ಹಾಲು ದರ ಕಡಿತದಿಂದ ರೈತರಿಗೆ ಅನ್ಯಾಯ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆಕ್ರೋಶ

1 (3)
Published on

ಮಂಡ್ಯ: ಉತ್ಪಾದಕರಿಂದ ಖರೀದಿ ಮಾಡುವ ಹಾಲಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್) 1.75 ರೂ ಕಡಿತ ಮಾಡುವ ಮೂಲಕ ನಷ್ಟದ ಹಾದಿಯನ್ನು ತೋರಿಸಿದೆ. ಸದಾ ರೈತರ ಪರವಾಗಿದ್ದೇವೆ ಎಂದು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬಂದ ಮೂರು ತಿಂಗಳಲ್ಲೇ ರೈತರ ಹೊಟ್ಟೆ ಮೇಲೆ ಬರೆ ಎಳೆಯುವ ಪ್ರಯತ್ನ ಮಾಡಿರುವುದನ್ನು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ 9.93 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಆರ್ಥಿಕ ಸಮತೋಲನದ ದೃಷ್ಟಿಯಿಂದ ಒಕ್ಕೂಟಕ್ಕೆ ನಷ್ಟವಾಗುವುದನ್ನು ತಪ್ಪಿಸುವ ಉದ್ದೇಶದಿಂದ ರೈತರಿಗೆ ನೀಡುವ ದರದಲ್ಲಿ 1.75 ರೂ. ಕಡಿತಗೊಳಿಸುವ ನಿರ್ಧಾರವನ್ನು ಮನ್‌ಮುಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವುದು ಅವೈಜ್ಞಾನಿಕವಾಗಿದೆ ಎಂದು ಕಿಡಿಕಾರಿದ್ದಾರೆ.

ಪಶು ಆಹಾರ ಬೆಲೆ ದುಬಾರಿಯಾಗಿದೆ, ಮಳೆ ಕೊರತೆಯಿಂದಾಗಿ ಪಶುಗಳಿಗೆ ಹುಲ್ಲಿನ ಕೊರತೆ ಎದುರಾಗಿದೆ. ಮುಂಗಾರು ಸರಿಯಾಗಿ ಬಾರದ ಕಾರಣ ಮಳೆ ಕೊರತೆ ಎದುರಾಗಿದೆ. ಇದರಿಂದಾಗಿ ಕೆಆರ್‌ಎಸ್ ಡ್ಯಾಂಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಾರದೆ ಈ ಬಾರಿ ಮುಂಗಾರು ಬೆಳೆಗೆ ನೀರೊದಗಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಇಂತಹ ಸಂಕಷ್ಟ ಸಮಯದಲ್ಲಿ ರೈತರ ಕೈಹಿಡಿಯಬೇಕಾದ ಸರ್ಕಾರ ಹೈನೋದ್ಯಮದಲ್ಲೂ ಹಾಲಿನ ಖರೀದಿ ದರ ಇಳಿಸಿದರೆ ಉತ್ಪಾದಕರು ತೊಂದರೆಗೆ ಸಿಲುಕುತ್ತಾರೆ ಎಂಬ ಕನಿಷ್ಟ ಜ್ಞಾನವೂ ಇಲ್ಲದ ಆಡಳಿತ ಮಂಡಳಿ ದರ ಇಳಿಕೆ ಮಾಡಿ ರೈತರಿಗೆ ಪೆಟ್ಟು ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲು ಉತ್ಪಾದಕರ ಸಂಕಷ್ಟವನ್ನು ಗಮನಿಸಿದ್ದ ಪ್ರಪ್ರಥಮ ಬಾರಿಗೆ 4 ರೂಗಳನ್ನು ಪ್ರೋತ್ಸಾಹ ಧನವಾಗಿ ಸರ್ಕಾರ ನೀಡಲು ಆರಂಭಿಸಿತ್ತು. ಆದರೆ ಒಕ್ಕೂಟಗಳು ಮಾತ್ರ ಹಲವಾರು ಹಗರಣಗಳನ್ನು ಮಾಡಿ ನಷ್ಟವನ್ನುಂಟು ಮಾಡುತ್ತಲೇ ರೈತರ ಮೇಲೆ ಬಲಪ್ರಯೋಗಕ್ಕೆ ಸಿದ್ಧವಾಗಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇನ್ನು ಕೇಂದ್ರದಲ್ಲಿ ಆಡಳಿತಕ್ಕೆ ಬಂದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರ ಅನುಕೂಲಕ್ಕಾಗಿ ಕಿಸಾನ್ ಸಮ್ಮಾನ್ ಮೂಲಕ ರೈತರಿಗೆ ವಾರ್ಷಿಕ 6 ಸಾವಿರ ರೂ ನೀಡುವ ಯೋಜನೆ ರೂಪಿಸಿತ್ತು. ಅಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿ.ಎಸ್. ಯಡಿಯೂರಪ್ಪ ಅವರು 4 ಸಾವಿರ ರೂ ಸೇರಿಸಿ ಒಟ್ಟು ರೈತರಿಗೆ 10 ಸಾವಿರ ರೂ ವಾರ್ಷಿಕ ಸಿಗುವಂತಹ ಯೋಜನೆ ರೂಪಿಸಿದ್ದವು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರಿಗೆ ನೀಡುತ್ತಿದ್ದ 4 ಸಾವಿರ ರೂ.ಗಳ ಕಿಸಾನ್ ಸಮ್ಮಾನ್ ಯೋಜನೆಯನ್ನೇ ನಿಲ್ಲಿಸಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ರೈತರಿಗೆ ನೀಡುತ್ತಿದ್ದ ಇಂತಹ ಯೋಜನೆಗಳನ್ನು ನಿಲ್ಲಿಸಿ ರೈತರು, ಜನಸಾಮಾನ್ಯರಿಗೆ ಅನ್ಯಾಯ ಮಾಡಲು ಹೊರಟಿದೆ. ತಕ್ಷಣ ಈ ಯೋಜನೆಯನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net