

ಬೆಳಗಾವಿ: ಯುದ್ಧ ಸೇರಿದಂತೆ ಕಷ್ಟದ ಸಂದರ್ಭದಲ್ಲಿ ಮಾನವೀಯ ನೆರವು ನೀಡುವುದು ರೆಡ್‌ಕ್ರಾಸ್‌ನ ಉದ್ದೇಶವಾಗಿದೆ. 19ನೇ ಶತಮಾನದಲ್ಲಿ ಇಟಲಿ, ಫ್ರಾನ್ಸ್, ಇತರೆ ದೇಶಗಳ ನಡುವೆ ಸಂಭವಿಸಿದ ಯುದ್ಧದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸಂಸ್ಥೆ ಸ್ಥಾಪಿಸಲಾಗಿದ್ದು, ರೆಡ್ ಕ್ರಾಸ್‌ನ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಸಿ.ವಿ. ರಾಮನ್ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಯುವ ರೆಡ್‌ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಘಟಕದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಜಿನೇವಾ ಕನ್ವೆನ್ಶನ್ ದಿನ-2023ರ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಭಿತ್ತಿಪತ್ರ ಪ್ರಸ್ತುತಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಯುದ್ಧಗಳು ನಡೆದರೂ ಅದು ಮನುಕುಲದ ಉದ್ಧಾರ ಆಗುವುದಿಲ್ಲ. ಬಹಳಷ್ಟು ಯುದ್ಧಗಳ ಫಲಿತಾಂಶ ಕೊನೆಗೆ ಸಾಮಾನ್ಯ ಜನರ ಸಾವು-ನೋವುಗಳೇ ಆಗಿವೆ. ಹೀಗಾಗಿ ನಾವು ವಿದ್ಯಾವಂತರಾಗಿ ಬದುಕುವುದಷ್ಟೇ ಅಲ್ಲ, ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕಿದೆ. ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡಬೇಕಾಗಿದೆ. ನಾವು ಎಷ್ಟೇ ದೊಡ್ಡವರಾದರೂ ನಾವು ಮಾನವರಾಗಿ ಬದುಕಬೇಕಾಗಿದೆ. ಸುಂದರ ಸಮಾಜ, ಒಳ್ಳೆ ಸಮಾಜ ಕಟ್ಟಬೇಕಾಗಿದೆ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಮಾತನಾಡಿ, ರೆಡ್‌ಕ್ರಾಸ್ ಜೀವ ಉಳಿಸುವ ಕೆಲಸ ಮಾಡುತ್ತಿದೆ. ಯುದ್ಧಗಳ ಪರಿಣಾಮಗಳು ಮನುಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ರೆಡ್‌ಕ್ರಾಸ್ ಸಾವು-ನೋವುಗಳನ್ನು ತಡೆಯುವ ಕಾರ್ಯ ಮಾಡುತ್ತ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐಆರ್‌ಸಿಎಸ್‌ನ ರಾಜ್ಯ ಪ್ರತಿನಿಧಿ ಡಾ. ಎಸ್.ಬಿ. ಕುಲಕರ್ಣಿ ಮಾತನಾಡಿ, ಮಾನವ ಬುದ್ಧಿವಂತನಾಗಿ ಬದುಕುವುದಕ್ಕಿಂತ ಮಾನವೀಯತೆಯುಳ್ಳವನಾಗಿ ಬದುಕುವುದು ಮುಖ್ಯ ಎಂದು ಅವರು, ಜಿನೇವಾ ಸಮಾವೇಶದ ಇತಿಹಾಸ ಮತ್ತು ರೆಡ್‌ಕ್ರಾಸ್ ಸ್ಥಾಪನೆಯ ಹಿನ್ನೆಲೆ ವಿವರಿಸಿದರು.
ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಲಿಂಗೌಡ ವಿ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಆರ್‌ಸಿಯು ಯುವ ರೆಡ್‌ಕ್ರಾಸ್ ಘಟಕದ ಅಧಿಕಾರಿ ಡಾ. ಸುಮಂತ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಮ್ಯ, ಅಧಿತಿ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಜೆ.ಎಸ್. ಕವಳೇಕರ ಸ್ವಾಗತಿಸಿದರು. ಮೇಘಾ ಗಲಗಲಿ ಪರಿಚಯಿಸಿದರು. ರೋಜ್ ಮೊಂಟೆರಿಯೊ ನಿರೂಪಿಸಿದರು. ಎಚ್. ಎನ್. ಬನ್ನೂರ ವಂದಿಸಿದರು.
ಸ್ಪರ್ಧೆಯಲ್ಲಿ ಲಿಂಗರಾಜ ಕಾಲೇಜಿನ ಸಂಗೀತ ತಕ್ಕಿ ಪ್ರಥಮ, ಸ್ಫೂರ್ತಿ ಪಾಟೀಲ ದ್ವಿತೀಯ ಹಾಗೂ ಶಿ.ಶಿ. ಬಸವನಾಳ ಬಿಇಡಿ ಕಾಲೇಜಿನ ಚೈತ್ರ ಹಂಚಿನಮನಿ ಮತ್ತು ಖಾನಾಪುರದ ಕೆ.ಎಲ್.ಇ. ಸಂಸ್ಥೆಯ ಬಿಸಿಎ ಕಾಲೇಜಿನ ಅರ್ಕಾಂಜ್ ಫರ್ನಾಂಡಿಸ್ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ 19 ವಿದ್ಯಾರ್ಥಿಗಳು ಭಾಗವಹಿಸಿದ್ದರು.