

ಉಡುಪಿ: ವಿಶೇಷಚೇತನರು ಅಂಗವೈಕಲ್ಯತೆಯನ್ನು ಮರೆತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುತ್ತಿದ್ದು, ಅವರ ಬದುಕಿಗೆ ಪೂರಕವಾಗುವ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸಮಾಜ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಗುರುವಾರ ಬ್ರಹ್ಮಗಿರಿ ರೆಡ್ಕ್ರಾಸ್ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್ಸಂಸ್ಥೆ ಮತ್ತು ಎಪಿಡಿ ಸಂಸ್ಥೆ ಸಹಯೋಗದಲ್ಲಿ ನಡೆದ ವಿಶ್ವ ಸುಲಭ ಲಭ್ಯತಾ ಅರಿವು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಟ್ಟಡಗಳು ಅಥವಾ ಕಚೇರಿಗಳಿಗೆ ಭೇಟಿ ನೀಡುವ ಅಂಗವಿಕಲರಿಗೆ ಅಗತ್ಯವಿರುವ ಶೌಚಾಲಯ, ರ್ಯಾಂಪ್ ವ್ಯವಸ್ಥೆ, ವ್ಹೀಲ್ ಚೇರ್, ಸೌಲಭ್ಯವನ್ನು ಒದಗಿಸುವ ಮೂಲಕ ಮುಕ್ತವಾಗಿ ಸಂಚಾರ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದರು.
ಅನುಕಂಪ ಮಾತ್ರ ತೋರದೇ ಆತ್ಮವಿಶ್ವಾಸದಿಂದ ಮುನ್ನುಗ್ಗಲು ದಾರಿ ಮಾಡಿಕೊಡಬೇಕು. ರೆಡ್ಕ್ರಾಸ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಅಂಗವಿಕಲರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ಗುರುತಿಸುವ ಮೂಲಕ ವಿಕಲಚೇತನರ ಕಲ್ಯಾಣಕ್ಕಾಗಿ ಹೆಚ್ಚು ಕೆಲಸ ಮಾಡಲು ಪ್ರೇರಣೆ ನೀಡಬೇಕು ಎಂದರು.
ಸರ್ಕಾರವು ವಿಶೇಷ ಚೇತನರ ಕಲ್ಯಾಣಕ್ಕಾಗಿ ಸ್ಥಳಿಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಕ್ರಿಯಾಯೋಜನೆ ರೂಪಿಸುವಾಗ ಅದರಲ್ಲಿ ಶೇ. 5 ರಷ್ಟು ಅನುದಾನವನ್ನು ಮೀಸಲಿರಿಸಿದೆ. ಇದರಲ್ಲಿ ವಿವಿಧ ಸವಲತ್ತು ಮತ್ತು ಸಲಕರಣೆಗಳನ್ನು ಒದಗಿಸಲಾಗುವುದು. ವಿಶೇಷ ಚೇತನರು ಇದರ ಪ್ರಯೋಜನೆಯನ್ನು ಪಡೆಯಬೇಕೆಂದರು.
ರೆಡ್ಕ್ರಾಸ್ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ ಭಟ್ ಎಂ. ವಿಕಲಚೇತನ ಹಾಗು ಹಿರಿಯ ನಾಗರಿಕರ ಸೌಲಭ್ಯಗಳ ಬಗ್ಗೆ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನಾ, ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ, ಎ.ಪಿ.ಡಿ ಸಂಸ್ಥೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಹರೀಶ್ ಶೆಟ್ಟಿ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲ್ ನಿರೂಪಿಸಿ, ವಂದಿಸಿದರು.