

ಉಡುಪಿ: ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಅರೆಕಾಲಿಕ ಕಾನೂನು ಸ್ವಯಂಸೇವಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್ 3ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿ 50 ಮಂದಿ, ತಾಲೂಕು ಕೇಂದ್ರಗಳಲ್ಲಿ 25 ಮಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರುವ ಸೇವಾ ಮನೋಭಾವ ಹೊಂದಿರುವವರನ್ನು ಆಯ್ಕೆ ಮಾಡಲಾಗುತ್ತದೆ. ನಿವೃತ್ತ ಅಧ್ಯಾಪಕರು, ಸರ್ಕಾರಿ ನೌಕರರು, ವೈದ್ಯರು, ನಿವೃತ್ತ ಸೈನಿಕರು, ಕಾನೂನು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ತರಬೇತಿ ನೀಡಲು 2 ಖಾಸಗಿ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಹಳ್ಳಿಯಲ್ಲಿ ಸರ್ಕಾರಿ ಯೋಜನೆಗಳನ್ನು ಪ್ರಚಾರ ಮಾಡುವುದು, ಜನರಿಗೆ ಕಾನೂನು ಅರಿವು ಮೂಡಿಸುವುದು, ಅಶಕ್ತರಿಗೆ ಕಾನೂನು ನೆರವು ಒದಗಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಸ್ವಯಂಸೇವಕರನ್ನು 1 ವರ್ಷದ ಅವಧಿಗೆ ಆಯ್ಕೆಮಾಡಲಾಗುತ್ತಿದ್ದು, ಪ್ರತೊಯೊಬ್ಬರಿಗೂ ಗುರುತಿನ ಚೀಟಿ ನೀಡಲಾಗುವುದು. ಜಿಲ್ಲಾಮಟ್ಟದಲ್ಲಿ 3 ಮಂದಿಯ ಸಮಿತಿ ಅಸ್ತಿತ್ವಕ್ಕೆ ಬರಲಿದ್ದು, ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಅಧ್ಯಕ್ಷರಿಂದ ನೇಮಿಸಲ್ಪಟ್ಟ ವ್ಯಕ್ತಿ ಸದಸ್ಯರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.