ಸಮಾಜಮುಖಿ ಸೇವೆಗೆ ರೆಡ್‌ಕ್ರಾಸ್ ಬೆನ್ನೆಲುಬು

07-10-Shiva-3
ರಾಯಚೂರಿನ ಎಚ್‌ಸಿಎಂಎಸ್‌ಕೆ ಶಿಕ್ಷಣ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ಚಿಕಿತ್ಸಾ ಕಾರ್ಯಾಗಾರವನ್ನು ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ ಉದ್ಘಾಟಿಸಿದರು. ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಸದಸ್ಯರಾದ ಕಲ್ಲಯ್ಯಸ್ವಾಮಿ, ಆನಂದ ಪಾಟೀಲ್, ಅಶೋಕ್ ಪಾಟೀಲ್ ಅತ್ತನೂರು, ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಅತಾವುಲ್ಲಾ, ಕಾಲೇಜು ಪ್ರಾಚಾರ್ಯ ಮಂಜುನಾಥ ಪಾಟೀಲ್ ವಟಗಲ್ ಇದ್ದರು.
Published on

ರಾಯಚೂರು: ಯಾವುದೇ ರೀತಿಯ ಸಮಾಜಮುಖಿ ಕಾರ್ಯಗಳಿದ್ದರೂ ರೆಡ್‌ಕ್ರಾಸ್ ಸಂಸ್ಥೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡುತ್ತಾ ಬಂದಿದ್ದು, ಸಮಾಜ ಸೇವೆಗಾಗಿ ಸಂಸ್ಥೆಯ ಕಾರ್ಯಕರ್ತರು ಹಗಲಿರುಳು ದುಡಿಯುತ್ತಿದ್ದಾರೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ ಹೇಳಿದರು.
ಸ್ಥಳೀಯ ಎಚ್‌ಸಿಎಂಎಸ್‌ಕೆ ಶಿಕ್ಷಣ ಕಾಲೇಜಿನಲ್ಲಿ ರೆಡ್‌ಕ್ರಾಸ್ ಸಂಸ್ಥೆಯಿಂದ ಶನಿವಾರ ಏರ್ಪಡಿಸಿದ್ದ ಪ್ರಥಮ ಚಿಕಿತ್ಸಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರವಾಹ ಹಾಗೂ ಇನ್ನಿತರ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂಸ್ಥೆ ಜನರ ರಕ್ಷಣೆ, ಸಹಾಯ ಒದಗಿಸುವಲ್ಲಿ ಸದಾ ಮುಂದಿರುತ್ತದೆ ಎಂದರು.
ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ ಮಾತನಾಡಿ, ರೆಡ್‌ಕ್ರಾಸ್ ಕಾರ್ಯ ಶ್ಲಾಘನೀಯವಾಗಿದ್ದು, ತುರ್ತು ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಶೋಕ್ ಪಾಟೀಲ್ ಅತ್ತನೂರು ಮಾತನಾಡಿ, ಪ್ರತಿಯೊಬ್ಬರು ಸಮಾಜ ಸೇವೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಋಣ ತೀರಿಸಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರಥಮ ಚಿಕಿತ್ಸಾ ತರಬೇತುದಾರ ಡಾ.ಅನಿರುದ್ಧ ಕುಲಕರ್ಣಿ ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ಸದಸ್ಯರಾದ ಕಲ್ಲಯ್ಯಸ್ವಾಮಿ, ಆನಂದ ಪಾಟೀಲ್, ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಅತಾವುಲ್ಲಾ, ಕಾಲೇಜು ಪ್ರಾಚಾರ್ಯ ಮಂಜುನಾಥ ಪಾಟೀಲ್ ವಟಗಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net