

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಪಳೆಯಂಡ ರಾಬಿನ್ ದೇವಯ್ಯ ನೇಮಕಗೊಂಡು ಜೂನ್ 12ಕ್ಕೆ ಬರೋಬರಿ 6 ತಿಂಗಳಾಗುತ್ತದೆ. ಮೂವರು ಪ್ರಧಾನ ಕಾರ್ಯದರ್ಶಿ ಹೊರತುಪಡಿಸಿದಂತೆ ಯಾವ ಪದಾಧಿಕಾರಿ ಹುದ್ದೆಗೂ ನೇಮಕವಾಗಿಲ್ಲ. ಇದಕ್ಕೆ ಲಾಕ್‌ಡೌನ್ ನೆಪ ಮುಂದಿಡಲಾಗುತ್ತಿದೆಯಾದರೂ ಮೂಲ ಕಾರಣ ಶಾಸಕರ ಪರ-ವಿರುದ್ಧದ ಒಳಗಿನ ಬೇಗುದಿ ಎನ್ನುವ ಮಾತು ಕೇಳಿಬಂದಿದೆ.
ಸಂಘ ಪರಿವಾರದ ವರಿಷ್ಠರ ಅಣತಿಯಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ಮಂಡಲ ಅಧ್ಯಕ್ಷರ ನೇಮಕಾತಿ ನಡೆದಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೂ ನೇಮಕ ಮಾಡುವ ಸಂದರ್ಭ ಪರಿವಾರದ ನಾಯಕರ ಮಾತಿಗೆ ಮನ್ನಣೆ ನೀಡಲಾಗಿದೆ. ತಾವು ಹೇಳಿದವರು ಜಿಲ್ಲಾಧ್ಯಕ್ಷ/ಮಂಡಲ ಅಧ್ಯಕ್ಷರಾಗದಿರುವುದಕ್ಕೆ ಶಾಸಕರು ಒಳಗೊಳಗೆ ಕುದಿಯುತ್ತಿದ್ದಾರೆ. ತಮ್ಮ ವಿರೋಧಿಗಳು ಪದಾಧಿಕಾರಿಗಳಾಗದಂತೆ ಮತ್ತು ತಮ್ಮ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಮಾನ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.
ತಮ್ಮ ಒಪ್ಪಿಗೆ ಇಲ್ಲದ ವ್ಯಕ್ತಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿರುವುದು ಶಾಸಕರಿಗೆ ಅಸಮಾಧಾನ ತರಿಸಿದೆ. ಆದರೆ, ಪರಿವಾರದ ನಾಯಕರ ಮಾತಿಗೆ ಮನ್ನಣೆ ನೀಡಿ, ಬಿಜೆಪಿ ವರಿಷ್ಠರು ಮಾಡಿರುವ ನೇಮಕಾತಿಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಆದರೆ, ಒಳಗೊಳಗೆ ತಮ್ಮ ರಾಜಕೀಯ ತಂತ್ರಗಾರಿಕೆ ಮುಂದುವರಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಮೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಪಂಡ ರವಿ ಕಾಳಪ್ಪ, ಕುಂಞಂಡ ಅರುಣ್ ಭೀಮಯ್ಯ, ಹುಲ್ಲೂರುಕೊಪ್ಪ ಮಾದಪ್ಪ ನೇಮಕಗೊಂಡಿದ್ದಾರೆ. ಈ ಪೈಕಿ ರವಿ ಕಾಳಪ್ಪ, ಅರುಣ್ ಭೀಮಯ್ಯ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯೂ ಮಹತ್ವದಾಗಿದೆ.
ಜಿಲ್ಲಾಧ್ಯಕ್ಷ ಕಡೆಗಣನೆ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿರ್ಮಾಣವಾದ ಪ್ರತಿಕೂಲ ಪರಿಸ್ಥಿತಿಯಿಂದ ಸಾಕಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಜನರಿಗೆ ನೆರವು ಒದಗಿಸಿದ್ದಾರೆ. ಆಹಾರ ಕಿಟ್ ವಿತರಣೆ ಸಂದರ್ಭದಲ್ಲಿ ಎಲ್ಲಿಯೂ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಕಾಣಿಸಿಕೊಂಡಿಲ್ಲ. ರಾಬಿನ್ ಕಾಣಿಸಿಕೊಂಡಿಲ್ಲ ಎನ್ನುವುದಕ್ಕಿಂತ ಶಾಸಕರು ತಮ್ಮ ಹತ್ತಿರಕ್ಕೆ ಸೇರಿಸಿಕೊಂಡಿಲ್ಲ ಎಂಬ ಮಾತು ಬಿಜೆಪಿ ಪಾಳೆಯದಲ್ಲಿ ಕೇಳಿ ಬರುತ್ತಿದೆ. ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಅಧ್ಯಕ್ಷ ಡಾ.ಬಿ.ಸಿ. ನವೀನ್‌ಕುಮಾರ್ ಅವರೊಂದಿಗೆ ಜಿಲ್ಲಾಧ್ಯಕ್ಷರು ಜಿಲ್ಲೆಯ ವಿವಿಧೆಡೆಗೆ ತೆರಳಿ ಜನಪರ ಕಾರ್ಯನಿರ್ವಹಿಸಿದ್ದಾರೆ.
ಶಾಸಕರ ಅಡೆತಡೆ: ಸ್ವಪಕ್ಷದಲ್ಲಿರುವ ತಮ್ಮ ರಾಜಕೀಯ ವಿರೋಧಿಗಳೆಂದು ಗುರುತಿಸಿಕೊಂಡಿರುವ ಡಿ.ಬಿ.ಧರ್ಮಪ್ಪ, ಯಂಕಪ್ಪ ಪೂಜಾರಿ ಮೋಹನ್‌ದಾಸ್, ಬಿ.ಜೆ.ದೀಪಕ್, ರೂಪಾಸತೀಶ್, ಜಿ.ಎಲ್.ನಾಗರಾಜ್, ಸಿ.ಪಿ. ಗೋಪಾಲ್ ಅವರಿಗೆ ಜಿಲ್ಲಾ ಮಟ್ಟದಲ್ಲಿ ಸ್ಥಾನಮಾನ ಸಿಗದಂತೆ ನೋಡಿಕೊಳ್ಳುವ ಕೆಲಸಕ್ಕೆ ಶಾಸಕರು ಕೈಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದವರಿಗೆ ಪಕ್ಷದಲ್ಲಿ ಹುದ್ದೆ ನೀಡಬಾರದೆಂಬ ಪಟ್ಟು ಹಿಡಿದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಶಾಸಕರ ವಿರೋಧಿ ಪಾಳೆಯದಲ್ಲಿರುವ ಹುಲ್ಲೂರುಕೊಪ್ಪ ಮಾದಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಅವರೊಂದಿಗೆ ಗುರುತಿಸಿಕೊಂಡಿರುವವರಿಗೂ ಜಿಲ್ಲಾ/ಮಂಡಲದಲ್ಲಿ ಸ್ಥಾನಮಾನ ಸಿಗುವ ಆಶಾಭಾವನೆ ಮೂಡಿಸಿದೆ. ಇದು ಶಾಸಕರ ಪರ-ವಿರುದ್ಧದ ಚರ್ಚೆಗೆ ಗ್ರಾಸ ಒದಗಿಸಿದೆ.
ಶಾಸಕರ ವಿರೋಧದೊಂದಿಗೆ ಪಕ್ಷದಲ್ಲಿ ಸ್ಥಾನಮಾನ ಪಡೆಯಲು ಶಾಸಕರ ವಿರೋಧಿಗಳು ಹಾತೊರೆಯುತ್ತಿದ್ದಾರೆ. ಆ ಮೂಲಕ ಶಾಸಕರಿಗೆ ರಾಜಕೀಯ ಮುಳ್ಳಾಗುವ ಸಂಕಲ್ಪ ತೊಟ್ಟಿದ್ದಾರೆ. ತಮ್ಮ ಬೆಂಬಲಿಗರು ಜಿಲ್ಲೆ ಮತ್ತು ಮಂಡಲದಲ್ಲಿ ಸ್ಥಾನಮಾನ ಪಡೆಯಲು ಶಾಸಕರು ಕಾರ್ಯೋನ್ಮುಖರಾಗಿದ್ದಾರೆ.
ತಾವು ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಆರೋಪ ಮಾಡಲಾಗುತ್ತದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಜಿ.ಮೇದಪ್ಪ ವಿರುದ್ಧ ಶಾಸಕರೇ ಕಾರ್ಯನಿರ್ವಹಿಸಿದ್ದರು. ಅವರ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ತಮ್ಮ ಚುನಾವಣೆ ಬಗ್ಗೆ ಮಾತ್ರ ಶಾಸಕರು ಗಮನ ಹರಿಸುತ್ತಾರೆ. ಉಳಿದಂತೆ ಇತರೆ ಚುನಾವಣೆ ಬಗ್ಗೆ ಏಕೆ ಆಸಕ್ತಿ ತೋರುವುದಿಲ್ಲ ಎಂದು ಸ್ವಪಕ್ಷೀಯ ರಾಜಕೀಯ ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ.
ಸ್ಥಾನಮಾನಕ್ಕೆ ಒತ್ತಡ: ಮಹಿಳಾ ಮೋರ್ಚಾ, ಕೃಷಿ ಮೋರ್ಚಾ, ಯುವ ಮೋರ್ಚಾ ಎಸ್ಸಿ- ಎಸ್ಟಿ ಮೋರ್ಚಾ, ವಕ್ತಾರ ಹುದ್ದೆಗಳಿಗೆ ಆಕಾಂಕ್ಷಿಗಳು ಒತ್ತಡ ಹೇರುತ್ತಿದ್ದಾರೆ. ಜಿಲ್ಲಾ/ ಮಂಡಲದಲ್ಲಿಯೂ ಸ್ಥಾನಮಾನ ಪಡೆಯಲು ತಮ್ಮ ನಾಯಕರ ಮೂಲಕ ಸಾಕಷ್ಟು ಮುಖಂಡರು ಲಾಬಿ ನಡೆಸಲಾರಂಭಿಸಿದ್ದಾರೆ. ಶಾಸಕರು, ಜಿಲ್ಲಾಧ್ಯಕ್ಷ, ಮಂಡಲ ಅಧ್ಯಕ್ಷರು, ಹಿರಿಯ ಮುಖಂಡರ ಮೂಲಕ ತಮ್ಮ ಇಷ್ಟದ ಹುದ್ದೆ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಕೇಂದ್ರ-ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಪಕ್ಷದಲ್ಲಿ ಹುದ್ದೆ ಅಲಂಕರಿಸುವುದು ಪ್ರತಿಷ್ಠೆಯ ವಿಚಾರ ಎಂದು ಹಲವು ಆಕಾಂಕ್ಷಿಗಳು ಮುಕ್ತವಾಗಿ ಹೇಳುತ್ತಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ನೇಮಕಾತಿಯಲ್ಲಿ ವಿಳಂಬವಾಗಿದೆ. ಜೂನ್ ಅಂತ್ಯದೊಳಗೆ ಪದಾಧಿಕಾರಿಗಳ ನೇಮಕಾತಿ ಪೂರ್ಣಗೊಳ್ಳಲಿದೆ. ಮಂಡಲ ಮಾಡುವ ಶಿಫಾರಸ್ಸು, ಪಕ್ಷದ ಸಂಘಟನೆಗಾಗಿ ದುಡಿಯುತ್ತಿರುವವರನ್ನು ಗಮನದಲ್ಲಿಟ್ಟುಕೊಂಡು ಹೊಸ ಪದಾಧಿಕಾರಿಗಳ ನೇಮಕಾತಿ ಮಾಡಲಾಗುವುದು.
ಪಳೆಯಂಡ ರಾಬಿನ್ ದೇವಯ್ಯ ಜಿಲ್ಲಾಧ್ಯಕ್ಷ, ಬಿಜೆಪಿ
ಜೂ.4 ರೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ವರಿಷ್ಠರು ಸೂಚನೆ ನೀಡಿದ್ದಾರೆ. ಶಾಸಕರೊಂದಿಗೆ ಚರ್ಚಿಸಿ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ವರಿಷ್ಠರ ಒಪ್ಪಿಗೆ ಪಡೆದು ಬಹಿರಂಗ ಪಡಿಸಲಾಗುವುದು.
>ನೆಲ್ಲೀರ ಚಲನ್ ಅಧ್ಯಕ್ಷ, ವಿರಾಜಪೇಟೆ ಮಂಡಲ