

ಮಂಡ್ಯ: ರೆಡ್‌ಕ್ರಾಸ್ ಲಾಭ ಗಳಿಸುವ ಸಂಸ್ಥೆಯಲ್ಲ. ಬದಲಿಗೆ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಸಂಘಟನೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ರೆಡ್‌ಕ್ರಾಸ್ ಭವನದಲ್ಲಿ ಆಯೋಜಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಪ್ರತಿಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಸೇವೆ ಮಾಡಬೇಕು ಎಂಬ ಮನೋಭಾವ ಇಟ್ಟುಕೊಂಡು ಬರುವವರು ಸಂಸ್ಥೆಯಲ್ಲಿ ಸದಸ್ಯರಾಗಿ ಕೆಲಸ ಮಾಡುತ್ತಾರೆ. ಲಾಭ ಇದೆ ಎಂದು ಯಾರೂ ಬರಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆಗೆ ಸದಸ್ಯರಾಗಿ ಮಾನವೀಯ ಮೌಲ್ಯ, ನಿಸ್ವಾರ್ಥ ಸೇವೆ, ಸಮಾಜ ಸೇವೆ, ತಾಳ್ಮೆ, ಸಹನೆ ಎಲ್ಲವನ್ನು ಗುಣಗಳಾಗಿರುವ ಸಂಸ್ಥೆ ರೆಡ್‌ಕ್ರಾಸ್ ಎಂದರು.
ವಿದ್ಯಾರ್ಥಿಗಳಿಗೆ ರೆಡ್‌ಕ್ರಾಸ್ ಮಹತ್ವದ ಬಗ್ಗೆ ತಿಳಿಸಬೇಕು. ಕೋವಿಡ್ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಕೆಲಸ ಎಲ್ಲರಿಗೂ ಗೊತ್ತಿದೆ. ನೂರು ವರ್ಷದ ಇತಿಹಾಸವಿರುವ ಬಲವನ್ನು ಹೊಂದಿರುವ ರೆಡ್ ಕ್ರಾಸ್ ಸಂಸ್ಥೆಯನ್ನು ಸದೃಢವಾಗಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ರೆಡ್‌ಕ್ರಾಸ್ ಸಂಸ್ಥೆಗೆ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಾಗ ವಿಶೇಷ ಒತ್ತು ನೀಡಿದಂತಾಗುತ್ತದೆ. ಎಲ್ಲರೂ ಕೂಡ ಬೆಂಬಲ ಕೊಟ್ಟರೆ ಒಳ್ಳೆಯ ಕೆಲಸ ಮಾಡಲು ಸಾಧ್ಯ. ಇನ್ನು ಹೆಚ್ಚು ಸದಸ್ಯರಾಗುವ ಮೂಲಕ ಎಲ್ಲರೂ ಕೂಡ ಒಮ್ಮನಸ್ಸಿನಿಂದ ಕೈಜೋಡಿಸಿ ತಂಡದ ರೀತಿ ಕೆಲಸ ಮಾಡಬೇಕು. ಮಂಡ್ಯ ರೆಡ್‌ಕ್ರಾಸ್ ಸಂಸ್ಥೆಗೆ ಪ್ರತ್ಯೇಕವಾದ ಬ್ಲಡ್ ಬ್ಯಾಂಕ್ ಇದ್ದರೆ, ಅದರ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಮೂಲಕ ರಕ್ತದಾನ ಶಿಬಿರಗಳನ್ನು ಮಾಡಲು ಕ್ರಮವಹಿಸಿ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ಡಾ.ಕೆ.ಎಂ.ಶಿವಕುಮಾರ್ ಇತರರಿದ್ದರು. ಇದೇ ವೇಳೆ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿದವರಿಗೆ ಹಾಗೂ ಹೆಚ್ಚು ರಕ್ತ ಸಂಗ್ರಹಿಸಿದ ಕಾಲೇಜಿಗೆ ಪ್ರಶಸ್ತಿ ನೀಡಲಾಯಿತು.