ಕರಾವಳಿಗೆ ರೆಡ್‌ ಅಲರ್ಟ್‌; ದ.ಕ ಜಿಲ್ಲೆಯಲ್ಲಿ ಮುಂಜಾನೆಯಿಂದ ನಿರಂತರ ಮಳೆ

IMG-20220519-WA0007
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮುಂಜಾನೆಯಿಂದಲೇ ನಿರಂತರ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಆರೆಂಜ್‌ ಅಲರ್ಟ್‌ ಘೋಷಣೆ ಮುಂಜಾನೆಯ ಪ್ರಕಟಣೆ ವೇಳೆಗೆ ʻರೆಡ್‌ʼ ಆಗಿ ಬದಲಾಗಿದ್ದು, ಅದರಂತೆ ಮಳೆ ತುಸು ಹೆಚ್ಚಾಗಿಯೇ ಸುರಿಯುತ್ತಿದೆ. ಗ್ರಾಮೀಣ ಭಾಗದಲ್ಲಿ ಮಳೆ ಪ್ರಮಾಣ ಜಾಸ್ತಿಯಿದೆ.
ನಗರದ ರಸ್ತೆಗಳಲ್ಲಿ ಎಂದಿನಂತೆ ನೀರು ನಿಂತು ವಾಹನ ಸವಾರು ಸಂಕಷ್ಟ ಅನುಭವಿಸಿದರು. ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಇಲಾಖೆ, ಯೋಜನೆಗಳಡಿ, ರಸ್ತೆ ಕಾಂಕ್ರೀಟ್, ಕುಡಿಯುವ ನೀರು, ಚರಂಡಿ, ಗ್ಯಾಸ್ ಪೈಪ್‌ಲೈನ್ ಕಾಮಗಾರಿಗಳು ನಡೆಯುತ್ತಿದ್ದು, ಮಳೆಯಿಂದಾಗಿ ಬಹುತೇಕ ಕಡೆಗಳಲ್ಲಿ ಕೆಲಸಕ್ಕೆ ತೊಡಕಾಯಿತು. ಕೆಲವೆಡೆ ಅರೆಬರೆ ಕಾಮಗಾರಿಯಿಂದಾಗಿ ಕೆಸರು, ಮಣ್ಣು, ಮರಳು, ಜಲ್ಲಿ ರಾಶಿಯ ನಡುವೆ ಸಾರ್ವಜನಿಕರು ನಡೆದಾಡಲು ಪ್ರಾಯಾಸಪಟ್ಟರು.
ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆ ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಬೆಳಗ್ಗೆ 8.30ರ ವೇಳೆಗೆ ರಜೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಈ ವೇಳೆ ಬಹುತೇಕ ಮಕ್ಕಳು ಶಾಲೆಗೆ ಹೊರಟಾಗಿತ್ತು. ಕೆಲವು ಖಾಸಗಿ ಶಾಲೆಗಳಲ್ಲಿ ತರಗತಿ ಆರಂಭಕ್ಕೆ ಸಿದ್ಧತೆಗಳು ನಡೆದಿತ್ತು. ರಜೆ ಘೋಷಣೆಯಿಂದ ಮಕ್ಕಳು ಗೊಂದಲಕ್ಕೆ ಒಳಗಾದರು. ಎಂದಿನಂತೆ ಬಸ್‌ಗಳಲ್ಲಿ ಶಾಲೆಕಡೆಗೆ ಹೊರಟವರು, ಶಾಲೆಗೆ ತಲುಪಿ ಮತ್ತೆ ವಾಪಾಸ್‌ ಮನೆಗೆ ತೆರಳಿದರೆ, ವಾಹನಗಳಲ್ಲಿ, ಪಾಲಕರು ಶಾಲೆಗೆ ಬಿಟ್ಟು ಹೋದ ಮಕ್ಕಳು ಮತ್ತೆ ಪಾಲಕರಿಗಾಗಿ ಕಾಯುತ್ತಿದ್ದುದ್ದು ಕಂಡು ಬಂತು. ಕೆಲವು ಶಾಲೆಗಳು ಮಕ್ಕಳನ್ನು ಸಂಜೆವರೆಗೆ ಶಾಲೆಯಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net