ ಅನುಕೂಲ ಮಾಡಿಕೊಡುವಂತೆ ಕೋರಲಾಗಿದೆ. ಕೊಚ್ಚಿನ್ ಹಾಗೂ ಗೋವಾ ಮಾರ್ಗ ಆದಾಯದ ಮಾರ್ಗವಾಗಿರುವುದಿಂದ ಮತ್ತೆ ಹಾರಾಟ ಆರಂಭಿಸಲು ಪ್ರಯತ್ನಿಸಲಾಗುತ್ತಿದ್ದು, ಈ ಸಂಬಂಧ ಅಲೈಯನ್ಸ್, ಸ್ಟಾರ್ ಏರ್ ಕಂಪನಿಗಳ ಜತೆ ಮಾತುಕತೆ ನಡೆದಿದೆ.

ಎ.ಜೆ.ಅನೂಪ್, ನಿರ್ದೇಶಕ, ಮೈಸೂರು ವಿಮಾನ ನಿಲ್ದಾಣ

ನೇರ ವಿಮಾನ ಹಾರಾಟ ಇದ್ದಾಗ ಗೋವಾ ಬಳಿಕ ಎರಡನೇ ಆಯ್ಕೆ ಅಗಿರುವ ಮೈಸೂರಿಗೆ ವಿದೇಶಿ ಪ್ರಯಾಣಿಕರು ಹೆಚ್ಚು ಬರುತ್ತಿದ್ದರು. ಇಲ್ಲಿಗೆ ಬಂದ ಬಳಿಕ ಕೊಚ್ಚಿಗೆ ತೆರಳುತ್ತಿದ್ದರು. ಇದರಿಂದ ನಗರದಲ್ಲಿ ಪ್ರವಾಸೋದ್ಯಮ ಚಟುವಟಿಗೆ ಹೆಚ್ಚಾಗಿಯೇ ಇತ್ತು. ಆದರೆ ನೇರ ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ ವಿಮಾನ ಹಾರಾಟ ಇರುವ ಕಡೆ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಿದೆ.
ಬಿ.ಎಸ್.ಪ್ರಶಾಂತ್,
ಅಧ್ಯಕ್ಷ, ಮೈಸೂರು ಸಂಘ, ಸಂಸ್ಥೆಗಳ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net