ಉದ್ದಿಮೆಗಳ ಮೇಲಿನ ಆಸ್ತಿತೆರಿಗೆ ಭಾರ ಇಳಿಸಲಿ: ಸರ್ಕಾರಕ್ಕೆ ಎಫ್​​​ಕೆಸಿಸಿಐ ಅಧ್ಯಕ್ಷರ ಮನವಿ

fkcci prsdt
Published on

ಬೆಂಗಳೂರು: ಕೈಗಾರಿಕೆ ಘಟಕಗಳಿಗೆ ಆಸ್ತಿತೆರಿಗೆ ವಿಧಿಸುವುದನ್ನು ಮಾರುಕಟ್ಟೆ ಮಾರ್ಗಸೂಚಿ ದರ ಆಧರಿಸಿ ವಿಧಿಸುತ್ತಿರುವುದು ಅವೈಜ್ಞಾನ ವಿಧಾನವಾಗಿದೆ. ಇದರ ಬದಲು ಉದ್ದಿಮೆ ಬೆಳವಣಿಗೆಗೆ ಪೂರಕವಾದ ದರ ನಿಗದಿ ಮಾಡುವ ಮೂಲಕ ಕೈಗಾರಿಕೋದ್ಯಮಿಗಳಿಗೆ ಅನುಕುಲ ಮಾಡಿಕೊಡಬೇಕು ಎಂದು ಎ್ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹೊಸ ತೆರಿಗೆ ಪದ್ಧತಿ ಜಾರಿಯಾದ ಬಳಿಕ ಸಣ್ಣ ಕೈಗಾರಿಕೆ ಸಹಿತ ಎಲ್ಲ ವರ್ಗದ ಇಂಡಸ್ಟ್ರಿಗೆ ಕರಭಾರದ ಹೊರೆ ಹೆಚ್ಚಾಗಿದೆ. ಮುಖ್ಯವಾಗಿ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ದಿಷ್ಟ ಮಾನದಂಡ ಇಲ್ಲದೇ ಮನಸೋಇಚ್ಛೆ ಶುಲ್ಕ ವಿಧಿಸಲಾಗುತ್ತಿದೆ. ಖಾಲಿ ಜಾಗಕ್ಕೂ ಹೆಚ್ಚಿನ ದರ ವಿಧಿಸುತ್ತಿರುವುದರಿಂದ ಸಣ್ಣ ವಿಸ್ತೀರ್ಣದ ಕೈಗಾರಿಕೆ ಪ್ಲಾಟ್‌ಗೆ ಲಕ್ಷಾಂತರ ರೂ. ತೆರಿಗೆ ಪಾವತಿಸುವಂತಾಗಿದೆ. ಇದರ ಬದಲು ಕೈಗಾರಿಕೆ ಸ್ನೇಹಿ ರೀತಿಯಲ್ಲಿ ತೆರಿಗೆ ವಿಧಿಸುವ ಕ್ರಮವನ್ನು ಪರಿಷ್ಕರಿಸಿ ಅನುಷ್ಠಾನಕ್ಕೆ ತರಬೇಕಿದೆ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಸಮಸ್ಯೆ ಬಹಳಷ್ಟಿದೆ. ಪಟ್ಟಣಗಳು ಹಾಗೂ ಪಂಚಾಯ್ತಿ ವ್ಯಾಪ್ತಿಯಲ್ಲು ಇ-ಖಾತಾ ಸಿಗದೆ ಉದ್ದಿಮೆದಾರರು ಪ್ರಯಾಸಪಡುತ್ತಿದ್ದಾರೆ. ಇದರಿಂದ ಸಂಬಂಧಿತ ಕಚೇರಿಗಳಲ್ಲಿ ಬೇಗನೆ ಕೆಲಸ ಆಗುತ್ತಿಲ್ಲ. ಕೆಲವೊಂದು ಸಮಸ್ಯೆಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ನೀಡಿದ್ದರೂ, ಅವುಗಳಿನ್ನೂ ಅಧಿಕಾರಿ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಆಸ್ತಿಗಳಿಗೆ ಇ-ಖಾತಾ ನೀಡುವ ವಿಧಾನ ಸರಿ ಇದ್ದರೂ, ಅದರ ಜಾರಿಯಲ್ಲಿ ನಾನಾ ಸಮಸ್ಯೆಗಳಿವೆ. ನಗರಾಭಿವೃದ್ಧಿ, ಪೌರಾಡಳಿತ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಸಮನ್ವಯ ಆಗದೆ ಸಮಸ್ಯೆ ಮುಂದುವರಿದಿದೆ. ಈ ಸಮಸ್ಯೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಸ್ಪಷ್ಟ ಪರಿಹಾರ ಒದಗಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಏಕರೂಪದ ಕನಿಷ್ಠವೇತನ ಸೂಕ್ತ:

ಇಡೀ ದೇಶದಲ್ಲಿ ಕರ್ನಾಟಕವು ಕನಿಷ್ಠವೇತನ ನೀಡುತ್ತಿರುವ ರಾಜ್ಯವಾಗಿದೆ. ಈಗ ಮತ್ತೆ ಹೆಚ್ಚಳದ ಪ್ರಸ್ತಾಪ ಇದೆ. ಕನಿಷ್ಠವೇತನ ನಿಗದಿ ಕುರಿತು ಇತ್ತೀಚಿಗೆ ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕ ಉದ್ಯೋಗದಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಭರವಸೆ ದೊರೆತಿದೆ. ಆದರೆ, ಒಂದು ರಾಜ್ಯದಲ್ಲಿ ಹೆಚ್ಚು ಮೊತ್ತ ನೀಡಿ ನೆರೆ ರಾಜ್ಯಗಳು ಸೇರಿ ಇನ್ನಿತರೆಡೆ ಕಡಿಮೆ ಮೊತ್ತ ಪಾವತಿಸುವ ವಿಧಾನ ಅವೈಜ್ಞಾನಿಕವಾಗಲಿದೆ. ಇದು ಕಾರ್ಮಿಕರಿಗೆ ತಾರತಮ್ಯ ಮಾಡಿದಂತೆಯೂ ಆಗಲಿದೆ. ಹಾಗಾಗಿ ಇಡೀ ದೇಶಕ್ಕೆ ಅನ್ವಯವಾಗುವ ಏಕರೂಪದ ಕನಿಷ್ಠ ವೇತನ ನೀಡುವ ಪದ್ಧತಿಯನ್ನು ತರಲು ಸರ್ಕಾರ ಆಲೋಚಿಸಬೇಕು ಎಂದು ಬಾಲಕೃಷ್ಣ ಅಭಿಪ್ರಾಯಪಟ್ಟರು.

ಮೂಲಸೌಕರ್ಯ ಕಲ್ಪಿಸಲಿ:

ಕೆಐಎಡಿಬಿ ನಿರ್ವಹಿಸುತ್ತಿರುವ ಕೈಗಾರಿಕೆ ವಸಾಹತುಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ರಸ್ತೆ ಸೇರಿ ವಿವಿಧ ಸೌಲಭ್ಯಗಳು ಇನ್ನೂ ಸಿಕ್ಕಿಲ್ಲ. ವಸಾಹತು ರಚಿಸುವ ವೇಳೆಯೆ ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆ, ತರಬೇತಿ ಕೇಂದ್ರ ಹಾಗೂ ಭವಿಷ್ಯದ ವಿಸ್ತರಣೆಗೆ ಬೇಕಾದ ಜಾಗವನ್ನು ಮೀಸಲಿಟ್ಟಲ್ಲಿ ಉದ್ಯಮ ನಡೆಸಲು ಅನುಕೂಲವಾಗುತ್ತದೆ. ಮುಖ್ಯವಾಗಿ ಕೋರ್ಟ್ ಆದೇಶಿರುವಂತೆ ತೆರಿಗೆಯ ಪಾಲಿನ ಶೇ.70ಅನ್ನು ಆಯಾ ಕೇಂದ್ರಗಳಲ್ಲಿ ಮೂಲಸೌಕರ್ಯಕ್ಕೆ ವಿನಿಯೋಗಿಸಿ ಉಳಿದಿದ್ದನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅವರು ತಿಳಿಸಿದರು.

ಏಕಗವಾಕ್ಷಿ ವ್ಯವಸ್ಥೆ ಸುಧಾರಿಸಲಿ:

ಕೈಗಾರಿಕೆ ಸ್ಥಾಪನೆ ಹಾಗೂ ವಿಸ್ತರಣೆ ಸಂಬಂಧ ಪರವಾನಗಿ ಹಾಗೂ ಇನ್ನಿತರ ದಾಖಲೆ ಪತ್ರಗಳನ್ನು ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಇದೆ. ಆದರೆ, ಇದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅರ್ಜಿದಾರರಿಂದ ಯಾವ ಇಲಾಖೆಗೆ, ಯಾವ ಪ್ರಮಾಣಪತ್ರ ಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲ. ಇದರಿಂದ ಉದ್ದಿಮೆ ಸ್ಥಾಪನೆ ವಿಳಂಬವಾಗುತ್ತಿದ್ದು, ಹೊಸಬರಿಗೆ ಆರ್ಥಿಕ ಹೊರೆಯೂ ಆಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗುಜರಾತ್ ಮಾದರಿಯಲ್ಲಿ ಎಲ್ಲ ಪರವಾನಗಿಯನ್ನು ಒಂದೇ ವ್ಯವಸ್ಥೆ ಮೂಲಕ ವಿತರಿಸುವ ವಿಧಾನವನ್ನು ಸರ್ಕಾರ ಜಾರಿಗೆ ತರಲಿ ಎಂದು ಬಾಲಕೃಷ್ಣ ಆಶಿಸಿದರು.

ಉದ್ದಿಮೆ ಬೆಳವಣಿಗೆ ಸರ್ಕಾರದಿಂದ ಆಗಬೇಕಾದ ಪ್ರಮುಖಾಂಶ:

* ಕೈಗಾರಿಕೆಗೆ ಜಮೀನು ಪರಿವರ್ತನೆ, ಪ್ರಮಾಣಪತ್ರ ವಿತರಣೆ ವಿಧಾನ ಸರಳೀಕರಣ

* ಸಣ್ಣ ಉದ್ದಿಮೆದಾರರಿಗೆ ಸಬ್ಸಿಡಿ, ಇನ್ನಿತರ ಸೌಲಭ್ಯ ಸಕಾಲಕ್ಕೆ ಬಿಡುಗಡೆ

* ಹೊಸ ಕೈಗಾರಿಕೆ ನೀತಿಯಲ್ಲಿ ಎಲ್ಲ ವರ್ಗಗಳ ಉದ್ದಿಮೆಗಳ ಬೆಳವಣಿಗೆಗೆ ನೆರವು

* ಬ್ಯಾಂಕ್ ಸಾಲ, ಅಡಮಾನಕ್ಕೆ ಅಡ್ಡಿಯಾಗದಂತೆ ಇ-ಖಾತಾ ನೀಡಿಕೆಗೆ ತ್ವರಿತ ಕ್ರಮ

* ಕೆಲಸಗಾರರಿಗೆ ಕೌಶಲ ಹೆಚ್ಚಿಸುವ ಯೋಜನೆ, ಕಾರ್ಯಕ್ರಮಕ್ಕೆ ಉತ್ತೇಜನ ನೀಡುವುದು

* ರಾಜ್ಯಕ್ಕೆ ಲಾಭವಾಗುವಂತೆ ಬೆಂಗಳೂರಿಗೆ 2ನೇ ವಿಮಾನನಿಲ್ದಾಣದ ಜಾಗ ಗುರುತಿಸುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net