ಕೊಡಗಿನಲ್ಲಿ ಶುಕ್ರವಾರವೂ ರೆಡ್ ಅಲರ್ಟ್

Red alert on Friday also in Kodagu
Published on

ಮಡಿಕೇರಿ:

ಕೊಡಗಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಶುಕ್ರವಾರವೂ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಬಹುತೇಕ ಪ್ರದೇಶಗಳಲ್ಲಿ ನದಿ ಅಪಾಯದ ಮಟ್ಟ ತಲುಪಿದ್ದು, ಪ್ರವಾಹದ ಆತಂಕ ಕಂಡುಬAದಿದೆ. ನೆಲ್ಯಹುದಿಕೇರಿ, ಸಿದ್ದಾಪುರ, ಕುಶಾಲನಗರ ಭಾಗದಲ್ಲಿ ಅಪಾಯಕಾರಿ ಪ್ರದೇಶದಲ್ಲಿ ಇರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಅಗತ್ಯವಿರುವ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ.
ಹಾರಂಗಿ ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿದ್ದು ಗುರುವಾರ 10,700 ಕ್ಯೂಸೆಕ್ ಒಳಹರಿವು ಇತ್ತು. 2,859 ಅಡಿ ಎತ್ತರದ ಅಣೆಕಟ್ಟೆಯಲ್ಲಿ 2852.82 ಅಡಿ ನೀರಿದೆ. ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ಜಿಲ್ಲಾ ಕೇಂದ್ರ ಮಡಿಕೇಯಲ್ಲಿ ಉತ್ತಮ ಮಳೆಯಾಗುತ್ತಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕುಸಿಯುವ ಭೀತಿ ಇರುವುದರಿಂದ ಇಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ.ಭಾಗಮಂಡಲದಲ್ಲಿ ಪ್ರವಾಹದ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಭಾಗಮಂಡಲ ದೇವಾಲಯದ ತನಕ ಬಂದು ತಲುಪಿದೆ.

ಕುಟ್ಟ, ಹರಿಹರ, ಇರ್ಪು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಲಕ್ಷ್ಮಣ ತೀರ್ಥ ನದಿ ಭರ್ತಿಯಾಗಿ ಬಾಳೆಲೆ ಸಮೀಪ ನಿಟ್ಟೂರು ಸೇತುವೆಯ ಪಕ್ಕದಲ್ಲಿ ನದಿಯ ಎರಡೂ ಬದಿಯ ಗದ್ದೆಗೆ ನೀರು ತುಂಬಿದೆ. ಮುರ್ನಾಡು ಬಳಿ ವಿರಾಜಪೇಟೆ ರಸ್ತೆಯಲ್ಲೂ ನದಿ ನೀರು ಹರಿಯುತ್ತಿದೆ.

ಶ್ರೀಮಂಗಲ ಹೋಬಳಿ ಟಿ - ಶೆಟ್ಟಿಗೇರಿ ಗ್ರಾಮದ ಟೀ ಎಸ್ಟೇಟ್ ಸಮೀಪ ನಡೆಯುತ್ತಿದ್ದ ವೈಟ್ ವಾಟರ್ ರಿವರ್ ರ‍್ಯಾಫ್ಟಿಂಗ್ ಅನ್ನು ನದಿಯಲ್ಲಿ ನೀರಿನ ಹರಿವು ಹೆಚ್ಚಿದ ಕಾರಣಕ್ಕೆ ಕಂದಾಯ ಅಧಿಕಾರಿಗಳು ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ.
ವಿರಾಜಪೇಟೆ ತಾಲೂಕು ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆಯಲ್ಲಿ ಭಾರಿ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ಕರಡಿಗೋಡು ಹೊಳೆಕೆರೆ ಬದಿಯಲ್ಲಿ ವಾಸವಿರುವ 9 ಕುಟುಂಬದವರಿಗೆ ಪ್ರವಾಹ ಭೀತಿ ಇರುವುದರಿಂದ ಸ್ಥಳಾಂತರಿಸಲಾಗಿದೆ. ತಹಸೀಲ್ದಾರ್ ರಾಮಚಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇತರರು ಭೇಟಿ ನೀಡಿ ಪರಿಶೀಲಿಸಿದರು.

ಮಡಿಕೇರಿ-ಮೂರ್ನಾಡು ಮುಖ್ಯ ರಸ್ತೆಯ ಕಗ್ಗೊಡ್ಲು ಗ್ರಾಮದ ಮುತ್ತಪ್ಪ ಎಂಬವರ ಅಂಗಡಿ ಮತ್ತು ಮನೆಗೆ ಹೆಚ್ಚಿನ ಮಳೆಯಿಂದಾಗಿ ಹೊಳೆ ತುಂಬಿ ಜಲಾವೃತವಾಗಿದ್ದು, ಈ ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ. ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಕತ್ತೂರು ವಿರಾಜಪೇಟೆ ಮಡಿಕೇರಿ ಮುಖ್ಯ ರಸ್ತೆಯಲ್ಲಿ ಮಳೆಯಿಂದಾಗಿ ನೀರು ತುಂಬಿದ್ದು ಮಹಮ್ಮದ್ ಮತ್ತು ಮೂಸಾ ಎಂಬವರ ಮನೆಗೆ ಸ್ವಲ್ಪ ಪ್ರಮಾಣ ನೀರು ಹರಿದು ಬಂದಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಇಲ್ಲಿ ಚರಂಡಿ ಸ್ವಚ್ಛಗೊಳಿಸಲಾಗಿದೆ. ಕಗ್ಗೊಡ್ಲು - ಬಿಳಿಗೇರಿ ರಸ್ತೆಯಲ್ಲಿ ಬಾಯಂಡಾ ಮನೆ ಹತ್ತಿರ ಸೇತುವೆಯ ಒಂದು ಬದಿ ಮಣ್ಣು ಕುಸಿಯುತ್ತಿದೆ. ಈ ಸಂಬAಧ ಮುಂಜಾಗ್ರತ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ವಾಹನ ಸವಾರರು ಬದಲಿ ರಸ್ತೆಯಾಗಿ ಮೇಕೇರಿ-ಬಿಳಿಗೇರಿ ರಸ್ತೆ ಬಳಸುವಂತೆ ಸೂಚಿಸಲಾಗಿದೆ.

ವಿರಾಜಪೇಟೆ ಹೋಬಳಿ ಅಂಬಟ್ಟಿ ಗ್ರಾಮದ ಕೆ. ಅಲೀಮಾ ಎಂಬವರ ವಾಸದ ಮನೆಯ ಹಿಂಭಾಗದಲ್ಲಿ ಬರೆ ಕುಸಿಯುತ್ತಿದ್ದು, ಈ ಸಂಬAಧ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕುಟುಂಬವನ್ನು ಸ್ಥಳಾಂತರಿಸಿದ್ದಾರೆ.

ಮಡಿಕೇರಿ ತಾಲೂಕು ಕುಂಜಿಲ ಗ್ರಾಮದಲ್ಲಿ ಖದಿಸಮ್ಮ ಎಂಬುವವರ ಮನೆಗೆ ಹಾನಿಯಾಗಿದ್ದು, ಮನೆ ಬೀಳುವ ಸ್ಥಿತಿಯಲ್ಲಿ ಇರುವದರಿಂದ ಇಲ್ಲಿದ್ದ ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಚೇಲವಾರ ಗ್ರಾಮದ ಚೆಟ್ಟಿಯಪ್ಪ ಎಂಬುವವರ ವಾಸದ ಮನೆಯ ಹಿಂಭಾಗದಲ್ಲಿ ಗೋಡೆ ಕುಸಿದಿದೆ. ಮನೆ ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆಯಿರುವುದರಿಂದ ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ. ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಸಂಪಾಜೆ ಗ್ರಾಮದ ಬಂಡನ ಸರೋಜನಿ ಎಂಬುವರ ಮನೆ ಸಮೀಪ ಹೆಚ್ಚಿನ ಮಳೆಯಿಂದ ಬರೆ ಕುಸಿದು ಹಾನಿಯಾಗಿದೆ. ಮದೆ ಗ್ರಾಮದ ಮನೋಹರಿ ಎಂಬುವರ ಮನೆ ಬಳಿಯೂ ಹೆಚ್ಚಿನ ಮಳೆಯಿಂದ ಬರೆ ಕುಸಿದಿದೆ. ಯವಕಪಾಡಿ ಬಳಿಯ ಕಾಲೋನಿ ನಿವಾಸಿ ಕಾವೇರಿ ಅವರ ವಾಸದ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ.

ಸೋಮವಾರಪೇಟೆ ಹೋಬಳಿಯ ನೇಗಳ್ಳಿ ಕರ್ಕಳ್ಳಿ ಗ್ರಾಮದ ಮುನಿಯಮ್ಮ ಅವರ ವಾಸದ ಮನೆ ಭಾರಿ ಗಾಳಿಯಿಂದ ಹಾನಿಗೆ ಒಳಗಾಗಿದೆ. ಶನಿವಾರಸಂತೆ ಹೋಬಳಿಯ ಆಲೂರು ಸಿದ್ದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರೋಹಳ್ಳಿ ಗ್ರಾಮದಲ್ಲಿ ರಸ್ತೆಯ ಎರಡು ಭಾಗದಲ್ಲಿ ಬರೆ ಕುಸಿದಿದ್ದು, ಮಣ್ಣು ತೆರವುಗೊಳಿಸಲಾಗಿದೆ. ಸೋಮವಾರಪೇಟೆ ಹೋಬಳಿಯ ದೊಡ್ಡಬೂರು ಗ್ರಾಮದ ಗೌರಿ ರಾಜು ಎಂಬವರ ವಾಸದ ಮನೆಯ ಗೋಡೆ ಭಾರಿ ಮಳೆ - ಗಾಳಿಯಿಂದ ಕುಸಿದಿದೆ. ಸೋಮವಾರಪೇಟೆ ಹೋಬಳಿ ಮೂವತ್ತೋಕ್ಲು ಗ್ರಾಮದ ಜಾನು ಬೇಡು ಅವರ ಮನೆಯು ವ್ಯಾಪಕ ಮಳೆಗೆ ಹಾನಿಯಾಗಿದೆ. ಕೊಡ್ಲಿಪೇಟೆ ಹೋಬಳಿ ಅವರೇದಾಳು ಗ್ರಾಮದ ಮೀನಾಕ್ಷಿ ರಂಗಯ್ಯ ಎಂಬುವರ ಮನೆಯೂ ಹೆಚ್ಚಿನ ಮಳೆಯಿಂದ ಹಾನಿಗೊಳಗಾಗಿದೆ. ಸೋಮವಾರಪೇಟೆ ತಾಲೂಕಿನ ಬಿಳಕಿಕೊಪ್ಪ ಗ್ರಾಮದ ಸರಸ್ವತಿ ಎಂಬವರ ಮನೆ ಮೇಲೆ ತೀವ್ರ ಮಳೆಯಿಂದ ಮರ ಬಿದ್ದು ಮನೆ ಹಾನಿಯಾಗಿದೆ.

ಕುಶಾಲನಗರ ಹೋಬಳಿ ಮಾದಾಪಟ್ಟಣ ಗ್ರಾಮದ ನಿವಾಸಿ ಜಯಮ್ಮ ಅವರ ವಾಸದ ಮನೆಯ ಗೋಡೆ ಹಾಗೂ ಛಾವಣಿ ಹಾನಿಯಾಗಿದ್ದು, ತಹಶೀಲ್ದಾರ್ ಕಿರಣ್ ಗೌರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರವಾಹದಲ್ಲಿ ಸಂತ್ರಸ್ತರಾದವರಿಗೆ ಜಿಲ್ಲಾಡಳಿತದಿಂದ ಆಹಾರ ಕಿಟ್ ವಿತರಿಸಲಾಗುತ್ತಿದೆ. ಕುಶಾಲನಗರ ತಾಲೂಕು ಕುಶಾಲನಗರ ಹೋಬಳಿ ನೆಲ್ಯಹುದಿಕೇರಿ ಗ್ರಾಮದ ಕಾವೇರಿ ನದಿ ಪಾತ್ರದಲ್ಲಿ ವಾಸವಾಗಿದ್ದ ಅಕ್ಕಣ್ಣಿ ಕರ್ಪ ಅವರ ಮನೆಗೆ ಕಾವೇರಿ ನದಿ ನೀರು ನುಗ್ಗಿದ್ದು, ಸ್ಥಳಾಂತರಿಸಲಾಗಿರುವ ಇವರ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಲಾಯಿತು. ನೆಲ್ಯ ಹುದಿಕೇರಿ ಗ್ರಾಮದ ಕಾವೇರಿ ನದಿ ಪಾತ್ರದ ಬಳಿ ವಾಸವಾಗಿದ್ದ ರಾಜು ಅವರ ಕುಟುಂಬವನ್ನೂ ಸ್ಥಳಾಂತರಿಸಲಾಗಿದ್ದು ಅವರಿಗೂ ಆಹಾರ ಕಿಟ್ ನೀಡಲಾಗಿದೆ. ಬಸವನತ್ತೂರು ಗ್ರಾಮದ ಲಕ್ಷಿö್ಮÃಮಣಿ ಎಂಬವರ ಮನೆ ಹೆಚ್ಚಿನ ಮಳೆಯಿಂದ ಪೂರ್ಣ ಹಾನಿಯಾಗಿದ್ದು, ಇವರಿಗೂ ಆಹಾರ ಕಿಟ್ ತಲುಪಿಸಲಾಗಿದೆ.

ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡAತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 74.62 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 12.60 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1242.80 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 607.48 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 100.13 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 64.40 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 75.62 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 99.25 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 33.70 ಮಿ.ಮೀ. ಮಳೆಯಾಗಿದೆ.

ಮಡಿಕೇರಿ ಕಸಬಾ 132.80, ನಾಪೋಕ್ಲು 57.80, ಸಂಪಾಜೆ 84.50, ಭಾಗಮಂಡಲ 125.40, ವಿರಾಜಪೇಟೆ 64.80, ಅಮ್ಮತ್ತಿ 64, ಹುದಿಕೇರಿ 87.60, ಶ್ರೀಮಂಗಲ 97.80, ಪೊನ್ನಂಪೇಟೆ 67, ಬಾಳೆಲೆ 50.09, ಸೋಮವಾರಪೇಟೆ ಕಸಬಾ 59.40, ಶನಿವಾರಸಂತೆ 75, ಶಾಂತಳ್ಳಿ 174, ಕೊಡ್ಲಿಪೇಟೆ 88.60, ಕುಶಾಲನಗರ 22.20 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 45.20 ಮಿ.ಮೀ.ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net