ಜಿಲ್ಲೆಯಲ್ಲಿ ತಗ್ಗಿದ ಪಟಾಕಿ ಹಾವಳಿ!

pataki (2)
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಪಟಾಕಿ ಸಿಡಿಸುವ ಪ್ರಮಾಣ ಕಡಿಮೆಯಾಗುತ್ತಿದೆ, ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ, ಹಸಿರು ಪಟಾಕಿಗಳಿಗಷ್ಟೇ ಅನುಮತಿ ಸೇರಿ ಇನ್ನಿತರ ಕಾರಣಗಳಿಂದ ಈ ಬಾರಿ ಪಟಾಕಿ ಹಾವಳಿ ಗಣನೀಯವಾಗಿ ತಗ್ಗಿದ್ದು ಯಾವುದೇ ಪಟಾಕಿ ದುರಂತದ ಗಂಭೀರ ಪ್ರಕರಣಗಳು ದಾಖಲಾಗಿಲ್ಲ.

ಕಳೆದ ವರ್ಷ ಆನೇಕಲ್ ತಾಲೂಕು ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 17 ಮಂದಿ ಸಜೀವ ದಹನವಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಈ ಬಾರಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು. ಆಯಾ ತಾಲೂಕು ತಹಸೀಲ್ದಾರ್‌ಗಳಿಗೆ ಜವಾಬ್ದಾರಿ ವಹಿಸಿದ್ದ ಜಿಲ್ಲಾಡಳಿತ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಅನ್ವಯ ಪಟಾಕಿ ದಾಸ್ತಾನು ಹಾಗೂ ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮವಹಿಸುವಂತೆ ತಾಕೀತು ಮಾಡಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತಗಳು ದೀಪಾವಳಿಗೆ ತಿಂಗಳು ಬಾಕಿ ಇರುವಂತೆಯೇ ಪಟಾಕಿ ಗೋದಾಮುಗಳು, ವ್ಯಾಪಾರದ ಜಾಗಗಳ ಬಗ್ಗೆ ನಿಗಾ ವಹಿಸಿತ್ತು. ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಆಯಾ ತಾಲೂಕು ವ್ಯಾಪ್ತಿಯಲ್ಲಿ ತೀವ್ರ ತಪಾಸಣೆ ಜತೆಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಇದರ ಲವಾಗಿ ಈ ಬಾರಿ ಪಟಾಕಿ ಹಾವಳಿ ಗಣನೀಯವಾಗಿ ತಗ್ಗಿದೆ ಎಂಬ ಮಾತು ಕೇಳಿಬರುತ್ತಿದೆ.

ಮಳೆರಾಯ ಅಡ್ಡಿ: ದೀಪಾವಳಿಯ ಮೂರು ದಿನವೂ ಜಿಲ್ಲೆಯ ಹಲವೆಡೆ ಮಳೆಯಾದ ಕಾರಣ ಪಟಾಕಿ ಸಿಡಿಸುವ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿತ್ತು. ಸಂಜೆ ವೇಳೆ ಕೆಲವಡೆ ಸುರಿದ ಧಾರಾಕಾರ ಮಳೆಯಿಂದ, ಜನರಲ್ಲೂ ಪಟಾಕಿ ಸಿಡಿಸುವ ಉತ್ಸಾಹ ಇಲ್ಲದಂತಾಯಿತು ಎಂಬ ಮಾತು ಕೇಳಿಬರುತ್ತಿದೆ.

ಪಟಾಕಿ ದರ ದುಬಾರಿ: ಎರಡು ದಿನ ದೀಪಾವಳಿ, ಕನ್ನಡ ರಾಜ್ಯೋತ್ಸವ ಸೇರಿ ವಾರಾಂತ್ಯದ ಸಾಲು ಸಾಲು ರಜೆಗಳಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಹಲವು ಕಡೆ ಉದ್ಯೋಗ ನಿಮಿತ್ತ ನೆಲೆಕಂಡುಕೊಂಡಿರುವ ಗ್ರಾಮಾಂತರ ಜಿಲ್ಲೆಯ ಬಹುತೇಕರು ತವರಿಗೆ ಮರಳಿದ್ದರು. ಈ ಬಾರಿ ಪಟಾಕಿ ಅಬ್ಬರವಾರಗಲಿದೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಈ ಬಾರಿ ಅದೆಲ್ಲ ತಲೆಕೆಳಗಾಗಿದೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪಟಾಕಿ ದರದಲ್ಲಿ ಭಾರಿ ಏರಿಕೆ ಕಂಡುಬಂದಿತ್ತು, ಜಿಲ್ಲಾಡಳಿತದ ಕಠಿಣ ಕ್ರಮದಿಂದಾಗಿ ಅಕ್ರಮವಾಗಿ ಪಟಾಕಿ ಮಾರಾಟವವರಿಗೆ ಕಡಿವಾಣ ಬಿದ್ದಿತ್ತು. ಹಸಿರು ಪಟಾಕಿಗಳಿಗಷ್ಟೇ ಅನುಮತಿ ಹಿನ್ನೆಲೆಯಲ್ಲಿ ಪಟಾಕಿ ವ್ಯಾಪಾರಿಗಳು ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ. ಪಟಾಕಿಗಳ ದಾಸ್ತಾನು ಸೇರಿ ಪಟಾಕಿ ಮಾರಾಟಕ್ಕೆ ನಿಗಧಿತ ಸ್ಥಳದ ನಿಗಧಿ ಮಾಡಿದ್ದರಿಂದ ಎಲ್ಲೆಂದರಲ್ಲಿ ಪಟಾಕಿ ಮಾರಲು ಅವಕಾಶವಿಲ್ಲದಂತಾಗಿತ್ತು. ಇದರಿಂದ ಬೆರಳೇಣಿಕೆಗಡೆಗಷ್ಟೇ ವ್ಯಾಪಾರ ಕಂಡುಬಂತು. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳೂ ಪಟಾಕಿ ದರ ಹೆಚ್ಚಿಸಿದ್ದರಿಂದ ಗ್ರಾಹಕರು ಪಟಾಕಿ ಖರೀದಿಗೆ ಹಿಂದೇಟು ಹಾಕುತ್ತಿದ್ದ ದೃಶ್ಯ ಕಂಡುಬಂತು.

ಸಣ್ಣಪುಟ್ಟ ಪ್ರಕರಣಗಳು: ದೊಡ್ಡಬಳ್ಳಾಪುರ, ನಂದಗುಡಿ, ದಾಬಸ್‌ಪೇಟೆ ವ್ಯಾಪ್ತಿಯಲ್ಲಿ ಪಟಾಕಿ ಸಿಡಿತದ ವೇಳೆ ಸಣ್ಣಪುಟ್ಟ ಗಾಯಗಳಾದ ಪ್ರಕರಣಗಳು ವರದಿಯಾಗಿದ್ದು ಹೊರತುಪಡಿಸಿ ಯಾವುದೇ ಗಂಭೀರ ಪ್ರಕರಣಗಳು ದಾಖಲಾಗಿಲ್ಲ ಎಂದು ಜಿಲ್ಲಾ ಅರೋಗ್ಯ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಪಟಾಕಿ ದುರಂತಗಳಲ್ಲಿ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಅದೃಷ್ಟವಶಾತ್ ಯಾವುದೇ ದುರಂತಗಳು ವರದಿಯಾಗಿಲ್ಲ ಎನ್ನಲಾಗಿದೆ.

ಜಿಲ್ಲೆಯಲ್ಲಿ ಪಟಾಕಿ ದಾಸ್ತಾನು ಹಾಗೂ ಮಾರಾಟದ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು. ಎಲ್ಲಿಯೂ ಅಕ್ರಮ ಮಾರಾಟಕ್ಕೆ ಅವಕಾಶವಿರಲಿಲ್ಲ. ಜತೆಗೆ ಜನರಲ್ಲಿ ಮೂಡಿಸಿರುವ ಪರಿಸರ ಜಾಗೃತಿ ಕೈ ಹಿಡಿದಿದೆ. ಪಟಾಕಿ ದರ ದುಬಾರಿಯಾಗಿರುವುದು, ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ಜನರಲ್ಲಿನ ಸ್ವಯಂ ಜಾಗೃತಿ ಈ ಬಾರಿ ಪಟಾಕಿ ಹಾವಳಿಗೆ ಕಡಿವಾಣ ಹಾಕಿದೆ, ಅದೃಷ್ಟವಶಾತ್ ಜಿಲ್ಲೆಯಲ್ಲಿ ಎಲ್ಲಿಯೂ ಪಟಾಕಿ ದುರಂತದ ಗಂಭೀರ ಪ್ರಕರಣ ದಾಖಲಾಗಿಲ್ಲ.

ಡಾ.ಸುನೀಲ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net