ಸರ್ಕಾರಿ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕ

24spt1
ಸೋಮವಾರಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲಿಸಿದರು. ಡಾ.ಮಂತರ್‌ಗೌಡ, ಸತೀಶ್‌ಕುಮಾರ್, ಇಂದೂಧರ್ ಇದ್ದರು.
Published on

ಸೋಮವಾರಪೇಟೆ: ಮುಂದಿನ ಎರಡು ತಿಂಗಳೊಳಗೆ ಸೋಮವಾರಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಖಾಲಿಯಿರುವ ಹುದ್ದೆಗಳಿಗೆ ತಜ್ಞ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಡಿಎಚ್‌ಒ ಸತೀಶ್‌ಕುಮಾರ್, ತಾಲೂಕು ವೈದ್ಯಾಧಿಕಾರಿ ಇಂದೂಧರ್ ಅವರಿಂದ ಮಾಹಿತಿ ಪಡೆದುಕೊಂಡರು. ಅತಿ ಹೆಚ್ಚು ರೋಗಿಗಳು ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ತಜ್ಞ ವೈದ್ಯರ ಸೌಲಭ್ಯ ಸಿಕ್ಕರೆ, ಎಲ್ಲ ರೀತಿಯ ಚಿಕಿತ್ಸೆಗಳನ್ನು ನೀಡಬಹುದು ಎಂದು ಡಿಎಚ್‌ಒ ಸಚಿವರ ಗಮನಕ್ಕೆ ತಂದರು.

ಶಸ್ತ್ರಚಿಕಿತ್ಸಕರು, ಮೂಳೆ ತಜ್ಞರು, ಅರಿವಳಿಕೆ ತಜ್ಞರು, ರೇಡಿಯಾಲಜಿಸ್ಟ್ ಗೈನಾಕಾಲಜಿಸ್ಟ್ ಕಾಯಂ ಆಗಿದ್ದರೆ ಎಲ್ಲ ಚಿಕಿತ್ಸೆಗಳನ್ನು ನೀಡಬಹುದು. ಈ ಹುದ್ದೆಗಳನ್ನು ಭರ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಡಯಾಲಿಸಿಸ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಬೆಡ್‌ಗಳ ಅವಶ್ಯಕತೆಯಿದ್ದರೆ ಇಲಾಖೆಯಿಂದ ಅನುದಾನ ಒದಗಿಸಲಾಗುವುದು. ಆಸ್ಪತ್ರೆ ರಿಪೇರಿ ಕೆಲಸಕ್ಕೆ 1.70 ಕೋಟಿ ರೂ. ಅನುದಾನ ನೀಡುತ್ತೇವೆ. ಅಪರೇಷನ್ ಥಿಯೇಟರ್ ಉನ್ನತೀಕರಣ ಕೈಗೊಳ್ಳಲಾಗುವುದು. ಲ್ಯಾಬ್‌ಟೆಸ್ಟ್ ನಡೆಯುತ್ತಿದೆ. ಜೌಷಧ ಸರಬರಾಜು ಉತ್ತಮವಾಗಿದೆ ಎಂದು ಸಚಿವರು ಹೇಳಿದರು.

ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. 1.25 ಲಕ್ಷ ರೂ.ಸಂಬಳ ನೀಡಲಾಗುತ್ತಿದೆ. ಆದರೂ ಗ್ರಾಮೀಣ ಆಸ್ಪತ್ರೆಗಳಿಗೆ ವೈದ್ಯರು ಬರುತ್ತಿಲ್ಲ. ಸರ್ಕಾರದೊಂದಿಗೆ ಚರ್ಚಿಸಿ ಸಂಬಳ ಹೆಚ್ಚು ಮಾಡುವ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಡಯಾಲೀಸಸ್‌ಗೆ ಬೇಡಿಕೆ ಇದೆ. ಗೋಣಿಕೊಪ್ಪದಲ್ಲಿ ಡಯಾಲೀಸಸ್ ಘಟಕ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ಅರಿವಳಿಗೆ ತಜ್ಞರು ಆಗಮಿಸಿದ ತಕ್ಷಣ ಸಾಧ್ಯವಾಗುವ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯಲ್ಲಿ ನಿರ್ವಹಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಮಂಜುಳಾ ಅವರಿಗೆ ಶಾಸಕ ಡಾ.ಮಂತರ್‌ಗೌಡ ಹೇಳಿದರು.

ವಿಶೇಷ ವರದಿ ಪ್ರಕಟವಾಗಿತ್ತು: ಜೂ.11ರಂದು ವಿಜಯವಾಣಿಯಲ್ಲಿ ಪ್ರಕಟವಾದ ಸುಸಜ್ಜಿತ ಆಸ್ಪತ್ರೆಗಿಲ್ಲ ವೈದ್ಯರು! ಎಲ್ಲ ಸವಲತ್ತುಗಳಿದ್ದರೂ ಚಿಕಿತ್ಸೆ ನೀಡಲು ತಜ್ಞರ ಕೊರತೆ ಎಂಬ ತಲೆ ಬರಹದಡಿ ವಿಶೇಷ ವರದಿ ಪ್ರಕಟವಾಗಿತ್ತು. ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅವರು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ತಜ್ಞ ವೈದ್ಯರ ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರಿಗೆ ಅನನುಕೂಲವಾಗುತ್ತಿದ್ದು, ಕೂಡಲೇ ತಜ್ಞ ವೈದ್ಯರನ್ನು ನೇಮಿಸುವಂತೆ ಮನವಿ ಮಾಡಿಕೊಂಡಿದ್ದರು. ಹಾಗಾಗಿ ತಾತ್ಕಾಲಿಕವಾಗಿ ತಲಾ ಮೂವರು ವೈದ್ಯರ ನೇಮಕಕ್ಕೆ ಆದೇಶ ಹೊರಡಿಸಿದ್ದಾರೆ. ಸೋಮವಾರ ಸೋಮವಾರಪೇಟೆ ಆಸ್ಪತ್ರೆಗೆ ಖುದ್ದು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net