

ಬೆಂಗಳೂರು: ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರವೂ ವರುರ್ಣಾಭಟ ಮುಂದುವರಿದಿದೆ. ಶಿವಮೊಗ್ಗದ ಆಗುಂಬೆ, ಕೊಡಗಿನ ಗೋಣಿಕೊಪ್ಪ ಸೇರಿ ಕರಾವಳಿಯಲ್ಲಿ ಮಳೆ ತೀವ್ರತೆ ಇನ್ನಷ್ಟು ಜಾಸ್ತಿಯಾಗಿದ್ದು, ಜಲಾಶಯಗಳಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅರ್ಲಟ್ ಘೋಷಿಸಿದೆ. ಈ ಸಂದರ್ಭದಲ್ಲಿ 204 ಮಿಮೀ ಮಳೆ ಸುರಿಯಲಿದೆ. ಜು.17ರಿಂದ ಮುಂದಿನ ಮೂರು ದಿನ ಆರೆಂಜ್ ಅರ್ಲಟ್ ಸಹ ನೀಡಲಾಗಿದೆ. ಪ್ರತಿ ಗಂಟೆಗೆ 55 ಕಿ.ಮೀ.ವೇಗದಲ್ಲಿ ಬೀಸುವ ಬಿರುಗಾಳಿ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧಿಸಲಿದೆ.
ದಕ್ಷಿಣ ಕನ್ನಡದ ಮೂಲ್ಕಿಯಿಂದ ಮಂಗಳೂರಿನವರೆಗೆ, ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳವರೆಗೆ, ಉಡುಪಿಯ ಬೈಂದೂರಿನ ಕಾಪುವರೆಗೆ ಹೈ ವೇವ್ ವಾಚ್ ಅರ್ಲಟ್ ನೀಡಲಾಗಿದೆ. ಸಮುದ್ರದಲ್ಲಿ 3 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳಲಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಕೊಡಗು, ಹಾಸನ, ಬೆಳಗಾವಿಯಲ್ಲಿ ಜು.15ರಿಂದ ಜು.16ರವರೆಗೆ ಆರೆಂಜ್ ಅರ್ಲಟ್ ಇದ್ದರೆ, ಧಾರವಾಡ, ಬೀದರ್, ಗದಗ, ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ಮೈಸೂರಿನಲ್ಲಿ ಯೆಲ್ಲೋ ಅರ್ಲಟ್ ಇರಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ ಸೇರಿ ದಕ್ಷಿಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮುಂದಿನ 2 ದಿನ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.