ವಿದ್ಯಾರ್ಥಿಗಳಲ್ಲಿರಲಿ ಸಕಾರಾತ್ಮಕ ಚಿಂತನೆ: ಬಲ್ಲಾಳ್

udp-RED CROSS NEWS PHOTO
Published on

ಉಡುಪಿ: ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ತನ್ಮೂಲಕ ಉತ್ತಮ ಸಮಾಜ ನಿಮಾರ್ಣಕ್ಕೆ ಮುಂದಾಗಬೇಕು ಎಂದು ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ಎನ್​.ಬಿ. ವಿಜಯ ಬಲ್ಲಾಳ್​ ಹೇಳಿದರು.

ಮಂಗಳೂರು ವಿವಿ ಮತ್ತು ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಯುವರೆಡ್​ಕ್ರಾಸ್​ ಘಟಕದ ವಿದ್ಯಾರ್ಥಿ ನಾಯಕರಿಗೆ ರೆಡ್​ಕ್ರಾಸ್​ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್​ ಶೆಟ್ಟಿ ಮಾತನಾಡಿ, ದೇಶದಲ್ಲಿ ಯುವ ಜನತೆಯ ಸಂಖ್ಯೆ ಹೆಚ್ಚಿದೆ. ಸ್ವಯಂ ಶಿಸ್ತು, ಆತ್ಮವಿಶ್ವಾಸ ಬೆಳೆಸಿಕೊಂಡು ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವ, ಮಾದಕ ದ್ರವ್ಯಗಳನ್ನು ನಾಶಪಡಿಸಲು ಮುಂದಾಗುವ ಜತೆಗೆ ಕುಟುಂಬದ ಆರೋಗ್ಯ ಕಾಪಾಡುವ ಧ್ಯೇಯ, ಸಂಕಲ್ಪ ಹೊಂದಬೇಕು ಎಂದು ಕರೆ ನೀಡಿದರು.

ರೆಡ್​ಕ್ರಾಸ್​ ಹಾಗೂ ಡಿಡಿಆರ್​ಸಿ ಸದಸ್ಯರು, 74ಕ್ಕೂ ಹೆಚ್ಚು ಕಾಲೇಜುಗಳ ಯೂತ್​ರೆಡ್​ ಕ್ರಾಸ್​ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ಐಆರ್​ಸಿಎಸ್​ ಪ್ರಥಮ ಚಿಕಿತ್ಸೆಯ ಟೆನರ್​ ಡಾ. ಕೀರ್ತಿ ಪ್ರಥಮ ಚಿಕಿತ್ಸೆಯ ಬಗ್ಗೆ ಹಾಗೂ ಕುಂದಾಪುರ ಐಆರ್​ಸಿಎಸ್​ ಬ್ಲಡ್​ ಬ್ಯಾಂಕ್​ನ ತಾಂತ್ರಿಕ ಮುಖ್ಯಸ್ಥ ವೀರೇಂದ್ರ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ರೆಡ್​ಕ್ರಾಸ್​ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿದರು. ರಾಘವೇಂದ್ರ ಕರ್ವಾಲು ನಿರೂಪಿಸಿದರು. ಗೌರವ ಖಜಾಂಚಿ ರಮಾದೇವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net