

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದರ ಜತೆಗೆ ಎಲ್ಲೆಂದರಲ್ಲಿ ಕಸ ಎಸೆಯುವು ದನ್ನು ನಿಲ್ಲಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ ಲೋಕನಾಥ ಸಲಹೆ ನೀಡಿದರು.
ಮಾನಸಗಂಗೋತ್ರಿಯ ಪರಿಸರ ಅಧ್ಯಯನ ವಿಭಾಗದ ವತಿಯಿಂದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ‘ಪರಿಸರ, ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿ’ ಎಂಬ ಪ್ರಸಕ್ತ ಸಾಲಿನ ಧ್ಯೇಯವಾಕ್ಯ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ ಅವುಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಪ್ರತಿ ವರ್ಷ ಜೂ.5 ರಂದು ಜಗತ್ತಿನಾದ್ಯಂತ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆಯಾದರೂ ಅಂದು ತೆಗೆದಯಕೊಳ್ಳುವ ನಿರ್ಣಯಗಳನ್ನು ಸಮರ್ಪಕಪಕವಾಗಿ ಜಾರಿಗೊಳಿಸದ ಕಾರಣ ನೀರಿಕ್ಷಿತ ಮಟ್ಟದಲ್ಲಿ ಜೀವಗೋಳಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಇದರಿಂದ ಪ್ರತಿ ವರ್ಷ ಪರಿಸರ ವಿರೋಧಿ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತದಲೇ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆ ಬಗ್ಗೆ ಇತರರಿಗೆ ಹೇಳುವ ಮೊದಲು ಆ ನಿಟ್ಟಿನಲ್ಲಿ ನಾವು ನಡೆದುಕೊಳ್ಳುತ್ತಿದ್ದೇವೆಯೇ ಎಂದು ಒಮ್ಮೆ ಯೋಚಿಸ ಬೇಕಿದೆ. ನಮ್ಮ ಅವಶ್ಯಕತೆಗೂ ಮಿಗಿಲಾಗಿ ಪ್ಲಾಸ್ಟಿಕ್ ಬಳಕೆ, ವಾಹನಗಳ ಖರೀದಿ.., ಹೀಗೆ ಮಾಲಿನ್ಯಕಾರಕ ವಸ್ತುಗಳ ಬಳಕೆ ನಿತ್ಯ ಹೆಚ್ಚಳವಾಗುತ್ತಿದ್ದು, ಸಾಧ್ಯವಾದಷ್ಟು ಕಡಿವಾಣ ಹಾಕುವಂತೆ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಹುಟ್ಟುಹಬ್ಬದ ಹೆಸರಿನಲ್ಲಿ ವಿದ್ಯಾರ್ಥಿಗಳು ಬಳುಸುವ ಪರಿಸರ ವಿರೋಧಿ ವಸ್ತುಗಳು ಸಾಕಷ್ಟಿವೆ. ಆಚರಣೆ ಮಾಡುವುದು ಸರಿಯಲ್ಲ ಎಂದು ಯಾರೂ ಹೇಳುವುದಿಲ್ಲ. ನಮ್ಮ ಸಂತೋಷದ ಜತೆಗೆ ನಮಗಿರುವ ಜವಾಬ್ದಾರಿಗಳನ್ನೂ ಮರೆಯಬಾರದು. ಕ್ಯಾಂಪಸ್ ಅನ್ನು ಸುಂದರವಾಗಿ ಇಡುವ ನಿಟ್ಟಿನಲ್ಲಿ ನೌಕರರು ಸಾಕಷ್ಟು ಶ್ರಮ ಹಾಕುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಇಂದು ಜೀವಗೋಳದಲ್ಲಿ ಸಾಕಷ್ಟು ಏರುಪೇರುಗಳು ಸಂಭವಿಸುತ್ತಿವೆ. ಇದರಿಂದ ಹಲವಾರು ಪ್ರಾಣಿ-ಪಕ್ಷಿಗಳು ಈಗಾಗಲೇ ಕಣ್ಮರೆಯಾಗಿದ್ದು, ಇನ್ನೂ ಕೆಲವು ಅಳಿವಿನ ತುದಿಮುಟ್ಟಿವೆ. ಹಾಗಾಗಿ ನಮ್ಮ ಆದ್ಯತೆ ಪ್ಲಾಸ್ಟಿಕ್ ತ್ಯಜಿಸುವುದು ಮಾತ್ರವಾಗಿರದೆ, ಜೀವ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಿದೆ. ಈ ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಇದರ ಬಗ್ಗೆ ಹೆಚ್ಚು ಚಿಂತಿಸಬೇಕು ಎಂದು ಹೇಳಿದರು.
ತಂತ್ರಜ್ಞಾನದಲ್ಲಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ನಮ್ಮೆಲ್ಲರ ಬದುಕಿಗೆ ಅಗತ್ಯವಾಗಿರುವ ಪರಿಸರವನ್ನು ಸಂರಕ್ಷಿಕೊಳ್ಳುವಲ್ಲಿ ನಾವು ಹಿಂದೆ ಉಳಿಯುತ್ತಿದ್ದೇವೆ. ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಇರಬೇಕು. ಸಾಲುಮರದ ತಿಮ್ಮಕ್ಕನಂತಹ ಹಿರಿಯರು ನಮಗೆ ಆದರ್ಶವಾಗಬೇಕು. ಪರಿಸರ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.
ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಕಾರಿ ಡಾ. ಕೆ.ಎನ್.ಬಸವರಾಜು ಸಮಾರಂಭ ಉದ್ಘಾಟಿಸಿದರು. ಕುಲಸಚಿವೆ ವಿ.ಆರ್ ಶೈಲಜಾ, ವಿಭಾಗದ ಮುಖ್ಯಸ್ಥ ಡಾ.ಜಿ.ವಿ ವೆಂಕಟರಮಣ ಇತರರಿದ್ದರು.