

ಮಂಡ್ಯ: ಪ್ರಸ್ತುತ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾವಂತ ಸಮುದಾಯಕ್ಕೆ ಮಾನವೀಯ ಮೌಲ್ಯಗಳ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಿದೆ. ಜತೆಗೆ ಜೀವ ರಕ್ಷಣೆ ಮಾಡಿಕೊಳ್ಳುವ ಜ್ಞಾನವನ್ನು ತಿಳಿಸಿಕೊಡಬೇಕಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಎಸ್.ಬಿ.ಸಮುದಾಯಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಮತ್ತು ಜಿಲಾ ಶಾಖೆಯ ಸಹಯೋಗದಲ್ಲಿ ಜೂನಿಯರ್ ರೆಡ್‌ಕ್ರಾಸ್ ಘಟಕದಡಿ ಆಯೋಜಿಸಿರುವ ಮೈಸೂರು ವಿಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 3 ದಿನಗಳ ತರಬೇತಿ ಶಿಬಿರದ ನೋಂದಣಿ ಮತ್ತು ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.
ದಿನನಿತ್ಯದ ಬದುಕಿನಲ್ಲಿ ಎದುರಾಗುವ ತುರ್ತು ಸಂದರ್ಭಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಕೌಶಲಗಳನ್ನು ನೀಡುವ ಉದ್ದೇಶದಿಂದ ಜೂನಿಯರ್ ರೆಡ್‌ಕ್ರಾಸ್ ಘಟಕಗಳನ್ನು ಎಲ್ಲ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾರಂಭಿಸಿ ತರಬೇತಿ ನೀಡಲಾಗುತ್ತಿದೆ. ಇದರೊಂದಿಗೆ ರೆಡ್‌ಕ್ರಾಸ್‌ನ ಸೇವಾಧ್ಯೇಯಗಳ ಅರಿವು ಎಲ್ಲರಿಗೂ ಅತ್ಯಗತ್ಯ ಎಂದರು.
ಪ್ರೌಢಶಾಲಾ ಹಂತದಲ್ಲಿನ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆ, ರಕ್ತದಾನದ ಮಹತ್ವ, ಪರಿಸರ ಸಂರಕ್ಷಣೆ, ನಾಗರೀಕ ಜವಾಬ್ದಾರಿಗಳು, ನೈತಿಕತೆಯ ವಿಷಯಗಳು, ಎಚ್‌ಐವಿ/ಏಡ್ಸ್, ಮಾದಕ ವ್ಯಸನದ ದುಷ್ಪರಿಣಾಮವನ್ನು ತಡೆಗಟ್ಟುವಿಕೆ ಬಗ್ಗೆ ಹಾಗೂ ರಸ್ತೆ ಸುರಕ್ಷತೆ, ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಮೂರು ದಿನದ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು.
ಶಿಬಿರಕ್ಕೆ ಮೈಸೂರು, ಹಾಸನ, ಮಂಡ್ಯ, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳಿಂದ ತಲಾ 15 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಇನ್ನೂ ದೂರದ ಜಿಲ್ಲೆಗಳಿಂದ ಬರುತ್ತಿದ್ದಾರೆ. ಐವರು ಶಿಕ್ಷಕರು ಸೇರಿದಂತೆ ಒಟ್ಟು 160 ವಿದ್ಯಾರ್ಥಿಗಳು ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದು, ಜತೆಗೆ ನಗರದ ಪ್ರತಿಶಾಲೆಯಿಂದ ಆಯ್ದ ವಿದ್ಯಾರ್ಥಿಗಳು ಸೇರಿದಂತೆ 1000 ವಿದ್ಯಾರ್ಥಿಗಳು ಭಾಗವಹಿಸುವರು ಎಂದರು.
ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ವಿಜ್ಞಾನ, ಗಣಿತದ ಸೂತ್ರಗಳನ್ನು ಕಲಿಯುತ್ತೀರಿ. ಆದರೆ ಹೊರಪ್ರಪಂಚದ ಜ್ಞಾನ ಹೆಚ್ಚು ಇರುವುದಿಲ್ಲ. ಇಂತಹ ಮನೋವಿಕಾಸ ಕಾರ್ಯಕ್ರಮಗಳಿಂದ ನಿಮಗೆ ತುಂಬ ಉಪಯುಕ್ತ ಮಾಹಿತಿ ಲಭ್ಯವಾಗುತ್ತದೆ. ಪ್ರೌಢಶಾಲಾ ಹಂತದಲ್ಲೇ ಬದುಕಿನ ಮೌಲ್ಯಗಳು, ಸೇವಾಧ್ಯೇಯಗಳು, ಮನೋವಿಕಾಸದ ಬಗ್ಗೆ ಮಾಹತಿ ಪಡೆದುಕೊಂಡರೆ ಭವಿಷ್ಯದಲ್ಲಿ ನೆರವಾಗುತ್ತವೆ. ಇಂತಹ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ನುಡಿದರು.
ಮೈಸೂರು ವಿಭಾಗದ ಶರತ್, ಕಾರ್ಯದರ್ಶಿ ವೈದ್ಯನಾಥ್, ಆನಂದ್, ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಷಡಕ್ಷರಿ, ಜವರೇಗೌಡ, ಮಂಗಲ ಎಂ.ಯೋಗೇಶ್ ಇತರರಿದ್ದರು.