

ಬೆಂಗಳೂರು: ರಾಜ್ಯದಲ್ಲೆಡೆ ವರುಣಾರ್ಭಟ ಮುಂದುವರಿದಿದ್ದು, ಕರಾವಳಿ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರವಾಗಿ ಮಳೆಯಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗದಲ್ಲಿ ಜೂ 24ರಂದು ಅತಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅರ್ಲಟ್ ಘೋಷಿಸಿದೆ. ಅಲ್ಲದೆ, ಜೂ 25ರಿಂದ ಜೂ 28ರವರೆಗೆ ಈ ಮೇಲಿನ ಜಿಲ್ಲೆಗಳಿಗೆ ಆರೆಂಜ್ ಅರ್ಲಟ್ ಇರಲಿದೆ. ಬೆಳಗಾವಿ, ಧಾರವಾಡ, ದಾವಣಗೆರೆ, ಮಂಡ್ಯ, ಮೈಸೂರಿನಲ್ಲಿ ಮುಂದಿನ 2 ದಿನ ಯೆಲ್ಲೋ ಅರ್ಲಟ್ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ಕೆಲ ಜಿಲ್ಲೆಗಳಲ್ಲಿ ಬಿರುಗಾಳಿ ಜಾಸ್ತಿ ಇರಲಿದೆ.
ಕರಾವಳಿ ಭಾಗದ ಉದ್ದಕ್ಕೂ ಪ್ರತಿ ಗಂಟೆಗೆ 55 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ದಣ ಕನ್ನಡದ ಮುಲ್ಕಿಯಿಂದ ಮಂಗಳೂರಿನವರೆಗೆ, ಉಡುಪಿಯ ಬೈಂದೂರಿನಿಂದ ಕಾಪುವರೆಗೆ, ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳದವರೆಗೆ 2.9-3.2 ಮೀಟರ್ ಎತ್ತರದ ಅಲೆಗಳು ಎಳಲಿವೆ. ಹೀಗಾಗಿ, ಸಾಗರದ ಕಾರ್ಯಾಚರಣೆಗಳು ನಡೆಸದಂತೆ ಹಾಗೂ ಸಮುದ್ರದ ದಡದಲ್ಲಿ ಪ್ರವಾಸಿಗರು ತೆರಳದಂತೆ ಎಚ್ಚರಿಕೆಯಿಂದ ಇರಬೇಕು. ಜತೆಗೆ, ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರ ಇಳಿಯಬಾರದು ಎಂದು ಇಲಾಖೆ ಸಲಹೆ ನೀಡಿದೆ.