ನೌಕರರ ಕೆಲಸದ ಒತ್ತಡ ಕಡಿಮೆ ಮಾಡಲಿ

4 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರಿ ನೌಕರರು ಇಂದು ಬಹಳಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.66 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿ ನೌಕರರ ಒತ್ತಡ ಕಡಿಮೆ ಮಾಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ವತಿಯಿಂದ ಭಾನುವಾರ ಆಯೋಜಿಸಿದ್ದ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ, ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು 7ನೇ ವೇತನ ಆಯೋಗ ಜಾರಿಗೆ ಸಹಕರಿಸಿದ ಶಾಸಕರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರ ಸರ್ಕಾರ ಹಾಗೂ ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಾನೆ. ಸರ್ಕಾರದ ವರ್ಚಸ್ಸು ನೌಕರನ ಕಾರ್ಯ ಕ್ಷಮತೆ ಮೇಲೆ ನಿಂತಿರುತ್ತದೆ. ಪ್ರತಿ ನೌಕರ ಸರ್ಕಾರದ ರಾಯಭಾರಿಯಂತೆ ಕರ್ತವ್ಯ ನಿರ್ವಹಿಸಿ ಸರ್ಕಾರದ ಬಗ್ಗೆ ಅಭಿಪ್ರಾಯ ಮೂಡಿಸುತ್ತಾನೆ. ನೌಕರರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಯೋಜನೆಗಳನ್ನು, ಅರ್ಹರನ್ನು ಹುಡುಕಿ ತಲುಪಿಸುವ ಸವಾಲು, ಜವಾಬ್ದಾರಿ ನೌಕರರ ಮೇಲಿದೆ ಎಂದರು.
ಶಾಸಕ ಎನ್​.ಎಚ್​.ಕೋನರಡ್ಡಿ ಮಾತನಾಡಿ, ನೌಕರರ ಹಿತ ಕಾಪಾಡಲು ಮತ್ತು ಪ್ರೋತ್ಸಾಹಿಸಲು 7ನೇ ವೇತನ ಆಯೋಗ ಜಾರಿ ಮಾಡಿದೆ. ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಿ ರೈತರಿಗೆ, ಅಸಹಾಯಕರಿಗೆ ಯೋಜನೆಗಳನ್ನು ತಲುಪಿಸಬೇಕು. ನೌಕರರ ಬೇಡಿಕೆ ಆಗಿರುವ ಎನ್​ಪಿಎಸ್​ ರದ್ದು ಗೊಳಿಸಿ, ಓಪಿಎಸ್​ ಜಾರಿಗೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಶಾಸಕರು ಮುಖ್ಯಮಂತ್ರಿ ಮನವೊಲಿಸಲಿದ್ದೇವೆ. ನೌಕರರಿಗೆ ಒಪಿಎಸ್​ ನೀಡುವುದು ನಮ್ಮ ಗ್ಯಾರಂಟಿ ಆಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್​. ಷಡಾಕ್ಷರಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ವೈಶುದೀಪ ಪ್ರತಿಷ್ಠಾನದ ಅಧ್ಯಕ್ಷ ಶಿವಲೀಲಾ ಕುಲಕರ್ಣಿ ಮಾತನಾಡಿದರು. ನೌಕರರ ಜಿಲ್ಲಾ ಸಂಘದ ಪರ ಎಸ್ಸೆಸ್ಸೆಲ್ಸಿಯ 70 ಹಾಗೂ ಪಿಯುಸಿಯ 90 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಎಸ್​.ಎಫ್​.ಸಿದ್ದನಗೌಡರ ಅಧ್ಯಕ್ಷತೆ ವಹಿಸಿದ್ದರು. ದೇವಿದಾಸ ಶಾಂತಿಕರ, ಗಿರೀಶ ಚೌಡಕಿ, ರಾಜೇಶ ಕೋನರಡ್ಡಿ, ಡಾ. ಪ್ರಲ್ಹಾದ ಗೆಜ್ಜಿ, ಎ.ಬಿ.ಕೊಪ್ಪದ, ಆರ್​.ಎಂ. ಹೊಲ್ತಿಕೋಟಿ, ಮುತ್ತಪ್ಪ ಅಣ್ಣಿಗೇರಿ, ಡಾ.ಸುರೇಶ ಹಿರೇಮಠ, ಪಿ.ಬಿ.ಕುರಬೆಟ್ಟ, ಗಜಾನನ ಕಟಗಿ, ಇತರರು ಇದ್ದರು.
ಮಂಜುನಾಥ ಯಡಳ್ಳಿ ಸ್ವಾಗತಿಸಿದರು. ರಮೇಶ ಲಿಂಗದಾಳ ನಿರೂಪಿಸಿದರು. ಮಲ್ಲಿಕಾರ್ಜುನ ಸೊಲಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net