ಶಿಕ್ಷಕರ ನೇಮಕಾತಿ ಶೀಘ್ರದಲ್ಲೇ ಪೂರ್ಣ

27ark-1
Published on


ಅರಕಲಗೂಡು : ರಾಜ್ಯದಲ್ಲಿ ಈ ಹಿಂದೆ ಇದ್ದ ಸರ್ಕಾರ ಮೂರುವರೆ ವರ್ಷಗಳಲ್ಲಿ 4500 ಶಿಕ್ಷಕರನ್ನು ನೇಮಕ ಮಾಡಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ 12 ಸಾವಿರ ಶಿಕ್ಷಕರ ನೇಮಕಾತಿ ಮಾಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.


ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ತಾಲೂಕು ಶಿಕ್ಷಕರ ಸಂಘಗಳ ಸಹಯೋಗದಲ್ಲಿ ಶುಕ್ರವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಶಿಕ್ಷಕರ ನೇಮಕಾತಿಯಲ್ಲಿ ಇದ್ದ ನ್ಯಾಯಾಲಯದ ತೊಡಕುಗಳನ್ನು ನಿವಾರಿಸಲಾಗಿದೆ. ಇನ್ನೂ ಒಂದು ಸಾವಿರ ಶಿಕ್ಷಕರ ನೇಮಕಾತಿ ಬಾಕಿ ಇದ್ದು, ಶೀಘ್ರದಲ್ಲೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಶಿಕ್ಷಣ ಇಲಾಖೆ ಬಹು ದೊಡ್ಡ ಇಲಾಖೆಯಾಗಿದೆ. ರಾಜ್ಯದಲ್ಲಿ 58 ಸಾವಿರ ಶಾಲಾ-ಕಾಲೇಜುಗಳು ಇದ್ದು 1 ಕೋಟಿಗೂ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸರ್ಕಾರಿ ನೌಕರರಲ್ಲಿ ಶೇ.40 ರಷ್ಟು ನೌಕರರು ಈ ಇಲಾಖೆಯವರೆ ಇದ್ದು, ವಾರ್ಷಿ ಕ 50 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. 7ನೇ ವೇತನ ಆಯೋಗದ ಅನುಷ್ಠಾನದಿಂದ ಶಿಕ್ಷರ ವೇತನದಲ್ಲಿ 6 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ ಎಂದರು.


ಕಲ್ಯಾಣ ಕರ್ನಾಟಕದಲ್ಲಿ 6 ಸಾವಿರ ಶಿಕ್ಷಕರ ನೇಮಕಾತಿ ಬಾಕಿ ಇದ್ದು, 5800 ಶಿಕ್ಷಕರನ್ನು ಒಂದು ತಿಂಗಳಲ್ಲಿ ನೇಮಕಾತಿ ಮಾಡಲಾಗುವುದು. ರಾಜ್ಯದಲ್ಲಿ 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ವಿವಿಧ ವಿಷಯಗಳನ್ನು ಬೋಧಿಸಲು ಹೆಚ್ಚುವರಿಯಾಗಿ 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಸರ್ಕಾರಿ ಶಾಲೆಯ ಮಕ್ಕಳಲ್ಲಿ ಅಪೌಷ್ಠಕತೆ ಹೊಗಲಾಡಿಸಲಿ. ಈಗಾಗಲೆ ರಾಗಿ ಮಾಲ್ಟ್ ನೀಡಲಾಗುತ್ತಿದೆ. ವಾರದಲ್ಲಿ ಎರಡು ದಿನ ಕೋಳಿ ಮೊಟ್ಟೆ ನೀಡಲಾಗುತ್ತಿದೆ. ಈ ಯೋಜನೆಗೆ ಅಜೀಂ ಪ್ರೇಮ್‌ಜೀ ಪೌಂಡೇಷನ್ 1591 ಕೋಟಿ ರೂ. ದೇಣಿಗೆ ನೀಡಿದ್ದು ಇದರಲ್ಲಿ ವಾರದ 6 ದಿನಗಳೂ ಮೊಟ್ಟೆ ನೀಡುವ ಯೋಜನೆ ರೂಪಿಸಿದ್ದೇವೆ. ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.

ಸಿ.ಆರ್. ಫಂಡ್‌ನಿಂದ ರಾಜ್ಯದಲ್ಲಿ 500 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಮೂರು ಮರು ಪರೀಕ್ಷಾ ಪದ್ಧತಿ ಜಾರಿಗೊಳಿಸಿದ ಪರಿಣಾಮ ದ್ವಿತೀಯ ಪಿಯು ನಲ್ಲಿ 80 ಸಾವಿರ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ 63 ಸಾವಿರ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಪ್ರವೇಶ ಪಡೆಯುವಂತಾಯಿತು. 12 ನೇ ತರಗತಿ ತೇರ್ಗಡೆಯಾದ ಸರ್ಕಾರಿ ಕಾಲೇಜುಗಳ 25 ಸಾವಿರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ನೆರವಾಗುವಂತೆ ಉಚಿತವಾಗಿ ಕೋಚಿಂಗ್ ತರಗತಿ ಪ್ರಾರಂಭಿಸುತ್ತಿದ್ದು, ಮುಂದಿನ ವರ್ಷದಿಂದ ಇದನ್ನು 50 ಸಾವಿರ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗುವುದು ಎಂದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ನೀಗಿಸಲು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ತೆರೆಯಲಾಗುವುದು. ಕರ್ನಾಟಕದ ಒಂದು ಸಾವಿರ ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಿದ್ದು, 40 ಸಾವಿರ ಮಕ್ಕಳು ಸೇರ್ಪಡೆಯಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಅತ್ಯತ್ತಮ ಶಿಕಕ್ಷರು ಇದ್ದು, ಉತ್ತಮ ಸವಲತ್ತುಗಳನ್ನು ಕಲ್ಪಿಸಲಾಗಿದೆ.ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಸಂಸದ ಶ್ರೇಯಸ್ ಪಟೇಲ್, ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎನ್. ಗಿರೀಶ್ ಮಾತನಾಡಿದರು. ಶಾಸಕ ಎ. ಮಂಜು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತಿ ಹೊಂದಿದ, ವರ್ಗಾವಣೆಗೊಂಡ ಶಿಕ್ಷಕರು ಹಾಗೂ ಉತ್ತಮ ಕ್ರೀಡಾ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಗೌರವಿಸಲಾಯಿತು. ಇದೇ ವೇಳೆ ನವೀಕೃತ ಗುರುಭವನವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮೊಟ್ಟೆ ವಿತರಿಸಿದರು.

ಪಪಂ ಅಧ್ಯಕ್ಷ ಎಸ್.ಎಸ್.ಪ್ರದೀಪ್ ಕುಮಾರ್, ತಹಸೀಲ್ದಾರ್ ಸೌಮ್ಯಾ, ಜಿಪಂ ಉಪಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕ ಮಹಾಲಿಂಗಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ.ಪಾಂಡು, ಡಯಟ್ ಪ್ರಾಂಶುಪಾಲ ಜಿ.ರಂಗನಾಥಸ್ವಾಮಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್ ಟಾಕಪ್ಪ ಶಿಗ್ಗಾಂವಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಪ, ಜಿಲ್ಲಾ ಪ್ರೌಢಶಾಲಾ ಸಂಘದ ಅಧ್ಯಕ್ಷ ಎಚ್.ಸಿ.ಬಸವರಾಜ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಪಿ.ಶಿವಶಂಕರ್, ತಾಲೂಕು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜ್, ಸಂಘದ ಜಿ.ಸಿ. ಶಿವರಾಮೇಗೌಡ, ಕಾಂತರಾಜ್, ಸರಸ್ವತಿ, ಸಂಜೀವ್, ದೇವರಾಜ್, ಕುಮಾರ್ ಯೋಗರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net