ಕಟ್ಟಡ ಕಾರ್ಮಿಕ ಮಂಡಳಿ ವಿದ್ಯಾರ್ಥಿ ವೇತನದಲ್ಲಿ ಶೇ.80ರಷ್ಟು ಕಡಿತ

udp-citu
Published on

ಉಡುಪಿ: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾಯಿದೆ ಅಡಿಯಲ್ಲಿ ರಚಿತವಾದ ಕಲ್ಯಾಣ ಮಂಡಳಿಯಲ್ಲಿ ಬೋಗಸ್​ ಕಾರ್ಡುಗಳು ಹೆಚ್ಚಾಗಿವೆ ಎಂಬ ನೆಪವೊಡ್ಡಿ ಈ ಬಾರಿ ರಾಜ್ಯ ಸರ್ಕಾರ ಶೇ. 75 ರಿಂದ -80 ರಷ್ಟು ಸ್ಕಾಲರ್​ಶಿಪ್​ ಕಡಿತ ಮಾಡುತ್ತಿರುವುದು ಖಂಡನೀಯ ಎಂದು ಸಿಡಬ್ಲೂಎಫ್​ಐ ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ 1 ರಿಂದ 4 ತರಗತಿವರೆಗೆ 5000 ರೂ. ನೀಡಿತ್ತು. ಈಗ ಕೇವಲ 1100 ರೂ. ನೀಡಿದ್ದಾರೆ. 5 ರಿಂದ 8ನೇ ತರಗತಿವರೆಗೆ 8000 ಇತ್ತು. ಈಗ 1250 ರೂ., 9 ರಿಂದ 10ನೇ ತರಗತಿವರಿಗೆ 12000 ಇದ್ದದ್ದು 3000 ರೂ., ಪ್ರಥಮ ಮತ್ತು ದ್ವೀತಿಯ ಪಿಯುಸಿ 15000 ದಿಂದ 4600 ರೂ. ಪದವಿ 25000 ದಿಂದ 6000 ರೂ., ಸ್ನಾತಕೋತ್ತರ ಪದವಿ 35000 ದಿಂದ 10,000 ರೂ., ಪಾಲಿಟೆಕ್ನಿಕ್​, ಡಿಪ್ಲಮೋ, ಐಟಿಐ 20000ದಿಂದ 4600, ಬಿಎಸ್​ ನರ್ಸಿಂಗ್​, ಪ್ಯಾರಾ ಮೆಡಿಕಲ್​ 40,000 ದಿಂದ 10,000 ರೂ., ವೈದ್ಯಕಿಯ 60,000 ದಿಂದ 11000ಕ್ಕೆ ಇಳಿಕೆಯಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಸ್ಕಾಲರ್​ಶಿಪ್​ ಸಿಗುತ್ತದೆ ಎಂದು ಅನೇಕ ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಮಿಕ ಸಚಿವರ ಪ್ರಕಾರ ಹಿಂದಿನ ಸರಕಾರದಲ್ಲಿ ಬೋಗಸ್​ ಕಾರ್ಡುಗಳ ಸಂಖ್ಯೆ ಜಾಸ್ತಿ ಆಗಿದ್ದು, ಸ್ಕಾಲರ್​ಶಿಪ್​ ಹಾಕಿದವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ ಎಂದಿದ್ದಾರೆ. ಬೋಗಸ್​ ಕಾರ್ಡುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ನಿಜವಾಗಿದ್ದರೆ ಅದನ್ನು ರದ್ದುಪಡಿಸಬೇಕು. ಅದರ ಬದಲು ವಿದ್ಯಾರ್ಥಿವೇತನ ಕಡಿತ ಸಲ್ಲದು. ಸ್ಕಾಲರ್​ಶಿಪ್​ ನೀಡಲು ಹಣ ಇಲ್ಲ ಎನ್ನುತ್ತಿರುವ ಸರ್ಕಾರ 70 ಕೋಟಿ ರೂ. ನೀಡಿ ಲ್ಯಾಪ್​ ಟಾಪ್​ ಖರೀದಿಸಿರುವುದು ಏಕೆ ಎಂದು ಪ್ರಶ್ನಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಟ್ಟಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವೈದ್ಯಕಿಯ ತಪಾಸಣೆಗೆ ಒತ್ತಡ ಹೇರುತ್ತಿದೆ. ಜಿಲ್ಲೆಯ ಕಟ್ಟಡ ಕಾರ್ಮಿಕರು ಇದನ್ನು ಬಹಿಷ್ಕರಿಸಬೇಕು. ಕಳೆದ ಎರಡು ವರ್ಷಗಳಲ್ಲಿ ವೈದ್ಯಕಿಯ ತಪಾಸಣೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಕಲ್ಯಾಣ ಮಂಡಳಿ ಹಣ ಪೋಲು ಮಾಡಿದೆ. ಇದರಿಂದ ಸಾಮಾನ್ಯ ಕಾರ್ಮಿಕರಿಗೆ ಯಾವುದೇ ಪ್ರಯೋಜನ ಆಗಿಲ್ಲ. ತಪಾಸಣೆಯ ವರದಿಯನ್ನು ಅನೇಕ ಕಾರ್ಮಿಕರಿಗೆ ನೀಡಿಲ್ಲ. ಒಂದು ವೇಳೆ ಗಂಭೀರ ಕಾಯಿಲೆಗಳ ತಪಾಸಣೆ ಆದರೂ, ವೆಚ್ಚವನ್ನು ಕಲ್ಯಾಣ ಮಂಡಳಿ ಭರಿಸುತ್ತಿಲ್ಲ. ಇದು ಕೇವಲ ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆ
ಕಾರ್ಮಿಕ ಇಲಾಖೆ ಜನವಿರೋಧಿ ನೀತಿಯನ್ನು ವಿರುದ್ಧ ನ. 29 ರಂದು ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಎದುರು ಬೃಹತ್​ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸಿಐಟಿಯು ಮುಖಂಡರಾದ ಯು. ಶಿವಾನಂದ, ಸುರೇಶ ಕಲ್ಲಾಗರ, ಚಿಕ್ಕಮೊಗವೀರ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net