

ಸಿದ್ದಾಪುರ: ಅನುತ್ಪಾದಕ ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ಸದಸ್ಯರು ಮುಂದಾಗಬೇಕು ಎಂದು ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ಸಿದ್ದಾಪುರ(ಟಿಎಂಎಸ್) ಇದರ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.
ಪಟ್ಟಣದ ಟಿಎಂಎಸ್ನ ವ್ಯಾಪಾರಾಂಗಣದಲ್ಲಿ ಬುಧವಾರ ನಡೆದ ಸಂಘದ 76ನೇ ವಾರ್ಷಿಕ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ರಾಜ್ಯದಾದ್ಯಂತ ಅಡಕೆ ಬೆಳೆಯುವ ಪ್ರದೇಶ ಹೆಚ್ಚುತ್ತಿದೆ. ಅಡಕೆ ಬೆಳೆಯೂ ಹೆಚ್ಚಾಗುತ್ತಿದೆ. ಮುಂದಿನ ದಿನದಲ್ಲಿ ಈಗಿರುವ ಅಡಕೆ ಧಾರಣೆಯೇ ಇರುತ್ತದೆ ಎಂದು ಹೇಳಲಾಗದು. ಅಡಕೆ ಬೆಳೆಯುವ ಪ್ರದೇಶದಲ್ಲಿ ಉಪ ಉತ್ಪನ್ನಗಳನ್ನು ಬೆಳೆಯಬೇಕಾಗಿದೆ ಎಂದರು.
ಸಂಘ ಅನೇಕ ಸಂಕಷ್ಟಗಳನ್ನು ಎದುರಿಸಿ ಇಂದು ಸಶಕ್ತವಾಗಿ ಬೆಳೆದಿದೆ. ಸದಸ್ಯರ ಅನುಕೂಲತೆಯನ್ನು ಪೂರೈಸುವಲ್ಲಿ ಸಂಘ ಪ್ರಾಮಾಣಿಕವಾದ ಪ್ರಯತ್ನಮಾಡುತ್ತಿದೆ. ಸಂಘವು 2022-23ನೇ ಸಾಲಿನಲ್ಲಿ ಎಲ್ಲ ವೆಚ್ಚಗಳನ್ನು ತೆಗೆದು 7.78ಕೋಟಿ ರೂ. ನಿಕ್ಕಿ ಲಾಭಗಳಿಸಿದೆ. ಇಕ್ಕೆ ಸಂಘದ ಎಲ್ಲ ಸದಸ್ಯರ ಪ್ರಾಮಾಣಿಕ ವ್ಯವಹಾರ, ಅಡಳಿತ ಮಂಡಳಿಯ ಮಾರ್ಗದರ್ಶನ, ಸಲಹೆ ಹಾಗೂ ಸಿಬ್ಬಂದಿಯ ಸೇವೆ ಕಾರಣವಾಗಿದೆ ಎಂದರು.
ಸಂಘವು ಅಡಕೆ ಖರೀದಿ ವಿಭಾಗದಲ್ಲಿ, ಧವಸ ಧಾನ್ಯ ಎಪಿಎಂಸಿ ವಿಭಾಗದಲ್ಲಿ , ಅಕ್ಕಿಗಿರಣಿ ವಿಭಾಗದಲ್ಲಿ ಹಾಗೂ ಕಟ್ಟಡ ಸಾಮಗ್ರಿ ವಿಭಾಗದಲ್ಲಿ ಸ್ವಲ್ಪ ಮಟ್ಟಿನ ಹಾನಿ ಅನುಭವಿಸಿದೆ. ಸಂಘ ಸದಸ್ಯರ ಬೇಡಿಕೆಗಳನ್ನು ಪೂರೈಸುವಲ್ಲಿ ಯಾವಾಗಲೂ ಸಿದ್ಧ ಇದೆ. ಪ್ರಾಥಮಿಕ ಸಹಕಾರಿ ಸಂಘಗಳು ಹಾಗೂ ಸದಸ್ಯರು ಪತ್ತು ಮಾರಾಟ ಜೋಡೆಣೆಯಲ್ಲಿ ತಮ್ಮನ್ನು ಮತ್ತಷ್ಟು ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಸಂಘವು ಮುಂದಿನ ದಿನದಲ್ಲಿ ಪೆಟ್ರೋಲ್ ಬಂಕ್ ಹಾಗೂ ಸುಸಜ್ಜಿತವಾದ ಗೋಡೌನನ್ನು ತೆರಯುವ ಉದ್ದೇಶ ಹೊಂದಿದೆ ಎಂದು ಆರ್.ಎಂ.ಹೆಗಡೆ ತಿಳಿಸಿದರು.
ಪತ್ತು ಮತ್ತು ಮಾರಾಟ ಜೋಡಣೆಯಲ್ಲಿ ಅತಿ ಹೆಚ್ಚು ಅಡಕೆ ವಿಕ್ರಿಮಾಡಿದ ದೋಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಪ್ರಥಮ, ತಾರೇಹಳ್ಳಿ- ಕಾನಸೂರು ಸಂಘ ದ್ವಿತೀಯ ಹಾಗೂ ಹೆಗ್ಗರಣಿ ಸೇವಾ ಸಂಹಕಾರಿ ಬ್ಯಾಂಕ್ ತೃತೀಯ ಸ್ಥಾನ ಪಡೆದಿದ್ದು ಮೂರು ಸಂಘಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ವ್ಯವಸ್ಥಾಪಕ ಸತೀಶ ಎಸ್.ಹೆಗಡೆ, ಪ್ರಸನ್ನಕುಮಾರ ಭಟ್ಟ ವಾರ್ಷಿಕ ವರದಿ ವಾಚಿಸಿದರು.
ಸಂಘದ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ ಸ್ವಾಗತಿಸಿದರು, ಜಿ.ಜಿ.ಹೆಗಡೆ ಬಾಳಗೋಡ ನಿರ್ವಹಿಸಿದರು. ನಿರ್ದೇಶಕ ಜಿ.ಎಂ.ಭಟ್ಟ ಕಾಜಿನಮನೆ ವಂದಿಸಿದರು.
ಗಜಾನನ ಹೆಗಡೆ ಕೊಳಗದ್ದೆ, ನಾರಾಯಣ ಮೂರ್ತಿ ಕೊಳಗದ್ದೆ, ಭಾಸ್ಕರ ಹೆಗಡೆ ಹೊನ್ನೆಮಡ್ಕಿ, ರಾಮನಾಥ ಹೆಗಡೆ ತಲೆಕೆರೆ, ಭಾಗೀರಥಿ ಹೆಗಡೆ ಮುತ್ತಿಗೆ, ಮೃತ್ಯುಂಜಯ ಗೌಡ ಬೇಡ್ಕಣಿ, ಗಣಪತಿ ಶೇಟ್ ಕಿಲವಳ್ಳಿ, ನಾರಾಯಣ ನಾಯ್ಕ ಬಾಳಗೋಡ, ಚೌಡಿ ರಾಮಾ ನಾಯ್ಕ ಹೊನ್ನೆಬೀಡಾ, ಮಂಜ ಗೌಡ ಮರಲ್ಗಿ, ಕನ್ನ ನಾಯ್ಕ ಕಡಕೇರಿ ಅವರನ್ನು ಗೌರವಿಸಲಾಯಿತು. ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ಹತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕರಾಟೆಯಲ್ಲಿ ವಿಶೇಷ ಸಾಧನೆ ಮಾಡಿದ ಆನಂದ ಕೃಷ್ಣ ನಾಯ್ಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾ ಅಣ್ಣಪ್ಪ ನಾಯ್ಕ ಸುತ್ಲಮನೆ ಅವರನ್ನು ಗೌರವಿಸಲಾಯಿತು.