ಕೆಂಪುಕಲ್ಲು ಪಾಯ ಬಂದ್ : ಸಾವಿರಾರು ಕಾರ್ಮಿಕರು, ಕುಟುಂಬ ಕಂಗಾಲು ಕರಾವಳಿಗೆ ಬೇಕಿದೆ ಪ್ರತ್ಯೇಕ ನಿಯಮ

New Project (33)
Published on

ಅನ್ಸಾರ್ ಇನೋಳಿ, ಉಳ್ಳಾಲ

ಅದೆಷ್ಟೋ ವರ್ಷಗಳಿಂದ ನಂಬಿಕೊಂಡು ಬಂದಿದ್ದ, ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದ ಕೆಂಪುಕಲ್ಲಿನ ಪಾಯಗಳು ಬಂದ್ ಆಗಿವೆ. ಇದರ ಪರಿಣಾಮ ಕಾರ್ಮಿಕರ ಕುಟುಂಬಗಳು ಕಂಗಾಲಾಗಿವೆ. ಆಗಾಗ ತೊಂದರೆ ಉದ್ಭವಿಸುತ್ತಿರುವುದರಿಂದ ಕರಾವಳಿಯ ಕೆಂಪುಕಲ್ಲಿನ ಪಾಯಗಳಿಗೆ ಪ್ರತ್ಯೇಕ ನಿಯಮ ರೂಪಿಸಲು ಸರ್ಕಾರ ಮುಂದಾಗಬೇಕು ಎಂಬ ಆಗ್ರಹ ಎದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲಿನ ಪಾಯಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾ ಕುಟುಂಬ ನಿರ್ವಹಿಸುತ್ತಿದ್ದಾರೆ. ಈ ಕೆಲಸವನ್ನೇ ನಂಬಿಕೊಂಡವರಿಗೆ ಬೇರೆ ಉದ್ಯೋಗದ ಗಂಧಗಾಳಿಯೂ ಇಲ್ಲ. ಉಳ್ಳಾಲ ತಾಲೂಕಿನ ಪಾವೂರು, ನರಿಂಗಾನ, ಬಾಳೇಪುಣಿ ಗ್ರಾಮಗಳಲ್ಲಿ ಅನೇಕ ಕೆಂಪುಕಲ್ಲು ಕ್ವಾರಿಗಳಿವೆ. ಆದರೆ ಪ್ರಸ್ತುತ ದಿನಗಳಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ ಪರಿಣಾಮ ಪಾಯಗಳು ಬಂದ್ ಆಗಿ ಅದನ್ನೇ ನಂಬಿಕೊಂಡವರು ನಿರುದ್ಯೋಗಿಗಳಾಗಿದ್ದಾರೆ.

ಇತರ ಕ್ಷೇತ್ರಕ್ಕೂ ಹೊಡೆತ: ಕೆಂಪುಕಲ್ಲಿನ ಪಾಯಗಳು ಬಂದ್ ಆಗಿರುವುದರಿಂದ ಇತರ ಕ್ಷೇತ್ರಗಳಿಗೂ ಹೊಡೆತ ಬಿದ್ದಿದೆ. ಕಲ್ಲು ಸಾಗಾಟದ ಲಾರಿಗಳು ಓಡಾಟ ನಿಲ್ಲಿಸಿದ್ದು ಚಾಲಕರು, ಲೋಡರ್‌ಗಳು ನಿರುದ್ಯೋಗಿಗಳಾಗಿದ್ದಾರೆ. ಕೆಂಪುಕಲ್ಲು ಪಾಯ, ಕಲ್ಲು ಸಾಗಾಟ, ಮರಳು, ಜಲ್ಲಿ ಕ್ರಷರ್‌ಗಳಲ್ಲಿ 25 ಸಾವಿರದಿಂದ 30 ಸಾವಿರ ಕಾರ್ಮಿಕರು ದುಡಿಯುತ್ತಿದ್ದಾರೆ. ಅತಿ ಹೆಚ್ಚು ರಾಯಲ್ಟಿ, ನಿಯಮಗಳನ್ನು ಸರ್ಕಾರ ಬಿಗಿ ಮಾಡಿರುವುದರಿಂದ ಕೆಂಪುಕಲ್ಲು ಪಾಯ ಬಂದ್ ಆಗಿವೆ. ಮನೆ, ಕಟ್ಟಡ ನಿರ್ಮಾಣಕ್ಕೂ ಕುತ್ತು ಬಂದಿದ್ದು ಇಲೆಕ್ಟ್ರಿಷಿಯನ್, ಫ್ಲಂಬರ್, ಪೈಂಟರ್, ಮೇಸ್ತ್ರಿ, ಕೂಲಿ ಕಾರ್ಮಿಕರೂ ನಿರುದ್ಯೋಗದ ಹೊಡೆತಕ್ಕೆ ನಲುಗಿದ್ದಾರೆ.

ಸಮಸ್ಯೆಗೆ ಕಾರಣವೇನು?: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕೆಂಪುಕಲ್ಲು ಪಾಯ ಇದ್ದರೂ ಸರ್ಕಾರಗಳು ಸಮರ್ಪಕ ನಿಯಮ ಜಾರಿಗೊಳಿಸುವಲ್ಲಿ ವಿಫಲವಾಗಿವೆ. ಕೆಂಪುಕಲ್ಲನ್ನು ಪ್ರಾಕೃತಿಕವಾಗಿ ಸಿಗುವ ಮಣ್ಣಿನ ಗಟ್ಟಿ ಇಟ್ಟಿಗೆ ಎಂದೇ ಹೇಳಬಹುದು. ಬೆಂಗಳೂರು ಮತ್ತು ಇತರೆಡೆ ಮಣ್ಣಿನ ಇಟ್ಟಿಗೆ ಬೇಯಿಸಿ ತಯಾರಿಸಲಾಗುತ್ತಿದ್ದು ಅದಕ್ಕೆ ಯಾವುದೇ ನಿಯಮ ಇಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕೃತಿಯಿಂದಲೇ ಕಟ್ಟಿಂಗ್ ಮಾಡಿ ತಯಾರಿಸುವ ಕೆಂಪುಕಲ್ಲಿಗೆ ಕಠಿಣ ನಿಯಮ ಏಕೆ? ಎನ್ನುವ ಪ್ರಶ್ನೆ ಸಂಬಂಧಪಟ್ಟವರದ್ದು.

ಕೇರಳ ಮಾದರಿ ಜಾರಿಗೆ ಒತ್ತಾಯ: ಕೇರಳ ಸರ್ಕಾರ ಒಂದು ಟನ್ ಕೆಂಪುಕಲ್ಲಿಗೆ 36 ರೂ. ರಾಯಲ್ಟಿ ನಿಗದಿಪಡಿಸಿದೆ. ಇದರಿಂದಾಗಿ ಅಲ್ಲಿ ಕಲ್ಲಿನ ಪಾಯಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರಿಗೂ ಉದ್ಯೋಗ ನೀಡಿದೆ. ಆದರೆ ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಗುವ ಒಂದು ಟನ್ ಕೆಂಪುಕಲ್ಲಿಗೆ 254.60 ರೂ. ರಾಯಲ್ಟಿ ನಿಗದಿಪಡಿಸಿದ್ದು ಸಂಬಂಧಪಟ್ಟವರಿಗ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬೇಡಿಕೆಗಳು

  • ಜಿಲ್ಲೆಯಲ್ಲಿ ಕೇರಳ ಸರ್ಕಾರದಂತೆ ರಾಯಲ್ಟಿ ನಿಗದಿ
  • ಈಗಿರುವ ನಿಯಮ ಸರಳೀಕರಣ
  • ಶೀಘ್ರ ಪರವಾನಗಿ-ಹಿಂದೆ ಪರವಾನಗಿ ತಿಂಗಳಲ್ಲೇ ಸಿಗುತ್ತಿದ್ದರೆ, ಈಗ 4 ತಿಂಗಳು ಕಾಯಬೇಕು.
  • ಪಾಯ ಗಣಿ ಇಲಾಖೆಗೆ ಬರುವುದರಿಂದ ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸಬಾರದು.
  • ಕೆಂಪುಕಲ್ಲನ್ನು ಗಣಿ ಎಂಬಂತೆ ಬಿಂಬಿಸಬಾರದು.
  • ಅನುಮತಿ ನೀಡುವ ಜವಾಬ್ದಾರಿ ಗ್ರಾಮ ಪಂಚಾಯಿತಿಗೆ ನೀಡಬೇಕು.

ಸ್ಪೀಕರ್ ಮೇಲೆ ಭರವಸೆ

ಪ್ರಸ್ತುತ ಕರಾವಳಿಯಲ್ಲಿ ಕ್ವಾರಿಗಳು ಬಂದ್ ಆದ ಪರಿಣಾಮ ನಿರ್ಮಾಣ ಕೆಲಸಗಳು ನಿಂತಿದ್ದು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರದ ಕಠಿಣ ನಿಯಮಗಳು ಕ್ವಾರಿ ಮಾಲೀಕರ ಪಾಲಿಗೆ ಕಬ್ಬಿಣದ ಕಡಲೆಕಾಯಿ ಆಗಿದ್ದು, ನಿಯಮ ಪಾಲಿಸದೆ ಕ್ವಾರಿ ನಡೆಸಲು ಪೊಲೀಸ್ ಇಲಾಖೆ ಅಡ್ಡಿಯಾಗಿದೆ. ಈ ಬಗ್ಗೆ ಸಂಘದ ಪ್ರಮುಖರು ಸ್ಪೀಕರ್ ಯು.ಟಿ.ಖಾದರ್ ಅವರ ಗಮನಕ್ಕೆ ತಂದಿದ್ದಾರೆ. ಶೀಘ್ರ ಜಂಟಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಬಗ್ಗೆ ಸ್ಪೀಕರ್ ಭರವಸೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರು ಪಾಯವನ್ನೇ ನಂಬಿದ್ದರು. ಪ್ರಸ್ತುತ ದಿನಗಳಲ್ಲಿ 3/8 ಪರವಾನಗಿ ಪಡೆಯಲು ಕಾನೂನಿನ ತೊಡಕು ಹಾಗೂ ಅತ್ಯಧಿಕ ತೆರಿಗೆಯಿಂದಾಗಿ ಪಾಯ ನಡೆಸಲು ತೊಡಕುಂಟಾಗಿದೆ. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು. ರವಿ ರೈ ಪಜೀರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಲ್ಲು ಪಾಯ ಹಾಗೂ ಲಾರಿ ಮಾಲೀಕರ ಒಕ್ಕೂಟ ಮುಡಿಪು ವಲಯ ವ್ಯಾಪ್ತಿಯಲ್ಲಿ ಐದು ಸಾವಿರಕ್ಕೂ ಅಧಿಕ ಕುಟುಂಬ ಪಾಯಗಳನ್ನು ನಂಬಿ ಜೀವನ ಸಾಗಿಸುತ್ತಿದ್ದು ಪ್ರಸ್ತುತ ಕೆಲಸವಿಲ್ಲದೆ ಕಂಗಾಲಾಗಿವೆ. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಸಮಸ್ಯೆ ಬಗೆಹರಿಸಲು ಸಭೆ ಕರೆಯುವ ಬಗ್ಗೆ ಸ್ಪೀಕರ್ ಭರವಸೆ ನೀಡಿದ್ದು ನಿರೀಕ್ಷೆಯಲ್ಲಿದ್ದೇವೆ. ಕಮರುದ್ದೀನ್ ಮೂಳೂರು ಪ್ರಧಾನ ಕಾರ್ಯದರ್ಶಿ, ಮುಡಿಪು ವಲಯ https://www.vijayavani.net/suvarna-sambrama-3 https://www.vijayavani.net/%e0%b2%b6%e0%b2%a4%e0%b2%ae%e0%b2%be%e0%b2%a8%e0%b2%a6-%e0%b2%95%e0%b2%9f%e0%b3%8d%e0%b2%9f%e0%b2%a1-%e0%b2%a8%e0%b3%86%e0%b2%b2%e0%b2%b8%e0%b2%ae-%e0%b2%a4%e0%b2%bf%e0%b2%b0%e0%b3%81%e0%b2%b5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net