ಬುಡುಬುಡಕೆಯವನ ಮಾತು ಕೇಳಿ ಪಾಳುಬಾವಿಗೆ ಬೆಂಕಿ ಇಟ್ಟ: ಮುಂದೇನಾಯ್ತು ನೋಡಿ..!

21 Nela ph 02 Well fire Blast
Published on

ನೆಲಮಂಗಲ: ಪಾಳುಬಾವಿಗೆ ಬೆಂಕಿ ಹಾಕಿದಾಗ ಉಂಟಾಗಿದ್ದ ಸ್ಫೋಟದಲ್ಲಿ ಗಾಯಗೊಂಡಿದ್ದ ಶಿವಶಂಕರ್ (35) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಅವರು, ಬುಧವಾರ ಬೆಳಗ್ಗೆ ಮನೆಗೆ ತೆರಳಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬೆಂಗಳೂರು ಉತ್ತರ ತಾಲೂಕು ಹುಸ್ಕೂರು ಗ್ರಾಮ ಮೂಲದ ಗುಬ್ಬಣ್ಣಸ್ವಾಮಿ ಮತ್ತು ಅವರ ಮಗ ಶಿವಶಂಕರ್ ನೆಲಮಂಗಲದ ಸುಭಾಷ್ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಏಳೆಂಟು ವರ್ಷಗಳ ಹಿಂದೆ ಈ ಮನೆಗೆ ಬಂದಾಗಿನಿಂದಲೂ ಇವರ ಮನೆಯಲ್ಲಿ ಏನಾದರೂ ಒಂದು ಅಹಿತಕರ ಘಟನೆಗಳು ಸಂಭವಿಸುತ್ತಲೇ ಇತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಮನೆಯ ಬಳಿ ಬಂದಿದ್ದ ಬುಡಬುಡಕೆಯವನಲ್ಲಿ ಕಷ್ಟ ಹೇಳಿಕೊಂಡಿದ್ದರು.

ಇದಕ್ಕೆ ಬುಡಬುಡಕೆಯವನು, ಮನೆಯ ಹಿಂಬದಿಯಲ್ಲಿ ಪಾಳುಬಾವಿ ಇದೆ. ಆ ಬಾವಿಯಲ್ಲಿ ಯಾರೋ ಮಾಟ ಮಾಡಿಸಿ ಹಾಕಿದ್ದಾರೆ. ಅದನ್ನು ಸುಟ್ಟರೆ ಕಷ್ಟವೆಲ್ಲ ಪರಿಹಾರವಾಗುತ್ತದೆ ಎಂದು ಹೇಳಿದ್ದ.

ಈತನ ಮಾತು ಕೇಳಿಕೊಂಡು ಗುಬ್ಬಣ್ಣಸ್ವಾಮಿ ಮತ್ತು ಅವರ ಪುತ್ರ ಶಿವಶಂಕರ್, ಗೋಣಿ ಚೀಲದಲ್ಲಿ ಕಸ ತುಂಬಿ ಅದಕ್ಕೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಬಾವಿಯೊಳಗೆ ಎಸೆದಿದ್ದರು. ಆದರೆ, ಪಾಳು ಬಾವಿಯಲ್ಲಿ ಈ ಹಿಂದೆ ಎಸೆದಿದ್ದ ಎಣ್ಣೆ, ಆಯಿಲ್ ಕ್ಯಾನ್‌ಗಳಿಗೆ ಬೆಂಕಿ ಹತ್ತುತ್ತಲೇ ಬಾವಿಯೊಳಗೆ ಒತ್ತಡ ನಿರ್ಮಾಣವಾಗಿ ಹಠಾತ್ ಸ್ಫೋಟವಾಗಿದೆ. ಇದರಿಂದ ಬಾವಿಯ ಕಲ್ಲುಗಳು ಮತ್ತು ಕಟ್ಟೆಯೂ ಸಿಡಿದಿದೆ. ಈ ವೇಳೆ ಬೆಂಕಿ ಶಿವಶಂಕರ್ ಹಾಗೂ ಇಬ್ಬರು ಮಕ್ಕಳಿಗೆ ತಗುಲಿ ಗಾಯಗಳಾಗಿದ್ದವು ಎನ್ನಲಾಗಿದೆ.

ಶಿವಶಂಕರ್‌ಗೆ ಸ್ಪಲ್ಪ ಹೆಚ್ಚಿನ ಏಟಾಗಿದ್ದರೂ, ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬಾವಿಗೆ ಹಾಕಿದ್ದ ಬೆಂಕಿ ನಂದಿಸಿದರು. ನೆಲಮಂಗಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೃತ್ತನಿರೀಕ್ಷಕ ಶಿವಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net