ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ಗಮನಕೊಡಿ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸಲಹೆ

1 (3)
Published on

ಮಂಡ್ಯ: ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮೂವರು ರ‌್ಯಾಂಕ್ ಪಡೆದಿರುವುದು ಮೆಚ್ಚುಗೆ ವಿಷಯ. ಅಂತೆಯೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಕಡೆಗೂ ಹೆಚ್ಚಿನ ಗಮನಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸಲಹೆ ನೀಡಿದರು.

ನಗರದ ರೆಡ್‌ಕ್ರಾಸ್ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಹಯೋಗದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮನಸ್ಸು ಮಾಡಿ ಓದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಹಿಳೆಯರು ಮೊದಲನೆ ಸ್ಥಾನ ಪಡೆದಿದ್ದಾರೆ ಎಂದರು.

ಶಿಕ್ಷಣ ವ್ಯವಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಮೊದಲನೇ ಹಂತದ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ ಈ ಅವಧಿ ಬಹುಮುಖ್ಯ. ಇಲ್ಲಿನ ಸಾಧನೆಗಷ್ಟೇ ತೃಪ್ತಿಯಾಗದೆ ಇನ್ನಷ್ಟು ಗುರಿ ತಲುಪಲು ಶ್ರಮ ವಹಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ಶಿಕ್ಷಣದ ಪರಿಸ್ಥಿತಿ ಬದಲಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಾಗ ಹಿಂದೆಲ್ಲ ರ‌್ಯಾಂಕ್ ಪಟ್ಟಿಯಲ್ಲಿ ಕೆಳಗಡೆಯಿಂದ ನೋಡುವ ಸನ್ನಿವೇಶವಿತ್ತು. ಆದರೀಗ ಮೇಲುಗಡೆಯಿಂದ ಫಲಿತಾಂಶವನ್ನು ಕಾಣುವಂತಾಗಿದೆ. ಮುಂದಿನ ವರ್ಷ ಜಿಲ್ಲೆಯ ಮೊದಲನೇ ಸ್ಥಾನದಲ್ಲಿ ಇರಲಿ ಎಂದು ಹೇಳಿದರು.

ಆದರೂ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ ಹಿಂದೆ ಬೀಳುತ್ತಿದೆ. ಇದಕ್ಕೆ ಕಾರಣ ವಿದ್ಯಾರ್ಥಿಗಳು ಬೇರೆ ಜಿಲ್ಲೆ ಕಡೆ ಹೋಗುತ್ತಿರುವುದು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಪಾಲಕರು ಗುಣಮಟ್ಟದ ಶಿಕ್ಷಣ ಕೊಡಿಸಲು ಕ್ರಮ ತೆಗೆದುಕೊಳ್ಳಬೇಕು. ಅಂತೆಯೇ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆ ಇಟ್ಟು ಕಷ್ಟಪಟ್ಟು ಓದಿದಾಗ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬಹುದು. ಇನ್ನು ರೆಡ್‌ಕ್ರಾಸ್ ಸಂಸ್ಥೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದ್ದಾರೆ. ಅದರೊಟ್ಟಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಸಾಧನೆ ಮಾಡಲು ಪ್ರೇರೆಪಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿದರು. ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಡಿಡಿಪಿಯು ಎಸ್.ಉಮೇಶ್, ಡಿಡಿಪಿಐ ಎಸ್.ಟಿ.ಜವರೇಗೌಡ, ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಕೆ.ಟಿ.ಹನುಮಂತು, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ದಿಲೀಪ್ ಕುಮಾರ್ ಹೆಗಡೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net