ರೆಡಿಮೇಡ್ ಆಹಾರದಿಂದ ಕಾಡಲಿದೆ ಅನಾರೋಗ್ಯ: ಪೌಷ್ಟಿಕ ಆಹಾರ ಸೇವನೆ ಉಪಯೋಗ ಶಿಬಿರದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿಕೆ

Kailancha
Published on

ಕೈಲಾಂಚ: ಇತ್ತೀಚಿನ ದಿನಗಳಲ್ಲಿ ಮನುಷ್ಯ ಆಧುನಿಕತೆಗೆ ಒಗ್ಗಿಕೊಂಡು ಸನಿಹದಲ್ಲೇ ಸಿಗುವ ಉತ್ತಮ ಆಹಾರ ಪದಾರ್ಥಗಳನ್ನು ಕಡೆಗಣಿಸಿ ರೆಡಿಮೇಡ್ ಆಹಾರದ ಕಡೆಗೆ ಮುಖ ಮಾಡಿರುವುದರಿಂದ ಆರೋಗ್ಯ ಸಮಸ್ಯೆಗಳು ಕಾಣತೊಡಗಿವೆ ಎಂದು ಶಾಸಕಿ ಅನಿತಾಕುಮಾರಸ್ವಾಮಿ ಹೇಳಿದರು.

ಕೈಲಾಂಚ ಹೋಬಳಿ ವಡ್ಡರಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಹುಣಸನಹಳ್ಳಿ, ಹುಲಿಕೆರೆ-ಗುನ್ನೂರು, ಕೈಲಾಂಚ ಗ್ರಾಪಂ ವ್ಯಾಪ್ತಿಯ ಗರ್ಭಿಣಿ, ಬಾಣಂತಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಪೌಷ್ಟಿಕ ಆಹಾರ ಸೇವನೆ ಉಪಯೋಗ ಶಿಬಿರದಲ್ಲಿ ಮಾತನಾಡಿದರು. ಮನುಷ್ಯ ಆರೋಗ್ಯವಂತನಾಗಿರಲು ಹಣ್ಣು, ರಾಗಿ, ಜೋಳ, ಸೊಪ್ಪು, ಕಾಳುಗಳನ್ನು ಸೇವಿಸಬೇಕು, ಆದರೆ ಸರಿಯಾದ ಕ್ರಮದ ಆಹಾರ ಸೇವನೆ ಮಾಡದೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದರು.

ಕೈಲಾಂಚ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ತುಳಸೀರಾಮ್ ಮಾತನಾಡಿ, ಎಲ್ಲ ತರಹದ ಸೊಪ್ಪು, ಮೊಳಕೆ ಕಾಳು, ಹಣ್ಣುಗಳು, ಕಾಳು, ರಾಗಿ ಮುದ್ದೆ, ರೊಟ್ಟಿ, ಮೊಟ್ಟೆಯನ್ನು ಸರಿಯಾದ ಕ್ರಮದಲ್ಲಿ ತಿನ್ನುತ್ತಾ ಬಂದರೆ ಪೌಷ್ಟಿಕಾಂಶ ಕೊರತೆ ಉಂಟಾಗುವುದಿಲ್ಲ ಮತ್ತು ಮಕ್ಕಳು ಕೂಡ ಅಪೌಷ್ಟಿಕತೆಯಿಂದ ಬಳಲುವುದಿಲ್ಲ ಎಂದು ತಿಳಿಸಿದರು. ಮಾಜಿ ಉಪಾಧ್ಯಕ್ಷ ವಡ್ಡರಹಳ್ಳಿ ವೆಂಕಟೇಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶಿವಮ್ಮ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಪಿಡಿಒ ಸತೀಶ್, ಗ್ರಾಪಂ ಸದಸ್ಯರಾದ ಬೋರಯ್ಯ, ಗಿರಿಜಾ, ಶೋಭಾ, ಗೋಪಾಲನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net