ಪೆಟ್ಲೆಟ್ ಪ್ರತ್ಯೇಕಿಸುವ ಉಪಕರಣದ ಕೊರತೆ

15mdk01
Published on

ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಜ್ವರದಿಂದಾಗಿ ಪೆಟ್ಲೇಟ್ ರಕ್ತಕ್ಕೆ ಹೆಚ್ಚು ಬೇಡಿಕೆ ಇದ್ದು, ಪೆಟ್ಲೇಟ್‌ಗಳನ್ನು ಪ್ರತ್ಯೇಕಿಸುವ ಉಪಕರಣದ ಕೊರತೆ ಹಿನ್ನೆಲೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಹೇಳಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕೊಡಗು ಘಟಕದ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಸ್ಟುವರ್ಟ್ ಹಿಲ್ ನಲ್ಲಿರುವ ರೆಡ್ ಕ್ರಾಸ್ ಸಭಾಭವನದಲ್ಲಿ ಮಂಗಳವಾರ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ರಕ್ತದಾನದಂಥ ಶಿಬಿರಗಳು ಇನ್ನಷ್ಟು ಆಯೋಜನೆಯಾಗಬೇಕು. ಈಗಾಗಲೇ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿದ್ದು ರಕ್ತದ ಕೊರತೆ ಕಾಡುತ್ತಿದೆ. ಡೆಂಗ್ಯೂ ಜ್ವರಕ್ಕೆ ಪ್ಲೇಟ್ಲೆಟ್‌ಗಳು ಬೇಕಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಪ್ಲೇಟ್ಲೆಟ್ ಗಳನ್ನು ಪ್ರತ್ಯೇಕಿಸಿ ತೆಗೆಯುವ ಉಪಕರಣ ಇಲ್ಲದ ಕಾರಣ ಒಟ್ಟು ಆರು ಬಾಟಲ್ ರಕ್ತದ ಅವಶ್ಯಕತೆ ಉಂಟಾಗುತ್ತಿದೆ . ಈ ನಿಟ್ಟಿನಲ್ಲಿ ಅನಿವಾರ್ಯವಾಗಿ ಹೊರ ಜಿಲ್ಲೆಗಳಿಗೆ ರೋಗಿಗಳನ್ನು ಕಳುಹಿಸುವ ಪರಿಸ್ಥಿತಿ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ನಿರ್ಮಾಣವಾದ ಮೇಲೆ ಪ್ಲೇಟ್ಲೆಟ್‌ನ್ನು ಪ್ರತ್ಯೇಕಿಸುವ ಉಪಕರಣದ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ಜಿಲ್ಲೆಯಲ್ಲಿ ರಕ್ತದ ಬೃಹತ್ ಯೂನಿಟ್ ಸ್ಥಾಪಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ ರಕ್ತದ ಅವಶ್ಯಕತೆ ಎಲ್ಲರಿಗೂ ಇದ್ದು ಎಲ್ಲರೂ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕೊಡಗು ಘಟಕದ ಸಭಾಪತಿ ಬಿ. ಕೆ. ರವೀಂದ್ರ ರೈ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ರಕ್ತದ ಕೊರತೆ ಹೆಚ್ಚಾಗಿರುವುದರಿಂದ ಈ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಇನ್ನಷ್ಟು ಶಿಬಿರಗಳನ್ನು ಆಯೋಜನೆ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ವಲಯ ೬ರ ಸಹಾಯಕ ಗವರ್ನರ್ ದೇವಣಿರ ತಿಲಕ್, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ. ಎನ್. ರತ್ನಾಕರ್ ರೈ. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕೊಡಗು ಘಟಕದ ಪ್ರಧಾನ ಕಾರ್ಯದರ್ಶಿ ಹೆಚ್. ಆರ್. ಮುರಳಿಧರ್, ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್, ರೆಡ್ ಕ್ರಾಸ್ ಸದಸ್ಯರಾದ ವಿಜಯ್ ಶೆಟ್ಟಿ, ಉತ್ತಯ್ಯ, ಕೌಸರ್, ಬಿ.ಜಿ. ಅನಂತಶಯನ , ರೆಡ್ ಕ್ರಾಸ್ ಸಮಿತಿ ಸದಸ್ಯರು, ರಕ್ತ ನಿಧಿ ಘಟಕದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net