ಕೊಡಗಿನಲ್ಲಿ ಶುಕ್ರವಾರ ತನಕ ರೆಡ್ ಅಲರ್ಟ್

Red Alert in Kodagu till Friday
Published on

ಮಡಿಕೇರಿ:

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬುಧವಾರವೂ ಮಳೆಯ ವಾತಾವರಣ ಕಂಡು ಬಂತು. ಗುರುವಾರ ಮತ್ತು ಶುಕ್ರವಾರ ಮಳೆಯ ಪ್ರಮಾಣ ಮತ್ತೆ ಹೆಚ್ಚಾಗುವ ಸಾಧ್ಯತೆಯಿದ್ದು ಹವಾಮಾನ ಇಲಾಖೆ 2 ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೆಳಗ್ಗೆಯಿಂದಲೇ ಮಂಜು ಮುಸುಕಿದ ವಾತಾವರಣ ಇತ್ತಾದರೂ ಆಗಾಗ್ಗೆ ಜೋರು ಮಳೆಯಾಗುತ್ತಿತ್ತು. ಭಾರಿ ಚಳಿಯ ಅನುಭವ ಆಗುತ್ತಿತ್ತು.

ಜಿಲ್ಲೆಯ ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೆಲವು ಕಡೆ ಮನೆಗಳಿಗೂ ಹಾನಿಯಾಗಿದೆ. ವಿರಾಜಪೇಟೆ - ಗೋಣಿಕೊಪ್ಪ ಮುಖ್ಯ ರಸ್ತೆಯ ಹಾತೂರು ಬಳಿ ಬೆಳಗ್ಗಿನ ವೇಳೆ ಮಳೆ - ಗಾಳಿಯಿಂದ ಮರ ಬಿದ್ದಿತ್ತು. ಮರÀ ತೆರವು ಮಾಡಿದ ನಂತರ ಈ ರಸ್ತೆಯಲ್ಲಿ ವಾಹನ ಸಂಚಾರ ಪುನಾರಂಭವಾಯಿತು. ಭಾಗಮಂಡಲ-ತಲಕಾವೇರಿ ಮಾರ್ಗದಲ್ಲೂ ರಸ್ತೆಗೆ ಅಡ್ಡವಾಗಿ ಮರ ಬಿದ್ದು ಸಮಸ್ಯೆ ಆಗಿತ್ತು.

ಪೊನ್ನಂಪೇಟೆ ತಾಲೂಕಿನ ಕಾನೂರು - ಕುಟ್ಟ ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಗೋಣಿಕೊಪ್ಪ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿದರು.

ಕುಶಾಲನಗರ ತಾಲೂಕು ಕುಶಾಲನಗರ ಟೌನ್ ಕೈಗಾರಿಕೆ ಬಡಾವಣೆಯ ನಿವಾಸಿ ಮುತ್ತಮ್ಮ ಶಿವಣ್ಣ ಎಂಬವರ ವಾಸದ ಮನೆಯ ಗೋಡೆಗೆ ಮಳೆಯಿಂದ ಹಾನಿಯಾಗಿದೆ. ಕೊಡ್ಲಿಪೇಟೆ ಹೋಬಳಿ, ಬೆಂಬಳೂರು ಗ್ರಾಮದ ಪಾರ್ವತಿ ದೊಡ್ಡಯ್ಯ ಎಂಬುವರ ಮನೆಗೆ ಕೂಡ ಮಳೆಯಿಂದ ಹಾನಿಯಾಗಿದೆ. ಭಾಗಮಂಡಲ ಹೋಬಳಿ ಬಿ.ಬಾಡಗ ಗ್ರಾಮದ ಕೆ.ಯು. ಉಲ್ಲಾಸ ಎಂಬವರ ಮನೆಗೆ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಉತ್ತಮ ಮಳೆ ಆಗುತ್ತಿದ್ದು, ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಭರ್ತಿ ಆಗಿ ತುಂಬಿ ಹರಿಯುತ್ತಿದೆ. ಭಾಗಮಂಡಲ-ನಾಪೋಕ್ಲು ಮತ್ತು ಭಾಗಮಂಡಲ-ಮಡಿಕೇರಿ ರಸ್ತೆ ಮೇಲೆ ನೀರು ಬಂದಿದೆ. ಮೇಲ್ಸೇತುವೆಯಲ್ಲಿ ಈ ಬಾರಿ ವಾಹನ ಮತ್ತು ಜನರ ಓಡಾಟಕ್ಕೆ ಅವಕಾಶ ಕೊಟ್ಟಿರುವುದರಿಂದ ಭಾಗಮಂಡಲ ದ್ವೀಪವಾಗುವುದು ಈ ವರ್ಷ ತಪ್ಪಿದಂತಾಗಿದೆ.

ಮಡಿಕೇರಿಯಲ್ಲಿ ಸತತ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಓಂಕಾರೇಶ್ವರ ದೇವಾಲಯದ ಪುಷ್ಕರಿಣಿ ಭರ್ತಿ ಆಗಿದ್ದು, ಮೆಟ್ಟಿಲು ತನಕ ನೀರು ಬಂದಿದೆ.
ಕಾವೇರಿ ನದಿಯಲ್ಲಿ ನೀರಿನ ಹರಿವು ಏರಿಕೆ ಆಗುತ್ತಿರುವುದರಿಂದ ಚೆರಿಯಪರಂಬುವಿನಲ್ಲಿ ನದಿ ನೀರಿನ ಮಟ್ಟ ಜಾಸ್ತಿ ಆಗಿದೆ. ರಸ್ತೆ ಮೇಲೆ ನೀರು ಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಬೇತ್ರಿ, ನೆಲ್ಲಿಹುದಿಕೇರಿ ಮತ್ತಿತರ ಭಾಗಗಳಲ್ಲೂ ಕಾವೇರಿ ನದಿ ತುಂಬಿ ಹರಿಯುತ್ತಿದೆ.

ಕುಶಾಲನಗರದಲ್ಲಿ ಕಾವೇರಿ ನದಿ ಪಟ್ಟಣದ ಮೂರು ಭಾಗವನ್ನು ಸುತ್ತುವರಿದು ಹರಿಯುತ್ತಿದ್ದು, ಇಲ್ಲಿ ನದಿ ನೀರು ಅಪಾಯದ ಮಟ್ಟ ತಲುಪಿದೆ. ಮಳೆಯ ಪ್ರಮಾಣ ಹೀಗೆಯೇ ಮುಂದುವರಿದರೆ ತಗ್ಗುಪ್ರದೇಶದಲ್ಲಿ ಇರುವ ಬಡಾವಣೆಗಳಿಗೆ ನೀರು ನುಗ್ಗುವ ಆತಂಕ ಕಂಡುಬAದಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯ ಹಿನ್ನೀರು ಪ್ರದೇಶದಲ್ಲೂ ಸಾಕಷ್ಟು ಮಳೆ ಆಗುತ್ತಿದೆ. ಬುಧವಾರ ಸಂಜೆಯ ಮಾಹಿತಿ ಪ್ರಕಾರ ಅಣೆಕಟ್ಟೆಗೆ 11,236 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನದಿಗೆ 8 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲವಿದ್ಯುತ್ ಕೇಂದ್ರದ ಮೂಲಕ 2 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ.
2859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಪ್ರಸ್ತುತ 2852.69 ಅಡಿ ನೀರಿದೆ. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 6.516 ಟಿಎಂಸಿ ನೀರಿನ ಸಂಗ್ರಹ ಇದೆ. ಒಳಹರಿವಿನ ಮೇಲೆ ಅಧಿಕಾರಿಗಳು ನಿರಂತರ ನಿಗಾ ಇಟ್ಟಿದ್ದು, ಒಳಹರಿವಿನ ಪ್ರಮಾಣದ ಆಧಾರದಲ್ಲಿ ವೈಜ್ಞಾನಿಕವಾಗಿ ನೀರಿನ ನಿರ್ವಹಣೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡAತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 78.80 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಈ ದಿನ ಮಳೆ ಇರಲಿಲ್ಲ. ಜನವರಿಯಿಂದ ಇಲ್ಲಿಯವರೆಗೆ 1347.30 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 594.88 ಮಿ.ಮೀ. ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 98.42 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 55.60 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 90.05 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 110.05 ಮಿ.ಮೀ., ಹಾಗೂ ಕುಶಾಲನಗರ ತಾಲೂಕಿನಲ್ಲಿ 39.90 ಮಿ.ಮೀ. ಮಳೆಯಾಗಿದೆ.

ಮಡಿಕೇರಿ ಕಸಬಾ 102, ನಾಪೋಕ್ಲು 77.20, ಸಂಪಾಜೆ 64.50, ಭಾಗಮಂಡಲ 150, ವಿರಾಜಪೇಟೆ 61.20, ಅಮ್ಮತ್ತಿ 50, ಹುದಿಕೇರಿ 104.10, ಶ್ರೀಮಂಗಲ 121, ಪೊನ್ನಂಪೇಟೆ 85, ಬಾಳೆಲೆ 50.12, ಸೋಮವಾರಪೇಟೆ ಕಸಬಾ 108.20, ಶನಿವಾರಸಂತೆ 55, ಕೊಡ್ಲಿಪೇಟೆ 43, ಕುಶಾಲನಗರ 19.80, ಸುಂಟಿಕೊಪ್ಪ 60 ಮಿ.ಮೀ. ಹಾಗೂ ಶಾಂತಳ್ಳಿ ಹೋಬಳಿಯಲ್ಲಿ ಅತ್ಯಧಿಕ 234 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net