ಪುನರ್ವಿಂಗಡಣೆಯಿಂದ ಜಿಲ್ಲೆಗೆ ಅನ್ಯಾಯ

9adarshkdga1
Published on

ಆದರ್ಶ್ ಅದ್ಕಲೇಗಾರ್ ಮಡಿಕೇರಿ

ಸರ್ಕಾರ ಹೊರಡಿಸಿರುವ ಕೊಡಗು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಪಟ್ಟಿಯಲ್ಲಿ ಈ ಹಿಂದೆ ಇದ್ದ ಒಟ್ಟು ೨೯ ಜಿ.ಪಂ. ಕ್ಷೇತ್ರಗಳ ಪೈಕಿ ೪ ಕ್ಷೇತ್ರಗಳು ಕಡಿಮೆಯಾದ ಹಿನ್ನೆಲೆ ಜಿಲ್ಲೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.


ಕೊಡಗು ಜಿಲ್ಲೆಯಲ್ಲಿದ್ದ ೨೯ ಜಿ.ಪಂ. ಕ್ಷೇತ್ರಗಳನ್ನು ೨೫ ಕ್ಷೇತ್ರಗಳಿಗೆ ಪುನರ್ವಿಂಗಡಣೆ ಮಾಡಲಾಗಿದೆ. ಮಡಿಕೇರಿ ತಾಲೂಕಿನ ಮಕ್ಕಂದೂರು, ಕಾಂತೂರು ಮೂರ್ನಾಡು, ನಾಪೋಕ್ಲು, ಸಂಪಾಜೆ, ಭಾಗಮಂಡಲ, ಚೆಯ್ಯಂಡಾಣೆ(ನರಿಯಂದಡ), ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ, ಶನಿವಾರಸಂತೆ, ಬಳಗುಂದ, ಶಾಂತಳ್ಳಿ, ಮಾದಾಪುರ, ಕುಶಾಲನಗರ ತಾಲೂಕಿನ ವಾಲ್ನೂರು ತ್ಯಾಗತ್ತೂರು, ಗುಡ್ಡೆಹೊಸೂರು, ಕೂಡುಮಂಗಳೂರು, ಕೂಡಿಗೆ, ಸುಂಟಿಕೊಪ್ಪ, ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ, ಚೆನ್ನಯ್ಯನಕೋಟೆ, ಅಮ್ಮತ್ತಿ, ಕಾಕೋಟುಪರಂಬು, ಪೊನ್ನಂಪೇಟೆ ತಾಲೂಕಿನ ಬಾಳೆಲೆ, ಗೋಣಿಕೊಪ್ಪಲು, ತಿತಿಮತಿ, ಶ್ರೀಮಂಗಲ, ಪೊನ್ನಂಪೇಟೆ ಕ್ಷೇತ್ರಗಳಾಗಿ ಪುನರ್ವಿಂಗಡಣೆ ಮಾಡಲಾಗಿದೆ.


ಕಳೆದ ಕೆಲವು ವರ್ಷಗಳ ಹಿಂದೆ ನಡೆದ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲೂ ಕೊಡಗು ಜಿಲ್ಲೆಗೆ ಅನ್ಯಾಯವಾಗಿತ್ತು. ಇದರಿಂದಾಗಿ ೩ ವಿಧಾನಸಭಾ ಕ್ಷೇತ್ರವಿದ್ದ ಕೊಡಗಿನಲ್ಲಿ ೨ ಕ್ಷೇತ್ರವಾಯಿತು. ಆ ಸಂದರ್ಭದಲ್ಲಿಯೂ ಕೊಡಗಿನಿಂದ ವ್ಯಾಪಕ ಪ್ರತಿರೋಧ ವ್ಯಕ್ತಗೊಳ್ಳಲಿಲ್ಲ. ಅಂದು ವಿಶೇಷ ಪ್ರಕರಣದಡಿ ವಿನಾಯಿತಿ ಪಡೆಯುವ ಯಾವ ಪ್ರಯತ್ನವೂ ನಡೆಯಲಿಲ್ಲ. ವಿಧಾನಸಭಾ ಕ್ಷೇತ್ರವೊಂದು ಕಡಿಮೆಯಾಗಿದ್ದು ಕೊಡಗಿನ ಅಭಿವೃದ್ಧಿಗೆ ಬಹುದೊಡ್ಡ ಹಿನ್ನಡೆಯಾಯಿತು. ಜಿ.ಪಂ.ಯಲ್ಲಿ ಸರ್ಕಾರದ ವಿವಿಧ ಯೋಜನೆಯ ಅನುದಾನವನ್ನು ಕ್ಷೇತ್ರವಾರು ಹಂಚಿಕೆ ಮಾಡಲಾಗುತ್ತದೆ. ಕ್ಷೇತ್ರ ಕಡಿಮೆಯಾದಷ್ಟು ಅನುದಾನವು ಕಡಿಮೆಯಾಗಲಿದೆ. ಇದು ಕ್ಷೇತ್ರಗಳ ಅಭಿವೃದ್ಧಿ ಮೇಲೆ ಭಾರಿ ಪರಿಣಾಮ ಬೀರಲಿದೆ. ಆದ್ದರಿಂದ ಈ ಕುರಿತು ಕೊಡಗಿನಿಂದ ಮತ್ತಷ್ಟು ಗಟ್ಟಿ ಧ್ವನಿಗಳು ಮೊಳಗಬೇಕಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಸಂಬಂಧ ಪಕ್ಷದ ಮುಖಂಡರ ಮತ್ತು ಸಾರ್ವಜನಿಕರ ಅಭಿಪ್ರಾಯ ಲೌಡ್‌ಸ್ಪೀಕರ್‌ನಲ್ಲಿ ಅನಾವರಣಗೊಂಡಿದೆ.

ಪ್ರತೀ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಗರಿಷ್ಠ ೨೫ ಸಾವಿರ, ಕನಿಷ್ಠ ೨೦ ಸಾವಿರ ಜನಸಂಖ್ಯೆ ಆಧರಿಸಿ ವಿಂಗಡಣೆ ಮಾಡಿ ರೂಪಿಸಬೇಕು ಎಂಬ ನಿಯಮ ಪಂಚಾಯತ್ ರಾಜ್ ಕಾಯ್ದೆಯಲ್ಲಿದೆ. ಇದರಂತೆ ಜಿಲ್ಲೆಗೆ ೩೪ ಕ್ಷೇತ್ರ ಇರಬೇಕು. ಇಲ್ಲಿ ಹೆಚ್ಚುವರಿ ಗ್ರಾಮಗಳನ್ನು ಸೇರಿಸಿ ೨೫ ಕ್ಷೇತ್ರ ರೂಪಿಸಿರುವುದು ಅವೈಜ್ಞಾನಿಕ.
ಬಾನಂಡ ಪ್ರತ್ಯು, ಮಾಜಿ ಸದಸ್ಯರು, ಜಿಲ್ಲಾ ಪಂಚಾಯಿತಿ

ಸರ್ಕಾರದ ಜನಗಣತಿ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡಿರುವ ಫಲವೇ ನಾವು ೪ ಕೇತ್ರಗಳನ್ನು ಕಳೆದುಕೊಂಡಿದ್ದೇವೆ. ಗುಡ್ಡಗಾಡು ಕೊಡಗನ್ನು ಇತರ ಜಿಲ್ಲೆಗಳಿಗೆ ಹೋಲಿಸಬಾರದು. ಕ್ಷೇತ್ರಗಳು ಕಡಿಮೆ ಆದರೆ ಸರ್ಕಾರದಿಂದ ಬರುವ ಅನುದಾನ ಕಡಿಮೆಯಾಗಿ ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳುತ್ತದೆ. ಈ ಹಿಂದೆ ಎಷ್ಟು ಕ್ಷೇತ್ರಗಳಿದ್ದವು ಅದನ್ನೆ ಪುನಾವರ್ತಿಸಲಿ.
ಅಮ್ಮಣಿಚಂಡ ರಾಜನಂಜಪ್ಪ, ಕಾರ್ಯದರ್ಶಿ, ಅಖಿಲ ಕೊಡವ ಸಮಾಜ

ಹಿಂದೆ ಇದ್ದ ಮೂರು ವಿಧಾನಸಭಾ ಕೇತ್ರ ಎರಡಕ್ಕಿಳಿಯಿತು. ಕ್ಷೇತ್ರ ವಿಂಗಡಣೆಯಿಂದ ೨೯ರಿಂದ ೨೫ಕ್ಕೆ ಇಳಿಯಿತು. ಸರ್ಕಾರದ ಇಂತಹ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಕೊಡಗು ಕರ್ನಾಟಕದ ಭೂಪಟದಿಂದ ನಶಿಸಿ ಹೋದರು ಅಚ್ಚರಿ ಪಡುವಂತಿಲ್ಲ. ಕ್ಷೇತ್ರ ಮರು ವಿಂಗಡಣೆಯ ಬಗ್ಗೆ ಜನಪ್ರತಿನಿಧಿಗಳು ಮದ್ಯ ಪ್ರವೇಶಿಸಿ ಮರು ಪರೀಶಿಲನೆ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು.
ಪಿ.ಎ.ಮಂಜುನಾಥ್, ಜೆಡಿಎಸ್ ಅಧ್ಯಕ್ಷರು, ವಿರಾಜಪೇಟೆ ತಾಲೂಕು

ತರಾತುರಿಯಲ್ಲಿ ಚುನಾವಣೆ ನಡೆಸಲು ಸ್ಥಳೀಯ ಪಂಚಾಯಿತಿಗಳ ಕ್ಷೇತ್ರ ವಿಂಗಡಣೆ ಅವೈಜ್ಞಾನಿಕವಾಗಿದೆ. ಜನಸಂಖ್ಯೆಯ ಅಥವಾ ಭೌಗೋಳಿಕ ಮಾನದಂಡದಲ್ಲಿ ವಿಂಗಡಿಸಲಾಗಿದೆಯೇ ಎಂಬುದು ಸ್ಪಷ್ಟತೆಯಿಲ್ಲ. ಈ ಕಾರ್ಯಕ್ರಮವನ್ಮು ಆರು ತಿಂಗಳ ಹಿಂದೆಯೇ ಮಾಡಬೇಕಾಗಿತ್ತು. ಯಾರ ಒತ್ತಡಕ್ಕೆ ಮಾಡಿದ್ದಾರೊ ಗೊತ್ತಿಲ್ಲ.
ಕೆ.ಪಿ.ದಿನೇಶ್, ಮಾಜಿ ಸದಸ್ಯರು, ಐಗೂರು ಗ್ರಾ.ಪಂ.

ಕೊಡಗು ಜಿಲ್ಲೆಯನ್ನು ಕರ್ನಾಟಕ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿಕೊಂಡು ಬಂದಿದೆ. ೩ ವಿಧಾನಸಭಾ ಕ್ಷೇತ್ರಗಳನ್ನು ೨ ಕ್ಷೇತ್ರಕ್ಕೆ ಇಳಿಸಿದೆ. ಈಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಕಡಿಮೆ ಮಾಡುತ್ತಿರುವುದು ದೊಡ್ಡ ಅನ್ಯಾಯ. ಜನಪ್ರತಿನಿಧಿಗಳು ಕೊಂಚ ಗಮನಹರಿಸಬೇಕು.
ಎ.ಎಸ್.ಕುಮಾರ್, ಉದ್ಯಮಿ, ಕುಶಾಲನಗರ

ಜಿ.ಪಂ. ಕ್ಷೇತ್ರ ಕುಸಿತದಿಂದ ಅಷ್ಟಾಗಿ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ. ಜಿ.ಪಂ.ಗೆ ೪ ಜನಪ್ರತಿನಿಧಿಗಳು ಕಡಿಮೆಯಾಗುತ್ತಾರೆ ಅಷ್ಟೇ. ಈಗ ರಸ್ತೆ ಮಾಡುವಲ್ಲಿ ರಸ್ತೆ ಮಾಡಲೇಬೇಕು. ಮನೆ ನೀಡುವಲ್ಲಿ ಮನೆ ನೀಡಲೇಬೇಕು. ಅನುದಾನ ಹಂಚಿಕೆಯಲ್ಲೂ ಅಂತಹ ಗಂಭೀರ ಪ್ರಮಾಣದ ವ್ಯತ್ಯಾಸಗಳು ಆಗುವುದಿಲ್ಲ.
ಕಣಿವೆ ಭಾರದ್ವಾಜ್, ರಾಜಕೀಯ ವಿಶ್ಲೇಷಕ

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರ ವಿಂಗಡಣೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಸೇರಿಸಿಕೊಳ್ಳಲಾಗಿದೆ. ಈ ನಡುವೆ ಮುಳ್ಳುಸೋಗೆ ಗ್ರಾ.ಪಂ. ನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಿ ವಿಂಗಡಣೆ ಮಾಡಲಾಗಿದೆ. ವಿಧಾನಸಭಾ ಚುನಾವಣೆ ಜತೆಯಲ್ಲೇ ನೂತನ ತಾಲೂಕ್ಕಾಗಿ ಘೋಷಣೆಯಾಗಿರುವ ಕುಶಾಲನಗರ ತಾ.ಪಂ ಚುನಾವಣೆ ನಡೆದರೆ ಉತ್ತಮ.
ರೂಪ ವಿನೋದ್, ಗೃಹಿಣಿ, ಕುಶಾಲನಗರ

ಜಿ.ಪಂ ಚುನಾವಣೆ ಮುಂದೂಡುವ ದೃಷ್ಟಿಯಿಂದ ಕ್ಷೇತ್ರಗಳನ್ನು ಅವೈಜ್ಞಾನಿಕವಾಗಿ ಪುನರ್ ವಿಂಗಡಣೆ ಮಾಡಲಾಗಿದೆ. ಜಿಲ್ಲೆಯ ೨೯ ಕ್ಷೇತ್ರಗಳನ್ನು ೨೫ ಕ್ಷೇತ್ರಗಳಿಗೆ ಸೀಮಿತಗೊಳಿಸಿರುವುದರಿಂದ ಅನುದಾನದ ಕೊರತೆಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ. ಈಗಿನ ಜನಸಂಖ್ಯೆ ಆಧಾರದ ಮೇಲೆ ಜಿಲ್ಲೆಯ ೨೯ ಕ್ಷೇತ್ರಗಳನ್ನು ಹೆಚ್ಚಿಸುವ ಕೆಲಸ ಮಾಡಬೇಕಿತ್ತು. ಅದರ ಬದಲು ಇರುವ ಕ್ಷೇತ್ರಗಳನ್ನು ಕಡಿತಗೊಳಿಸುವ ಮೂಲಕ ಜಿಲ್ಲೆಗೆ ಅನ್ಯಾಯ ಮಾಡಲಾಗುತ್ತಿದೆ. ಹೀಗಿದ್ದೂ ಜಿಲ್ಲೆಯ ಶಾಸಕರು ಈ ಬಗ್ಗೆ ದನಿ ಎತ್ತದಿರುವುದು ಆಶ್ಚರ್ಯ ಮೂಡಿಸಿದೆ.
ಧರ್ಮಜಾ ಉತ್ತಪ್ಪ, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಸರ್ಕಾರ ಮಾಡಿದ್ದಲ್ಲ. ಚುನಾವಣಾ ಕಮಿಷನ್ ಮಾಡಿದೆ. ಆಕ್ಷೇಪಣೆ ಸಲ್ಲಿಸಲು ಜ೧೬ವರೆಗೆ ಸಮಯಾವಕಾಶವಿದೆ. ಯಾರು ಬೇಕಾದರೂ ಆಕ್ಷೇಪಣೆ ಸಲ್ಲಿಸಬಹುದು.
ರಾಬೀನ್ ದೇವಯ್ಯ, ಅಧ್ಯಕ್ಷರು, ಜಿಲ್ಲಾ ಬಿಜೆಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net