ರೆಡ್ಡಿ ಪ್ರಕರಣ ‘ನಲ್ ಆಂಡ್ ವೈಡ್’ ಆಗಲಿದೆ

new Ramulu new
Published on

ಹುಬ್ಬಳ್ಳಿ : ಕೆಳ ಹಂತದ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಅಪರಾಧಿ ಎನ್ನಲು ಆಗುವುದಿಲ್ಲ. ಸುಪ್ರೀಂ ಕೋರ್ಟ್ ರೆಡ್ಡಿ ಅವರನ್ನು ಅಪರಾಧಿ ಎಂದಿಲ್ಲ. ಪ್ರಕರಣಕ್ಕೆ ತಡೆಯಾಜ್ಞೆ ದೊರೆಯುವ ಭರವಸೆ ಇದ್ದು, ಸುಪ್ರೀಂ ಕೋರ್ಟ್​ನಲ್ಲಿ ‘ನಲ್ ಆಂಡ್ ವೈಡ್’ ಆಗಲಿದೆ. ಅವರಿಗೆ ಒಳ್ಳೆಯದಾಗುತ್ತದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ರಾಜಕೀಯವಾಗಿ ಗಾಲಿ ಜನಾರ್ಧನ ರೆಡ್ಡಿ ಅವರನ್ನು ತೆಗಳಿರಬಹುದು. ಆದರೆ, ಅವರು ನನ್ನ ಆತ್ಮೀಯ ಸ್ನೇಹಿತ. ಅವರಿಗೆ ವೈಯಕ್ತಿಕವಾಗಿ ಎಂದಿಗೂ ಕೆಟ್ಟದ್ದನ್ನು ಬಯಸಿಲ್ಲ ಎಂದರು.

ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣಕ್ಕೆ ಇತಿಶ್ರೀ ಬೀಳಲಿದ್ದು, ಗಂಗಾವತಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದಿಲ್ಲ. ಶಾಸಕ ಸತೀಶ ಸೈಲ್ ಪ್ರಕರಣದಂತೆ ರೆಡ್ಡಿ ಪ್ರಕರಣವೂ ಖುಲಾಸೆಯಾಗುತ್ತದೆ ಎಂದು ಹೇಳಿದರು.

ಹೊಸಪೇಟೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬರೀ ಸುಳ್ಳು ಆರೋಪಗಳನ್ನೇ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈಬಿಟ್ಟು ಹೋಗುವ ಆತಂಕ ಎದುರಾಗಿದೆ. ಇದೇ ಕಾರಣಕ್ಕೆ 6ನೇ ಗ್ಯಾರಂಟಿ ಯೋಜನೆ ಪ್ರಕಟಿಸಿದ್ದಾರೆ ಎಂದು ಟೀಕಿಸಿದರು.

ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿಲ್ಲ. ಎಲ್ಲ ರಾಜ್ಯಗಳನ್ನು ಸಮಾನವಾಗಿಯೇ ಪರಿಗಣಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆಗೆ ಸಿದ್ಧ. ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದವರು ಸುಳ್ಳು ಮಾತನಾಡುವ ಮೂಲಕ ಜನರ ದಾರಿ ತಪ್ಪಿಸಬಾರದು ಎಂದರು.

ಸಮಾವೇಶದಲ್ಲಿ ಮಾರುದ್ದ ಭಾಷಣ ಮಾಡಿದ ರಾಹುಲ್ ಗಾಂಧಿ, ವಾಲ್ಮೀಕಿ ನಿಗಮದ ಹಣದ ನುಂಗಿದ ಮಾಜಿ ಸಚಿವ ನಾಗೇಂದ್ರ ಅವರನ್ನು ಪಕ್ಕಕ್ಕೆ ಕೂಡಿಸಿಕೊಂಡು, ಪ.ಜಾತಿ, ಪಂಗಡದ ಹಾಗೂ ಹಿಂದುಳಿದವರ ಕಲ್ಯಾಣದ ಬಗ್ಗೆ ಮಾತನಾಡಿರುವುದು ಹಾಸ್ಯಾಸ್ಪದವಾಗಿದೆ. ನಾವೇನೂ ಕಿವಿಗೆ ಹೂವು ಇಟ್ಟುಕೊಂಡಅತೆ ಕಾಣುತ್ತೆವೇಯೇ ? ಎಂದು ಪ್ರಶ್ನಿಸಿದರು.

ಹಣ ಹಿಂದಿರುಗಿಸಿದರೆ ಮತ್ತೆ ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರಂತೆ. ಹೀಗಾಗಿ ನಿಗಮದ 20 ಕೋಟಿ ಹಣವನ್ನು ತುಕಾರಾಂ ಅವರಿಗೆ ನೀಡಿರುವುದಾಗಿ ಒಪ್ಪಿಕೊಂಡಿರುವ ನಾಗೇಂದ್ರ, ಅದನ್ನು ವಸೂಲಿ ಮಾಡಲು ಓಡಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ನಾಡಿನ ಜನ ಸಂಕಷ್ಟದಲ್ಲಿ ಇದ್ದಾರೆ. ಆದರೆ, ಇದಾವುದೂ ಮುಖ್ಯಮಂತ್ರಿ ಅವರಿಗೆ ಕಾಣಿಸುತ್ತಿಲ್ಲ. ಅವರು ಮುಸ್ಲಿಂ ತುಷ್ಟೀಕರಣದಲ್ಲಿ ಬ್ಯೂಸಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಕೊಲೆಗಳಾಗುತ್ತಿವೆ. ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಆಡಳಿತ ಯಂತ್ರ ಕೋಮಾಕ್ಕೆ ಜಾರಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ. ಹೆದ್ದಾರಿ, ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ನೀಡುತ್ತಿಲ್ಲ. ನೀರಾವರಿ, ಕೃಷಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಕೆಲಸಗಳು ಆಗುತ್ತಿಲ್ಲ. ಶಾಸಕರಿಗೆ ಅನುದಾನ ನೀಡುತ್ತಿಲ್ಲ ಎಂದು ದೂರಿದರು.

ರಾಜ್ಯ ಸರ್ಕಾರ ಉಚಿತ ಗ್ಯಾರಂಟಿಗಳನ್ನೇನೋ ನೀಡಿದೆ. ಆದರೆ, ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಬಂಗಾರದ ಚಮಚ ಬಾಯಲ್ಲಿ ಇಟ್ಟುಕೊಂಡಿರುವ ಸಚಿವ ದಿನೇಶ ಗುಂಡೂರಾವ್ ಅವರಿಗೆ ಬಡವರ ಆರೋಗ್ಯದ ಬಗ್ಗೆ ಕಾಳಜಿಯೇ ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಶುಲ್ಕ ಏರಿಕೆ ಮಾಡುವ ಮೂಲಕ ಬಡವರ ಬಗ್ಗೆ ಇರುವ ನಿಷ್ಕಾಳಜಿಯನ್ನು ಅವರು ಪ್ರದರ್ಶಿಸಿದ್ದಾರೆ ಎಂದರು.

ಉನ್ನತ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು ಪೆಹಲ್ಗಾಮ್ ದಾಳಿ ಬಗ್ಗೆ ಪ್ರಧಾನಿ ಅವರಿಗೆ ಮುಂಚೆಯೇ ಮಾಹಿತಿ ಇತ್ತೆಂಬ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಖರ್ಗೆ ಅವರೇನು ಗುಪ್ತಚರ ಇಲಾಖೆಯ ಮುಖ್ಯಸ್ಥರೇ ? ಎಂದು ಟೀಕಿಸಿದರು.

‘ಕರ್ನಾಟಕದ ಜನರ ಬದುಕಿಗೆ ಶಾಪವಾದ ವಸೂಲಿ ಸರ್ಕಾರ’ ಎಂಬ ಕಿರು ಕೃತಿಯನ್ನು ಬಿ. ಶ್ರೀರಾಮುಲು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಡಾ. ಕ್ರಾಂತಿಕಿರಣ, ರವಿ ನಾಯಕ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net