

ಬಳ್ಳಾರಿ: ನಾನು ಬಳ್ಳಾರಿಗೆ ಬಂದಾಗ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಭಾಷಣ ಮಾಡೋಕೆ ಜಾಗ ಕೊಡದೆ ಅವಮಾನ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಹೇಳಿದರು.
ಇಲ್ಲಿನ ಸಂಡೂರು ವಿಧಾನಸಭಾ ಕ್ಷೇತ್ರದ ಬನ್ನಿಹಟ್ಟಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ದೇವಸ್ಥಾನದ ಬಾಗಿಲಲ್ಲಿ ಒಬ್ನೇ ನಿಂತು ಭಾಷಣ ಮಾಡಿ ಹೋಗಿದ್ದೆ. ಒಂದು ಮನೆಗೆ ಹೋಗಿ ಕುಡಿಯೋಕೆ ನೀರು ಕೇಳಿದ್ರೂ ನನಗೆ ನೀರು ಕೊಡೋಕೂ ಜನ ಭಯ ಬೀಳ್ತಿದ್ರು ಎಂದು ಉಲ್ಲೇಖಿಸಿದ ಸಿದ್ದರಾಮಯ್ಯ, ದಬ್ಬಾಳಿಕೆ, ದೌರ್ಜನ್ಯ, ರೆಡ್ಡಿ ದರ್ಬಾರ್ ಅವಧಿಯ ಘಟನೆಗಳು ಹೀಗಿತ್ತು ಎಂಸು ಆ ದಿನಗಳನ್ನು ನೆನಪಿಸಿದರು.
ಅಕ್ರಮ ಗಣಿಗಾರಿಕೆ ವಿರುದ್ಧ, ರೆಡ್ಡಿ ಬ್ರದರ್ಸ್ ಬಳ್ಳಾರಿಯನ್ನು ಹಾಳು ಮಾಡಲು ಬಿಡಬಾರದು ಎಂದು ನಾನು ಬೆಂಗಳೂರಿನಿಂದ ಪಾದಯಾತ್ರೆ ಮಾಡಿದೆ. ಬಳ್ಳಾರಿ ಜನರನ್ನು ಭಯಮುಕ್ತಗೊಳಿಸಿದ್ದು ಕಾಂಗ್ರೆಸ್ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಜಿಂದಾಲ್ಗೆ ಕಾಲಿಟ್ಟರೂ, ಜಿಲ್ಲಾ ಮಟ್ಟದ ಅಧಿಕಾರಿಗಳೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾಣಲು ಬರಲಿಲ್ಲ. ಆ ಮಟ್ಟದಲ್ಲಿ ಅಧಿಕಾರಿಗಳಲ್ಲಿ ಭಯ, ಭೀತಿ ಸೃಷ್ಟಿ ಮಾಡಿದ್ದರು. ನಾನು ಇಬ್ರಾಹಿಂ ಚುನಾವಣಾ ಪ್ರಚಾರಕ್ಕೆ ಬಂದರೆ ಕಾರ್ಯಕ್ರಮ ಮಾಡಲು, ನನಗೆ ಭಾಷಣ ಮಾಡಲು ಜಾಗ ಕೊಡಲಿಲ್ಲ. ದೇವಸ್ಥಾನದ ಬಾಗಿಲಲ್ಲಿ ನಾನು ಭಾಷಣ ಮಾಡಿ ಹೋದೆ. ಹೀಗಾಗಿ, ಮತ್ತೆ ಏನಾದರೂ ಜನಾರ್ಧನ ರೆಡ್ಡಿ ಪಟಾಲಂ, ಬಳ್ಳಾರಿಯಲ್ಲಿ ಬೆಳೆದರೆ ಮತ್ತೆ ಅದೇ ಭೀತಿ, ಭಯದಲ್ಲಿ ಜನ ನರಳಬೇಕಾಗುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ಕೊಡಬೇಡಿ. ಬಿಜೆಪಿಯನ್ನು ಸೋಲಿಸಿ ಬಳ್ಳಾರಿಯನ್ನು ಉಳಿಸಿ ಎಂದು ಕರೆ ನೀಡಿದರು.
ಈಗ ಅವರು (BJP) ಅಕ್ರಮ ಗಣಿಗಾರಿಕೆಯ ಹಣದ ಚೀಲಗಳನ್ನು ಹೊತ್ತುಕೊಂಡು ಬಂದು ಕುಳಿತಿದ್ದಾರೆ. ಅವರ ಹಣಕ್ಕೆ ಮರುಳಾಗುತ್ತೀರಾ ? ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಭಾಗ್ಯದ ಬಾಗಿಲು ತೆರೆದ ಕಾಂಗ್ರೆಸ್ ಕೈ ಹಿಡಿಯುತ್ತೀರಾ ಪ್ರಾಮಾಣಿಕವಾಗಿ ಯೋಚಿಸಿ ನಿರ್ಧರಿಸಿ. ಹಣ ಬಲ, ತೋಳು ಬಲದಲ್ಲಿ ಸಂಡೂರನ್ನು ವಶಪಡಿಸಿಕೊಳ್ಳಲು ಬರ್ತಾರೆ ಎಚ್ಚರ ಬಿಜೆಪಿ ಸೋಲಿಸಿ ಬಳ್ಳಾರಿ ಉಳಿಸಿ ಎಂದು ನುಡಿದರು.
ನಾವಿನ್ನೂ ಮೂರೂವರೆ ವರ್ಷ ಅಧಿಕಾರದಲ್ಲಿ ಇರ್ತೀವಿ. ಅಲ್ಲಿಯವರೆಗೂ ನಾವು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುಂದುವರೆಸ್ತೀವಿ. ಬಿಜೆಪಿ ಅಪಪ್ರಚಾರವನ್ನು ನಂಬಬೇಡಿ. ಸುಳ್ಳುಗಳಿಗೆ ಮೋಸ ಹೋಗಬೇಡಿ. ಹೃದಯದ ಮಾತು ಕೇಳಿ ಅಭಿವೃದ್ಧಿಗೆ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದರು.