

ಮಂಗಳೂರು : ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಹಾಗೂ ಸಂಸ್ಕಾರಯುತ ಶಿಕ್ಷಣ ಒದಗಿಸಬೇಕು. ಇದರಿಂದ ಭವಿಷ್ಯದಲ್ಲಿ ಅವರು ಉತ್ತಮ ಗುಣ ನಡತೆಯ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಭಾರತೀಯ ರೆಡ್‌ಕ್ರಾಸ್‌ನ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.
ರೆಡ್‌ಕ್ರಾಸ್ ದ.ಕ ಜಿಲ್ಲಾ ಘಟಕ, ದೇವಿಕಾ ಯೋಗ ತರಬೇತಿ ಕೇಂದ್ರ, ನೆಲ್ಲಿಗುಡ್ಡೆ ಪರಿಸರ ಅಧ್ಯಯನ ಕೇಂದ್ರ ಮತ್ತು ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ನಗರದ ಲಾಲ್‌ಬಾಗ್‌ನ ವನಿತಾ ಪಾರ್ಕ್‌ನಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ ಮಕ್ಕಳನ್ನು ಯೋಗ್ಯ ನಾಗರಿಕರಾಗಿಸುವ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಮತ್ತು ಸಮಾಜದ ಸಾಮೂಹಿಕ ಹೊಣೆಗಾರಿಕೆ ಇದೆ ಎಂದರು.
ರೆಡ್‌ಕ್ರಾಸ್‌ನ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಉಪ ಸಮಿತಿಯ ನಿರ್ದೇಶಕಿ ಡಾ.ಸುಮನಾ ಬೋಳಾರ್ ಮಾತನಾಡಿ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂಗನವಾಡಿ ಕೇಂದ್ರಗಳು ಸಮಾಜದ ಮುಖ್ಯ ಘಟಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ದ.ಕ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ರೆಡ್‌ಕ್ರಾಸ್ ಘಟಕದ ಹಿರಿಯ ಸಲಹೆಗಾರ ಪ್ರಭಾಕರ ಶರ್ಮಾ, ರವೀಂದ್ರನಾಥ ಉಚ್ಚಿಲ್, ಚಲನಚಿತ್ರ ನಟ ಮೈಮ್ ರಾಮ್‌ದಾಸ್,ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ದೇವಿಕಾ ಯೋಗ ತರಬೇತಿ ಕೇಂದ್ರದ ನಿರ್ದೇಶಕಿ ದೇವಿಕಾ ಪುರುಷೋತ್ತಮ,ಪತಂಜಲಿ ಯೋಗ ತರಬೇತಿ ಕೇಂದ್ರದ ಶಿಕ್ಷಕಿ ಪ್ರಭಾ ಚಂದ್ರಶೇಖರ್ , ಬಿಜೈ ಕಾಪಿಕಾಡ್‌ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ನಂದಾ ಅತಿಥಿಗಳಾಗಿ ಭಾಗವಹಿಸಿದ್ದರು. ಉದ್ಯಮಿ ಸಾಂಬಶಿವರಾವ್ ಅವರು ಅಂಗನವಾಡಿ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಊಟದ ಬಟ್ಟಲುಗಳನ್ನು ಈ ಸಂದರ್ಭ ಮಕ್ಕಳಿಗೆ ವಿತರಿಸಲಾಯಿತು. ಮೈಮ್ ರಾಮ್‌ದಾಸ್ ಅವರು ಹಾಡು ಮತ್ತು ನಟನೆಯ ಮೂಲಕ ಮಕ್ಕಳನ್ನು ರಂಜಿಸಿದರು. ರೆಡ್‌ಕ್ರಾಸ್ ಸದಸ್ಯರಾದ ಭಾಸ್ಕರ ರೈ ಕಟ್ಟ ವಂದಿಸಿದರು. ಪುಷ್ಪರಾಜ್ ಬಿ.ಎನ್.ಕಾರ್ಯಕ್ರಮ ನಿರೂಪಿಸಿದರು.