

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಭಾರಿ ಮಳೆಯಾಗುವ ಮೂಲಕ ದುರ್ಬಲವಾಗಿರುವ ಮುಂಗಾರು ಚುರುಕು ಪಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಸ್ತುತ ಹವಾಮಾನ ಮಾಹಿತಿಯಂತೆ ಗುರುವಾರ, ಶುಕ್ರವಾರ ಯೆಲ್ಲೋ ಅಲರ್ಟ್ ಇದ್ದರೆ, ಶನಿವಾರ ಆರೆಂಜ್, ಭಾನುವಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡ ಪ್ರದೇಶ ಜೂನ್ 12ರ ವೇಳೆಗೆ ಸಣ್ಣ ಪ್ರಮಾಣದ ವಾಯುಭಾರ ಕುಸಿತವಾಗಿ ಬದಲಾಗಲಿದೆ. ಆದರೆ ಇದರ ಪರಿಣಾಮ ಕರಾವಳಿಯ ಮಳೆಯ ಮೇಲೆ ಪರಿಣಾಮ ಉಂಟಾಗದು, ಬದಲಾಗಿ ಮುಂಗಾರು ಮತ್ತಷ್ಟು ಬಲಗೊಳ್ಳಲು ಸಹಾಯವಾಗಲಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬಂಗಾಳ ಆಳಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಕಾಸರಗೋಡು ಸಹಿತ ಕೇರಳದಲ್ಲಿ ಜೂನ್ 11ರಿಂದ 15ರವರೆಗೆ ಬಿರುಸಿನ ಮಳೆಯಾಗುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸಮುದ್ರದಲ್ಲಿ 2.5ರಿಂದ 3.2 ಮೀ. ಎತ್ತರದವರೆಗೂ ಅಲೆಗಳು ಎದ್ದೇಳುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹಾಗೂ ಕರಾವಳಿಯಲ್ಲಿ ವಾಸಿಸುತ್ತಿರುವರು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆ ಕಾಸರಗೋಡು ಜಿಲ್ಲಾ ಮೀನುಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.
ಸಾಧಾರಣ ಮಳೆ: ದ.ಕ. ಜಿಲ್ಲೆಯ ವಿವಿಧೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ದಿನದ ಬಹುಭಾಗ ಮೋಡ, ಬಿಸಿಲ ವಾತಾವರಣವಿತ್ತು. ಮಂಗಳೂರು ನಗರ-ಹೊರವಲಯದಲ್ಲಿ ಒಂದೆರಡು ಬಾರಿ ತುಂತುರು ಮಳೆಯಾಗಿದೆ. ಸಾಯಂಕಾಲ ಕೆಲಹೊತ್ತು ಉತ್ತಮ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ, ಬುಧವಾರ ಹಗಲು ಬಿಟ್ಟುಬಿಟ್ಟು ಮಳೆಯಾಗಿದೆ. ಮಧ್ಯಾಹ್ನದಿಂದ ಸಾಯಂಕಾಲವರೆಗೆ ಸಣ್ಣ ಪ್ರಮಾಣದಲ್ಲಿ ನಿರಂತರ ಮಳೆಯಾಗಿದೆ.