

ಕೆ.ಆರ್.ಸಾಗರ: ಮಜ್ಜಿಗೆಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇತ್ತೀಚೆಗೆ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೈಸೂರು ವಿಭಾಗದ ತರಬೇತಿ ಸಂಸ್ಥೆ ಪ್ರಾಂಶುಪಾಲ ದಿನೇಶ ಪೂಜಾರಿ ಮಾತನಾಡಿ, ಸಂಸ್ಥೆ ಯಾವುದೇ ದಾಖಲಾತಿ ಇಲ್ಲದೆ ಮಹಿಳೆಯರಿಗೆ ಸಾಲ ನೀಡಿ ಸ್ವಂತ ಉದ್ಯೋಗಕ್ಕೆ ನೆರವಾಗುತ್ತಿದೆ. ಇದರ ಪರಿಣಾಮ ಸಾವಿರಾರು ಮಹಿಳೆಯರು ಸ್ವಯಂಉದ್ಯೋಗ ನಡೆಸುತ್ತಿದ್ದಾರೆ ಎಂದರು.
ಸಾಹಿತಿ ಮಜ್ಜಿಗೆಪುರ ಶಿವರಾಂ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರತಿ ಗ್ರಾಮದ ಮಹಿಳೆಯರು ಕೇವಲ ಹಣಕಾಸು ಸಹಾಯ ಮಾತ್ರವಲ್ಲ ಸ್ವಉದ್ಯೋಗದೊಂದಿಗೆ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಮಕ್ಕಳ ಮುಂದಿನ ಭವಿಷ್ಯ ರೂಪಿಸಲು ಹಣ ಉಳಿತಾಯ ಮಾಡುತ್ತಿದ್ದಾರೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಚನ್ನೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿ ಯಶವಂತ, ಜಿಲ್ಲಾ ಜನಜಾಗೃತಿ ಸದಸ್ಯೆ ಉಮಾ ಬಸವರಾಜು, ಮಜ್ಜಿಗೆಪುರ ಗ್ರಾಪಂ ಸದಸ್ಯ ಗಿರಿಜಾ, ವಲಯ ಮೇಲ್ವಿಚಾರಕ ಕುಪ್ಪುಸ್ವಾಮಿ, ಶಿಕ್ಷಕಿಯರಾದ ಗೀತಾ, ಉಷಾ, ಗ್ರಾಮದ ಮುಖಂಡರ ಭರತ್, ಸೇವಾ ಪ್ರತಿನಿಧಿಗಳಾದ ಪದ್ಮಾವತಿ, ಜ್ಯೋತಿ, ಲತಾ ಇದ್ದರು.