

ಬೆಂಗಳೂರು: ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬಜೆಟ್ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ 10 ಸಾವಿರ ಶಾಲಾ ಶಿಕ್ಷಕರ ನೇಮಕವೂ ಸೇರಿ ಐದು ಪ್ರಮುಖ ಪ್ರಸ್ತಾವನೆ ಮಂಡಿಸಲು ಶಿಕ್ಷಣ ಇಲಾಖೆ ತೀರ್ವನಿಸಿದೆ.
ಶಿಕ್ಷಣ ಸಚಿವ ಸುರೇಶ್ಕುಮಾರ್ ಶುಕ್ರವಾರ ಇಲಾಖಾ ಅಧಿಕಾರಿಗಳೊಂದಿಗೆ ನಡೆಸಿದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಒಟ್ಟು 10 ಸಾವಿರ ಶಿಕ್ಷಕರ ನೇಮಕಾತಿ, ಸಾವಿರ ಶಾಲೆಗಳನ್ನು ಉಭಯ ಮಾಧ್ಯಮ ಶಾಲೆಗಳಲ್ಲಿ ಬದಲಾಯಿಸುವುದು, ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಳ್ಳಲು ರಾಜ್ಯ ಶಾಲಾ ಶಿಕ್ಷಣ ಆಯೋಗ ಸ್ಥಾಪನೆ, 1995ರಿಂದ 2000ರವರೆಗೆ ಪ್ರಾರಂಭಗೊಂಡ ಕನ್ನಡ ಮಾಧ್ಯಮದ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಹಾಗೂ 5ರಿಂದ 12ನೇ ತರಗತಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪಂಚಾಯಿತಿ/ವಾರ್ಡ್ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲು ಇಲಾಖೇ ಸಿದ್ಧತೆ ಮಾಡಿಕೊಂಡಿದೆ.