

ಬೆಳಗಾವಿ: ರಾಜ್ಯಾದ್ಯಂತ ಬಹುತೇಕ ಕಲ್ಲುಗಣಿಗಳು ನಿಯಮ ಮೀರಿ ಕಾರ್ಯ ನಿರ್ವಹಿಸುತ್ತಿದ್ದು, 6 ಸಾವಿರ ಕೋಟಿ ರೂ. ದಂಡ ಬಾಕಿ ಉಳಿಸಿಕೊಂಡಿವೆ. ಶೀಘ್ರದಲ್ಲಿ ಬಾಕಿ ದಂಡ ವಸೂಲಿ ಮಾಡಲಾಗುವುದು ಹಾಗೂ ಸಕ್ರಮ ಕಲ್ಲು ಗಣಿಗಾರಿಕೆಗಳಿಗೆ ಕಾನೂನು ಪಾರದರ್ಶಕತೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕೋಲಾರದಲ್ಲಿ ಎಷ್ಟು ಅಕ್ರಮ ಕಲ್ಲು ಗಣಿಗಾರಿಕೆಗಳಿವೆ? ಇವುಗಳಿಂದ ಸಂಗ್ರಹಿಸಿದ ದಂಡದ ಮೊತ್ತ ಎಷ್ಟು? ಎಂದು ವಿಧಾನ ಪರಿಷತ್ನಲ್ಲಿ ಬಿಜೆಪಿಯ ನಾರಾಯಸ್ವಾಮಿ ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕೋಲಾರದಲ್ಲಿ ಒಟ್ಟು 85 ಕಡೆಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆದರೆ, ಇಲ್ಲಿ ಗಣಿಗಾರಿಕೆ ನಡೆಸುತ್ತಿರುವವರೆಲ್ಲರೂ ದಲಿತ ಸಮಾಜಕ್ಕೆ ಸೇರಿದವರು ಮತ್ತು ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ನಡೆಸುವವರಲ್ಲ ಕಳೆದ 50 ವರ್ಷಗಳಿಂದ ಆ ಭಾಗದಲ್ಲಿ ಬಂಡೆ, ಚಪ್ಪಡಿ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸದ ಬಗ್ಗೆ ತಕ್ಷಣಕ್ಕೆ ಮತ್ತೇನನೊ್ನೕ ಅರ್ಥೈಸುವುದು ಬೇಡ ಎಂದರು.
ಕೋಲಾರದಲ್ಲಿ ಎಲ್ಲಾ ಕಲ್ಲು ಗಣಿಗಾರಿಕೆಗಳಲ್ಲೂ ಸರ್ಕಾರದಿಂದ ಪರವಾನಗಿ ಪಡೆದಿರುವುದಕ್ಕಿಂತ ಹೆಚ್ಚುವರಿಯಾಗಿ ಗಣಿಗಾರಿಕೆ ನಡೆಸಲಾಗಿದೆ. ಹೀಗಾಗಿ 12 ಕೋಟಿ ರೂ. ದಂಡ ವಿಧಿಸಲಾಗಿದೆ. ಇದಲ್ಲದೇ ರಾಜ್ಯದ ಬಹುತೇಕ ಕಡೆಗಳಲ್ಲಿ ನಿಯಮ ಮೀರಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಅಧೀಕೃತ ಪರವಾನಗಿ ಇಲ್ಲದೇ ಕಲ್ಲು ಸಾಗಾಣೆಕೆ ಮಾಡಿದ ಆರೋಪದ ಮೇಲೆ 485 ಪ್ರಕರಣಗಳನ್ನು ದಾಖಲಿಸಿದ್ದು, 2060 ಕೋಟಿ ರೂ. ದಂಡ ವಿಧಿಸಲಾಗಿದೆ. ಈವರೆಗೆ ಒಟ್ಟಾರೆಯಾಗಿ ಅಕ್ರಮ ಕಲ್ಲು ಗಣಿಗಳಿಂದ ರಾಜ್ಯಕ್ಕೆ 6 ಸಾವಿರ ಕೋಟಿ ರೂ. ದಂಡ ಬಾಕಿ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಹಿಂದಿನ ಸರ್ಕಾರಗಳು ಜನರಿಗೆ ಜಲ್ಲಿ ಮತ್ತು ಕಲ್ಲು ಅಗತ್ಯ ಇದೆ ಎಂಬಕಾರಣಕ್ಕೆ ದಂಡ ವಸೂಲಿಗೆ ಕಠಿಣಕ್ರಮತೆಗೆದುಕೊಂಡಿರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಇಂತಹ ಬಾಕಿ ಹಣ ವಸೂಲಾತಿಗೆ ಕ್ರಮತೆಗೆದುಕೊಳ್ಳುವ ಸಂಬಂಧ ಈವರೆಗೆ ಎರಡು ಬಾರಿ ಕ್ಯಾಬಿನೆಟ್ ಉಪ ಸಮಿತಿ ಸಭೆ ನಡೆಸಿದೆ ಎಂದರು. ಈ ಸಭೆಯಲ್ಲಿ ಅಕ್ರಮಕಲ್ಲು ಗಣಿಗಾರಿಕೆ ನಡೆಸುತ್ತಿರುವವರಿಗೆ ಒನ್ ಟೈಮ್ ಸೆಟ್ಲಮೆಂಟ್ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಪರವಾನಗಿ ಪಡೆದ ಕ್ವಾರಿ ಜಾಗದಲ್ಲಿ ಗಣಿಗಾರಿಕೆ ನಡೆಸಿದರೆ 1:1 ರ ಅನುಪಾತ ಹಾಗೂ ಪರವಾನಗಿ ಪ್ರದೇಶ ಮಿರಿ ಒತ್ತುವರಿ ಜಾಗದಲ್ಲಿ ಗಣಿಗಾರಿಕೆ ನಡೆಸಿದ್ದರೆ 1:2ರ ಅನುಪಾತದಲ್ಲಿ ದಂಡ ವಿಧಿಸುವ ತೀರ್ಮಾನ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.