

ಹುಬ್ಬಳ್ಳಿ: ಶ್ರೀ ಹೇಮ-ವೇಮ ರಡ್ಡಿ ಸಮಾಜದ ಮುಂದಿನ ಸಮಾವೇಶವನ್ನು ಉತ್ತರ ಕರ್ನಾಟಕದಲ್ಲಿ ಮಾಡೋಣ, ಈಗಾಗಲೇ ದಕ್ಷಿಣ ಕರ್ನಾಟಕದಲ್ಲಿ ಸಮಾವೇಶ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ನಿಮಿತ್ತ ಧಾರವಾಡ ಜಿಲ್ಲೆ ಶ್ರೀ ಹೇಮ-ವೇಮ ರಡ್ಡಿ ಜನಸಂಘ ಸೇರಿ ವಿವಿಧ ಸಂಘ-ಸಂಸ್ಥೆಗಳಿಂದ ನಗರದ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾಜದ ನೂತನ ಶಾಸಕರಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಸಮಾಜದಿಂದ ಬಹಳಷ್ಟು ಶಾಸಕರು ಆಯ್ಕೆಯಾಗಿದ್ದೇವೆ. ಇನ್ನಷ್ಟು ಶಾಸಕರು ಆಯ್ಕೆಯಾಗಬೇಕಿತ್ತು. ಸಾಧ್ಯವಾಗಿಲ್ಲ. ನಮ್ಮ ಸಮಾಜದ ಜತೆಗೆ ಇತರ ಸಮಾಜಗಳನ್ನು ಗೌರವಿಸುತ್ತಿರುವುದರಿಂದ ಈ ಸ್ಥಾನಮಾನಗಳು ಲಭಿಸುತ್ತಿವೆ ಎಂದರು.
ರಡ್ಡಿ ಸಮಾಜವು ಸಂಘಟನಾತ್ಮಕವಾಗಿರಬೇಕು. ಇದರಿಂದ ಸರ್ಕಾರದಿಂದ ಸೌಲಭ್ಯ ಪಡೆಯಲು ಸಾಧ್ಯ. ನಮ್ಮ ಸಮಾಜದ ಮಠದ ಜಾಗ ಇದೆ. ನಾವೆಲ್ಲರೂ ಕೈ ಜೋಡಿಸಿ ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ತಾಯಿ ಹೇಮರಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನರ ಆದರ್ಶದಂತೆ ನಾವು ಬಾಳಬೇಕು. ನಾವು ಯಾವತ್ತಿದ್ದರೂ ನ್ಯಾಯಕ್ಕಾಗಿ ಹೋರಾಟ ಮಾಡುವವರು. ಅನ್ಯಾಯದ ವಿರುದ್ಧ ಸಿಡಿದೇಳುವ ಪ್ರವೃತ್ತಿ ನಮ್ಮದು. ರಾಜಕೀಯ ಹಾಗೂ ಸಾಮಾಜಿಕವಾಗಿ ನಾವು ಸೇವೆ ಸಲ್ಲಿಸಲು ಸಿದ್ಧರಿರಬೇಕು ಎಂದರು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಉಪನ್ಯಾಸ ನೀಡಿದರು. ಹರಿಹರ ಎರೆಹೊಸಹಳ್ಳಿ ರಡ್ಡಿ ಪೀಠದ ಶ್ರೀ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅಧ್ಯಕ್ಷತೆ ವಹಿಸಿದ್ದರು.
ನೂತನ ಶಾಸಕರು, ದಾನಿಗಳು ಹಾಗೂ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಲಾಯಿತು. ಶಾಸಕರಾದ ಜೆ.ಟಿ. ಪಾಟೀಲ, ಸಿ.ಎಸ್. ನಾಡಗೌಡ, ಚೆನ್ನಾರಡ್ಡಿ ಪಾಟೀಲ ತುನ್ನೂರು, ಪ್ರಕಾಶ ಕೋಳಿವಾಡ, ಮಾಜಿ ಸಚಿವ ಬಿ.ಆರ್. ಯಾವಗಲ್, ರಡ್ಡಿ ಜನಸಂಘದಿಂದ ಎನ್. ಶೇಖರಡ್ಡಿ, ಎಂ.ಎ. ಕೃಷ್ಣಾರಡ್ಡಿ, ಎ.ಎಂ. ಶ್ರೀನಿವಾಸರಡ್ಡಿ, ಎನ್. ಪ್ರತಾಪರಡ್ಡಿ, ಕವಿತಾ ರಡ್ಡಿ, ಎಂಎಲ್‌ಸಿಗಳಾದ ಶರಣಗೌಡ ಪಾಟೀಲ ಬಯ್ಯಪೂರ, ಪಿ.ಎಚ್. ಪೂಜಾರ, ಇತರರಿದ್ದರು.
ನಮ್ಮ ಸಮಾಜದ ಪೀಠದ ಬಳಿ ಇನ್ನಷ್ಟು ಜಮೀನು ಖರೀದಿಸಬೇಕು. ಶ್ರೀ ಶೈಲಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣ, ಶಾಲಾ-ಕಾಲೇಜ್ ಸ್ಥಾಪನೆ, 108 ಅಡಿ ಎತ್ತರದಲ್ಲಿ ಶಿವಲಿಂಗವನ್ನು ನಿರ್ಮಿಸಬೇಕು. ಈ ಬಗ್ಗೆ ಶಾಸಕರು, ಸಚಿವರ ಬಳಿ ವಿನಂತಿಸುತ್ತೇನೆ. ನಮ್ಮ ಸಮಾಜದವರೆಲ್ಲ ಸಹಕರಿಸಬೇಕು.ಜಿ. ಜನಾರ್ದನರಡ್ಡಿ, ಶಾಸಕ