

ಕುಶಾಲನಗರ: ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಶೇ.10 ರಷ್ಟು ಇಳಿಕೆ ಕಂಡು ಬಂದಿರುವುದು ಸಮಾಧಾನದ ವಿಚಾರ ಎಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಕೆ.ಎನ್.ಶಿವಕುಮಾರ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಶಾಲನಗರ ತಾಲೂಕು ಆರೋಗ್ಯ ಇಲಾಖೆ ಹಾಗೂ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಆಸ್ಪತ್ರೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ನವಜಾತ ಶಿಶುಗಳ ಸಪ್ತಾಹ-2023 ಕಾರ್ಯಕ್ರಮದಲ್ಲಿ ಮಾತನಾಡಿದರು. ನವಜಾತ ಶಿಶುಗಳ ಮರಣ ಶೇ.40ರಷ್ಟು ಪ್ರಮಾಣ ಹೆರಿಗೆಯ ಮೊದಲ ದಿನ ಸಂಭವಿಸುತ್ತದೆ. ಉಳಿದಂತೆ ಜನನವಾದ ಪ್ರಥಮ ವಾರದಲ್ಲಿ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
2023ರ ಅಂತ್ಯದೊಳಗೆ ನವಜಾತ ಶಿಶುಗಳ ಮರಣ ಸಂಖ್ಯೆಯನ್ನು ಶೂನ್ಯಗೊಳಿಸುವ ಗುರಿ ಆರೋಗ್ಯ ಇಲಾಖೆಯದ್ದಾಗಿದೆ. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಸ್ಥಿರೀಕರಣ ಘಟಕ ಚಾಲನೆಯಲ್ಲಿದ್ದು, ಕಡಿಮೆ ತೂಕ ಮತ್ತು ಜಾಂಡೀಸ್ ರೋಗಭಾದಿತ ಶಿಶುಗಳ ಆರೈಕೆ ಮಾಡಲಾಗುತ್ತಿದೆ. ಇಂತಹ ಸೌಲಭ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನವಜಾತ ಶಿಶುಗಳ ಪೋಷಣೆ ಮಾಡುವಂತೆ ಕರೆ ನೀಡಿದರು.
ಕುಶಾಲನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಧುಸೂದನ್ ಮಾತನಾಡಿ, ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಒಂದು ವಾರ ನಡೆಯಲಿದ್ದು, ಆ ಸಂದರ್ಭ ತಾಯಂದಿರಿಗೆ ಹಾಲು ಉಣಿಸುವ ಬಗ್ಗೆ ಮಾಹಿತಿ, ಕಡಿಮೆ ತೂಕದ ಮಕ್ಕಳ ಆರೈಕೆ ಬಗ್ಗೆ ವಿವರ ನೀಡಲಾಗುವುದು. ಅಂಗನವಾಡಿಗಳಿಗೆ ಭೇಟಿ ನೀಡಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ಆರೈಕೆಯ ಬಗ್ಗೆ ಸಮಗ್ರ ತರಬೇತಿ ಒದಗಿಸಲಾಗುವುದು. ಈ ನಡುವೆ ಮನೆ ಮನೆಗೆ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ಒದಗಿಸಿದರು.
ತಜ್ಞ ವೈದ್ಯೆ ಡಾ.ಪ್ರತಿಭಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಮಂಜುಳಾ ಮತ್ತಿತರರು ಇದ್ದರು.