ಸೂಕ್ಷ್ಮ ನೀರಾವರಿ ಪರಿಕರ ಪಡೆಯುವ ಮಿತಿ 5 ವರ್ಷಕ್ಕೆ ಇಳಿಕೆ

27 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯಾದ್ಯಂತ ರೈತರ ಬೇಡಿಕೆ ಹಿನ್ನೆಲೆಯಲ್ಲಿ ಕೆಲ ಕೃಷಿ ಸೂಕ್ಷ್ಮ ನೀರಾವರಿ ಪರಿಕರಗಳ ಸವಲತ್ತು ಪಡೆಯಲು ಇರುವ ಕಾಲಮಿತಿಯನ್ನು 7 ವರ್ಷಗಳಿಂದ 5 ವರ್ಷಗಳಿಗೆ ಇಳಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ವಿವಿಧ ಕೃಷಿ ಪ್ರಾತ್ಯಕ್ಷಿಕೆ ಉದ್ಘಾಟಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ಗುರುವಾರ ವಿತರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ. ಮುಂಗಾರು ಹಂಗಾಮಿಗೆ 1700 ಕೋಟಿ ರೂ. ಬೆಳೆ ವಿಮೆ ಪಾವತಿಸಲಾಗಿದೆ. ಕಳೆದ ಸಾಲಿನಲ್ಲಿ ಸುಮಾರು 1000 ಕೋಟಿ ರೂ. ವೆಚ್ಚದಲ್ಲಿ ಕೃಷಿ ಪರಿಕರಗಳನ್ನು ವಿತರಿಸಲಾಗಿದೆ ಎಂದರು.
ವಿಶ್ವ ವಿದ್ಯಾಲಯಗಳ ಮೂಲಕ ರೈತರಿಗೆ ಸಂಶೋಧನೆ, ಮಾರ್ಗದರ್ಶನಗಳ ನೆರವು ನೀಡಲಾಗುತ್ತಿದೆ. ಶಾಸಕ ವಿನಯ ಕುಲಕರ್ಣಿ ಅವರು ಈ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಸಚಿವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದರು.
ಗ್ರಾಮದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ರೈತ ಯಲ್ಲಪ್ಪ ಸಾಲಿ ಅವರ ಕೃಷಿ ತಾಕುಗಳಿಗೆ ಸಚಿವರು ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು. ಸಿದ್ದಪ್ಪ ಬಿಕ್ಕೋಜಿ ಅವರ ಜಮೀನಿನಲ್ಲಿ ಡ್ರೋಣ್​ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದ ಸಚಿವರು, ಆಹಾರ ಮತ್ತು ಪೌಷ್ಠಿಕ ಭದ್ರತಾ ಯಾಜನೆಯಡಿ ರೈತರಿಗೆ ರಾಸಾಯನಿಕ, ರಸ ಗೊಬ್ಬರ ಕೀಟ ನಾಶಕ ವಿತರಣೆ ಹಾಗೂ ಹೈಟೆಕ್​ ಹಾರ್ವೆಸ್ಟ್​ ಹಬ್​ ಯೋಜನೆ ಅಡಿ ಸಂಗಪ್ಪ ಹಲಿಯಾಳ ಅವರಿಗೆ ಬಹುಬೆಳೆ ಹೈಟೆಕ್​ ಕಟಾವು ಯಂತ್ರ ವಿತರಿಸಿದರು.

ಬೈಕ್​ನಲ್ಲಿ ಸಚಿವರ ಸಂಚಾರಹೆಬ್ಬಳ್ಳಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ್ದ ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಸಚಿವರು ರೈತನ ಬೈಕ್​ ಮೇಲೆ ಸಂಚಾರ ನಡೆಸಿ ಎಲ್ಲರ ಗಮನ ಸೆಳೆದರು. ಗ್ರಾಮದಲ್ಲಿ ರೈತರಿಗೆ ಸವಲತ್ತುಗಳನ್ನು ವಿತರಿಸಿದ ಬಳಿಕ ಅಲ್ಲೇ ಇದ್ದ ರೈತನ ಬೈಕ್​ ಏರಿದ ಸಚಿವರು, ರೈತರ ತಾಕುಗಳಿಗೆ ಭೇಟಿ ನೀಡುವುದರ ಜತೆಗೆ ಕೆಲ ಜಮೀನಿಗೆ ತೆರಳಿ ಬೆಳೆಗಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net