

ಮಂಡ್ಯ: ಅಗತ್ಯವಿರುವ ವ್ಯಕ್ತಿಗಳಿಗೆ ಮೂಲ ಸೌಕರ್ಯ ಒದಗಿಸುವುದೇ ರೆಡ್‌ಕ್ರಾಸ್ ಸಂಸ್ಥೆ ಧ್ಯೇಯವಾಗಿದೆ ಎಂದು ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಸಂಸ್ಥೆಯ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಂಸ್ಥಾಪನಾ ದಿನಾಚರಣೆ ಮತ್ತು ಆರೋಗ್ಯ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು ಮತ್ತು ಅಗತ್ಯ ಉಳ್ಳವರಿಗೆ ಜೀವದ ಜತೆಗೆ ಜೀವನ ರಕ್ಷಿಸಿಕೊಳ್ಳಲು ನೆರವಾಗುವುದು. ಆರೋಗ್ಯರಕ್ಷಣೆ, ಅಂಗವಿಕಲರ ಸಬಲೀಕರಣ, ನೇತ್ರ, ರಕ್ತದಾನಗಳಂತಹ ಸೇವಾಕಾರ್ಯಗಳನ್ನು ಸಮಾಜಕ್ಕೆ ಒದಗಿಸುವ ಸದುದ್ದೇಶದಿಂದ ರೆಡ್‌ಕ್ರಾಸ್ ಸೇವೆ ಸಲ್ಲಿಸುತ್ತಿದೆ ಎಂದು ನುಡಿದರು.
ಮೇ.8 ರೆಡ್‌ಕ್ರಾಸ್ ಸಂಸ್ಥೆಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನ. ಈ ದಿನವನ್ನು ವಿಶ್ವಸಂಸ್ಥೆ ರೆಡ್‌ಕ್ರಾಸ್ ದಿನವನ್ನಾಗಿ ಆಚ ರಿಸಲು ಘೋಷಿಸಿದೆ. ಇದರೊಂದಿಗೆ ಸಂಸ್ಥೆಯ ಸೇವಾ ಕಾರ್ಯಗಳೊಂದಿಗೆ ಸ್ಮರಿಸಲಾಗುತ್ತದೆ. ಜನಸೇವೆಗಾಗಿ 3 ಬಾರಿ ವಿಶ್ವ ಮಟ್ಟದ ಶ್ರೇಷ್ಟ ನೋಬೆಲ್ ಪ್ರಶಸ್ತಿಯ ಸಂಸ್ಥೆಗೆ ಲಭಿಸಿದೆ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕ ಕೆ.ಟಿ.ಹನುಮಂತು ಮಾತನಾಡಿ, ಪ್ರಕೃತಿಯಿಂದಾದ ಆಪತ್ತು, ಮಾನವ ಸೃಷ್ಠಿತ ಅವಘಡಗಳಿಂದ ಜೀವ ರಕ್ಷಿಸಲು, ಗಾಯಾಳುಗಳನ್ನು ಬದುಕಿಸಲು ರೆಡ್‌ಕ್ರಾಸ್ ಸೇವೆಗೆ ನಿಲ್ಲುತ್ತದೆ. ಸ್ವಯಂ ಸೇವಕರು ಶಾಖೆಯ ಮೂಲಕ ಮೂಲ ಸೌಲಭ್ಯಗಳನ್ನು ಒದಗಿಸುತ್ತಾರೆ. ಮನುಷ್ಯ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಸೂರ್ಯ ಚಂದ್ರ ಇರುವ ತನಕ ರೆಡ್‌ಕ್ರಾಸ್ ಸಂಸ್ಥೆಯ ಹೆನ್ರಿ ಡ್ಯೂನಾಂಟ್ ಅವರ ಹೆಸರು ಇರುತ್ತದೆ. ಇಂತಹ ಮಹನೀಯರ ಸೇವಾಗುಣ, ತತ್ವ ಆದರ್ಶಗಳು ನಮ್ಮ ಯುವ ಸಮಾಜ ಮೈಗೂಡಿಸಿಕೊಳ್ಳಲಿ ಎಂದು ಕಿವಿಮಾತೇಳಿದರು.
ಸಂಸ್ಥೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕರಾದ ನಾರಾಯಣಸ್ವಾಮಿ, ಜವರೇಗೌಡ, ಷಡಕ್ಷರಿ, ಸಿದ್ದೇಗೌಡ, ಶಿವಲಿಂಗ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ಕಿಟ್‌ಗಳನ್ನು ವಿತರಿಸಲಾಯಿತು.