

ಉಡುಪಿ: ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವನೆಯನ್ನು ಶಾಲಾ-ಕಾಲೇಜು ಹಂತದಲ್ಲಿಯೇ ಮೂಡಿಸಬೇಕು. ಯುವರೆಡ್ಕ್ರಾಸ್ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿ ಸಮಾಜಮುಖಿ ವಾತಾವರಣವನ್ನು ಸೃಷ್ಠಿಸುವ ಮೂಲಕ ರೆಡ್ಕ್ರಾಸ್ ಸಂಸ್ಥೆಯನ್ನು ಜಿಲ್ಲೆಯಾದ್ಯಂತ ಅದ್ವೀತಿಯ ಸಂಸ್ಥೆಯನ್ನಾಗಿ ರೂಪಿಸಬೇಕು ಎಂದು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಹೇಳಿದರು.
ಗುರುವಾರ ನಗರದ ಅಜ್ಜರಕಾಡು ರೆಡ್ಕ್ರಾಸ್ ಭವನದ ಹೆನ್ರಿ ಡ್ಯುನಂಟ್ ಹಾಲ್ನಲ್ಲಿ ರೆಡ್ಕ್ರಾಸ್ ಸೊಸೈಟಿ ಉಡುಪಿ ಜಿಲ್ಲಾ ಘಟಕ ಆಶ್ರಯದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಕಾಲೇಜುಗಳ ವೈ.ಆರ್.ಸಿ ಘಟಕಗಳ ಕಾರ್ಯಕ್ರಮ ಅಧಿಕಾರಿಗಳಿಗೆ ನಡೆದ ಒಂದು ದಿನದ ಯುವ ರೆಡ್ಕ್ರಾಸ್ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಯುವರೆಡ್ಕ್ರಾಸ್ ಘಟಕಗಳ ಕಾರ್ಯಕ್ರಮ ಅಧಿಕಾರಿಗಳು ತರಬೇತಿಯನ್ನು ಪಡೆದು ರೆಡ್ಕ್ರಾಸ್ನ ಕಾರ್ಯಕ್ರಮವನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ರೆಡ್ಕ್ರಾಸ್ ಸಂಸ್ಥೆಯು ಯಾವುದೇ ಫಲಾಪೇಕ್ಷೆಯಿಲ್ಲದೇ ಮಾನವೀಯ ನೆಲೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುತ್ತಾ ಬಂದಿದೆ. ಕಾಲೇಜುಗಳಲ್ಲಿ ಯೂತ್ರೆಡ್ಕ್ರಾಸ್ ಘಟಕವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರೊಂದಿಗೆ ಸಮಾಜಕ್ಕೆ ಸೇವೆ ನೀಡುವಂತಹ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ರೆಡ್ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಅಧ್ಯಕ್ಷ ಎಸ್. ಜಯಕರ ಶೆಟ್ಟಿ ಹಾಗೂ ರೆಡ್ಕ್ರಾಸ್ ಮ್ಯಾನೆಜಿಂಗ್ ಕಮಿಟಿ ಸದಸ್ಯ ವಿ.ಜಿ. ಶೆಟ್ಟಿ ಮಾತನಾಡಿದರು. ರೆಡ್ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು. ವೈ.ಆರ್.ಸಿ ಟ್ರೆೃನರ್ ಸಚೇತ್ ಸುವರ್ಣ ಹಾಗೂ ಅನುರಾಧ ತರಬೇತಿ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಯೂತ್ ರೆಡ್ಕ್ರಾಸ್ ನೋಡೆಲ್ ಆಫೀಸರ್ ಡಾ. ಗಾಯತ್ರಿ ಎನ್ ಸ್ವಾಗತಿಸಿದರು, ರಾಘವೇಂದ್ರ ನಿರೂಪಿಸಿ, ಖಜಾಂಜಿ ರಮಾದೇವಿ ವಂದಿಸಿದರು.