

ಬ್ಯಾಕೋಡು: ಶರಾವತಿ ಕಣಿವೆಯ ಸಾಗರ ತಾಲೂಕಿನ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ.
ಈ ಶಾಲೆಯಲ್ಲಿ ಒಟ್ಟು 97 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಒಬ್ಬರು ಶಿಕ್ಷಕರು ಮಾತ್ರ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರು ಜನ ಅತಿಥಿ ಶಿಕ್ಷಕರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ನಾಲ್ಕನೇ ಅತಿಥಿ ಶಿಕ್ಷಕಿಯ ನೇಮಕಾತಿಯಲ್ಲಿ ಇಲಾಖಾ ನಿಯಮಾವಳಿಗಳನ್ನು ಗಾಳಿಗೆ ತೂರಿ ನೇಮಕಾತಿ ಪ್ರಕ್ರಿಯೆ ನಡೆಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇಲಾಖಾ ನಿಯಮಗಳ ಪ್ರಕಾರ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಪದವಿ ಮತ್ತು ಶಿಕ್ಷಕರ ತರಬೇತಿ ವ್ಯಾಸಂಗ ಮುಗಿಸಿರುವವರಿಗೆ ಮೊದಲ ಆದ್ಯತೆ ನೀಡಬೇಕು. ಈ ವಿದ್ಯಾರ್ಹತೆ ಹೊಂದಿದವರು ಇಲ್ಲದೆ ಹೋದ ಪಕ್ಷದಲ್ಲಿ ಬಿಎ ಪದವಿ ಪಡೆದವರು, ಬಳಿಕ ಪಿಯು, ನಂತರ ಎಸ್‌ಎಸ್‌ಎಲ್‌ಸಿ ಅಭ್ಯಾಸಿಸಿದವರನ್ನು ನೇಮಕ ಮಾಡಿಕೊಳ್ಳಬಹುದು. ಆದರೆ ಇಲ್ಲಿ ಈಗಾಗಲೇ ಶಿಕ್ಷಕ ವೃತ್ತಿಯಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಡಿಇಡಿ ಪದವೀಧರೆ ಲಭ್ಯವಿದ್ದರೂ ಆಕೆಯನ್ನು ಕೈಬಿಟ್ಟು ಬಿಎ ಪದವಿ ಪಡೆದವರನ್ನು ನೇಮಕ ಮಾಡಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಅತಿಥಿ ಶಿಕ್ಷಕ ಹುದ್ದೆ ಎಚ್.ಪಿ.ಸುಮಿತ್ರಾ ಎಂಬುವರು ಲಿಖಿತವಾಗಿ ದೂರು ದಾಖಲಿಸಿದ್ದು ಬಿಇಒ ಸೂಚನೆ ಮೇರೆಗೆ ಇಲಾಖಾ ಅಧಿಕಾರಿಗಳ ತಂಡ ಗುರುವಾರ ಬ್ಯಾಕೋಡು ಶಾಲೆಗೆ ಆಗಮಿಸಿ ನೇಮಕಾತಿ ಕಡತಗಳನ್ನು ಪರಿಶೀಲಿಸಿದರು.
ಈ ನಡುವೆ ಈ ಪ್ರಕರಣದ ನೇಮಕಾತಿ ಪ್ರಕ್ರಿಯೆಯಲ್ಲಿ ನಿರ್ವಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಶಾಲೆ ಮುಖ್ಯಶಿಕ್ಷಕರು ನಿಯಮಗಳನ್ನು ಗಾಳಿಗೆ ತೂರಿ ಸ್ವಜನ ಪಕ್ಷಪಾತ ಎಸಗಿರುವ ಆರೋಪ ಕೇಳಿ ಬಂದಿದೆ.
ಬ್ಯಾಕೋಡು ಶಾಲೆಯ ಅತಿಥಿ ಶಿಕ್ಷಕ ನೇಮಕಾತಿ ವಿಚಾರ ಈಗಾಗಲೇ ನನ್ನ ಗಮನಕ್ಕೆ ಬಂದಿದ್ದು ನಿಯಮಾವಳಿ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ನೆಡೆಸಲು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗುವುದು. ಬಿಇಒ ಪರಮೇಶ್ವರ ತಿಳಿಸಿದ್ದಾರೆ.